ಲಿಂಗಸುಗೂರು: ಸರ್ಕಾರದ ಯೋಜನೆಗಳು ನಿಯಮಾನುಸಾರ ಗ್ರಾಮೀಣ ಪ್ರದೇಶಕ್ಕೆ ಸಮರ್ಪಕವಾಗಿ ತಲುಪುತ್ತಿಲ್ಲ ಎಂಬುದಕ್ಕೆ ತಾಲ್ಲೂಕಿನ ಹಿರೇಉಪ್ಪೇರಿ ಗ್ರಾಮ ಸಾಕ್ಷಿಯಾಗಿದೆ.
ತಾಲ್ಲೂಕು ಕೇಂದ್ರದಿಂದ ಕೇವಲ 17 ಕಿ.ಮೀ ದೂರದ ನಾರಾಯಣಪುರ ಅಣೆಕಟ್ಟೆ ಸಂಪರ್ಕಿಸುವ ಮುಖ್ಯ ರಸ್ತೆಗೆ ಹೊಂದಿಕೊಂಡ ಹಿರೇಉಪ್ಪೇರಿ ಗ್ರಾಮ ಗೊರೆಬಾಳ ಗ್ರಾಮ ಪಂಚಾಯಿತಿಗೆ ಒಳಪಟ್ಟಿದೆ. 150 ಮನೆಗಳಿದ್ದು, 1200ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಗ್ರಾಮದಿಂದ ಪಂಚಾಯಿತಿಗೆ ಇಬ್ಬರು ಸದಸ್ಯರು ಆಯ್ಕೆ ಆಗಿದ್ದಾರೆ.
ಕುಂಬಾರಿಕೆ, ಶಿಲ್ಪ ಕೆತ್ತನೆಗೆ ಹೆಸರು ಮಾಡಿದ ಕುಶಲಕರ್ಮಿಗಳ ಶ್ರೇಯೋಭಿವೃದ್ಧಿಗೂ ಕೈಗಾರಿಕ ಇಲಾಖೆ ಅಧಿಕಾರಿಗಳು ಗಮನ ಹರಿಸಿಲ್ಲ. ಹಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರಗಳ ಸೌಲಭ್ಯ ಹೊರತುಪಡಿಸಿ ಗ್ರಾಮ ಸುತ್ತಿ ಬಂದರು ಯಾವ ಸೌಲಭ್ಯಗಳು ಕಾಣಸಿಗುವುದಿಲ್ಲ. ಮಳೆಗಾಲದಲ್ಲಿ ಬಸಿನೀರಿಗೆ ಗ್ರಾಮಸ್ಥರು ತತ್ತರಿಸಿ ಹೋಗಿದ್ದಾರೆ.
ಒಂದೆರಡು ಕಡೆಗಳಲ್ಲಿ ಕಾಟಾಚಾರಕ್ಕೆಂಬಂತೆ ಸಿಸಿ ರಸ್ತೆಗಳನ್ನು ನಿರ್ಮಿಸಲಾಗಿದೆ. ಉಳಿದಂತೆ ಗ್ರಾಮದ ಯಾವುದೇ ರಸ್ತೆಗೆ ಇಳಿದರೂ ಕೆಸರಲ್ಲಿ ದಾಟಬೇಕು. ಚರಂಡಿಗಳನ್ನು ನಿರ್ಮಿಸಿಲ್ಲ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ.
ಆರೋಗ್ಯ, ಪಶು ಆಸ್ಪತ್ರೆ, ಗ್ರಂಥಾಲಯ ಸೇರಿದಂತೆ ಅಗತ್ಯ ಸೌಲಭ್ಯಗಳ ಕೊರತೆಯಿಂದ ಜನತೆ ಪರದಾಡುವಂತಾಗಿದೆ. ಬಯಲು ಶೌಚ ಮುಕ್ತ ಗ್ರಾಮದ ಕನಸು ಸಹ ಸಾಕಾರಗೊಂಡಿಲ್ಲ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಎರಡು ಪ್ರಮುಖ ರಸ್ತೆಗಳಲ್ಲೇ ತಿಪ್ಪೆಗುಂಡಿ ಹಾಕಿದ್ದು, ಶೌಚಾಲಯಗಳಾಗಿ ಮಾರ್ಪಟ್ಟಿವೆ.
ತಾಲ್ಲೂಕು ಆಡಳಿತದ ನಿರ್ಲಕ್ಷ್ಯಕ್ಕೆ ಒಳಪಟ್ಟಿರುವ ಗ್ರಾಮದ ಅಭಿವೃದ್ಧಿಗೆ ಸಾಕಷ್ಟು ಬಾರಿ ಸಂಬಂಧಿಸಿದ ಅಧಿಕಾರಿಗಳನ್ನು ಖುದ್ದು ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದೇವೆ. ಸರ್ಕಾರದ ಯಾವೊಂದು ಸೌಲಭ್ಯ ಕಲ್ಪಿಸಲು ಆಡಳಿತ ವ್ಯವಸ್ಥೆ ಮುಂದಾಗುತ್ತಿಲ್ಲ. ಮನವಿ ಮಾಡಿ ಬೇಸತ್ತು ಮೌನವಾಗಿದ್ದೇವೆ ಎಂದು ಹಿರಿಯ ಮುಖಂಡ ದೊಡ್ಡಬಸಪ್ಪ ಅಂಗಡಿ ಹೇಳಿದರು.
‘ಗ್ರಾಮಸ್ಥರು ಹಲವು ಬಾರಿ ಶಾಸಕರು, ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮಟ್ಟದಲ್ಲಿ ಹೋಗಿ ಭೇಟಿ ಆಗಿ ಬಂದರು ಸೌಲಭ್ಯ ಕಲ್ಪಿಸುವಲ್ಲಿ ತಾರತಮ್ಯನಡೆಯುತ್ತ ಬಂದಿದೆ. ಪುಟ್ಟ ಗ್ರಾಮವೊಂದರ ವಾರ್ಡ್ ರಸ್ತೆಗಳು ಕೆಸರುಗದ್ದೆಯಾಗಿ ಮಾರ್ಪಟ್ಟಿದ್ದರೂ ಸುಧಾರಣೆ ಮುಂದಾಗುತ್ತಿಲ್ಲ’ ಎಂದು ಶರಣಪ್ಪ ಚಿಗರಿ ಅಳಲು ತೋಡಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.