ADVERTISEMENT

ರಾಯಚೂರು: ಹಿಂದೂ ಮಹಾಗಣಪತಿಯ ಅದ್ದೂರಿ ಶೋಭಾಯಾತ್ರೆ

ಮೆರಗು ತಂದ ವಿವಿಧ ಕಲಾ ತಂಡಗಳು; ಕುಣಿದು ಕುಪ್ಪಣಿಸಿದ ಯುವಕರು; ರಾರಾಜಿಸಿದ ಕೇಸರಿ ಧ್ವಜಗಳು

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2025, 2:57 IST
Last Updated 7 ಸೆಪ್ಟೆಂಬರ್ 2025, 2:57 IST
ಸಿಂಧನೂರಿನ ಹಿಂದೂ ಮಹಾಗಣಪತಿ ಉತ್ಸವ ಸಮಿತಿಯಿಂದ ಪ್ರತಿಷ್ಠಾಪಿಸಿದ್ದ ಗಣಪತಿ ಮೂರ್ತಿಯ ಶೋಭಾಯಾತ್ರೆಯಲ್ಲಿ ಸಹಸ್ರಾರು ಯುವಕರು, ಸಾರ್ವಜನಿಕರು ಭಾಗವಹಿಸಿ ಕುಣಿದು ಕುಪ್ಪಣಿಸಿದರು
ಸಿಂಧನೂರಿನ ಹಿಂದೂ ಮಹಾಗಣಪತಿ ಉತ್ಸವ ಸಮಿತಿಯಿಂದ ಪ್ರತಿಷ್ಠಾಪಿಸಿದ್ದ ಗಣಪತಿ ಮೂರ್ತಿಯ ಶೋಭಾಯಾತ್ರೆಯಲ್ಲಿ ಸಹಸ್ರಾರು ಯುವಕರು, ಸಾರ್ವಜನಿಕರು ಭಾಗವಹಿಸಿ ಕುಣಿದು ಕುಪ್ಪಣಿಸಿದರು   

ಸಿಂಧನೂರು: ವಿಶ್ವ ಹಿಂದೂ ಪರಿಷತ್, ಭಜರಂಗ ದಳ ಹಾಗೂ ಹಿಂದೂ ಮಹಾಗಣಪತಿ ಉತ್ಸವ ಸಮಿತಿ ಆಶ್ರಯದಲ್ಲಿ ನಗರದ ವಾರ್ಡ್ ನಂ.19ರ ವೆಂಕಟೇಶ್ವರ ನಗರದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಮಹಾ ಗಣಪತಿಯನ್ನು 11ನೇ ದಿನವಾದ ಶನಿವಾರ ನಗರದ ಪ್ರಮುಖ ರಸ್ತೆಗಳಲ್ಲಿ ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ಶೋಭಾಯಾತ್ರೆ ಕೈಗೊಂಡು ವಿಸರ್ಜನೆ ಮಾಡಲಾಯಿತು.

ಬೆಳಿಗ್ಗೆ 11.30ರ ಸುಮಾರಿಗೆ ಕರಿಬಸವನಗರದ ರಂಭಾಪುರಿ ಶಾಖಾಖಾಸಾ ಮಠದ ಸೋಮನಾಥ ಶಿವಾಚಾರ್ಯ ಸ್ವಾಮೀಜಿ, ವೆಂಕಟಗಿರಿ ಕ್ಯಾಂಪ್‌ನ ಸಿದ್ಧಾಶ್ರಮದ ಸದಾನಂದ ಶರಣರು ಹಾಗೂ ಬಿಜೆಪಿ ಮುಖಂಡ ಕೆ. ಕರಿಯಪ್ಪ ಹಾಗೂ ಹಿಂದೂ ಮಹಾಗಣಪತಿ ಉತ್ಸವ ಸಮಿತಿ ಅಧ್ಯಕ್ಷ ಸುರೇಶ ನೆಕ್ಕಂಟಿ ಅವರು ಗಣಪತಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಿದರು.

ಅಲಂಕೃತಗೊಂಡ ಟ್ರ್ಯಾಕ್ಟರ್‌ನಲ್ಲಿ ಬೃಹತ್ ಆಕಾರದ ಗಣಪತಿ ಮೂರ್ತಿಯ ಮೆರವಣಿಗೆ ಸಾಗಿತು. ಗಂಗಾವತಿ ರಸ್ತೆಯಿಂದ ಪ್ರವಾಸಿ ಮಂದಿರ, ಮಹಾತ್ಮಗಾಂಧಿ ವೃತ್ತ, ಬಸ್ ನಿಲ್ದಾಣ ರಸ್ತೆ ಮೂಲಕ ಬಸವೇಶ್ವರ ವೃತ್ತವನ್ನು ತಲುಪಿತು. ಈ ವೇಳೆ ಮುಸ್ಲಿಂ ಮುಖಂಡರಾದ ಬಾಬರ್‌ ಪಾಷಾ ಜಾಗೀರದಾರ್, ಕೆ.ಜಿಲಾನಿಪಾಷಾ, ಸೈಯ್ಯದ್ ಹಾರೂನ್‍ಪಾಷಾ ಜಾಗೀರದಾರ್, ಎಂ.ಡಿ. ನದೀಮ್ ಮುಲ್ಲಾ, ಮುರ್ತುಜಾ ಹುಸೇನ್ ಅಯ್ಯೋಧಿ, ಫಯಾಜ್ ಪೀರಾ, ಜಹೀರುಲ್ಲಾ ಹಸನ್, ಚುಕ್ಕಿ ಬಾಬಾ ಕೋಟೆ, ರಾಜಾಭಕ್ಷಿ, ಸೈಯ್ಯದ್ ಆಸೀಫ್ ಸೇರಿದಂತೆ ಅನೇಕರು ಹಿಂದೂ ಬಾಂಧವರಿಗೆ ಪಾನೀಯ ವಿತರಿಸಿ ಶುಭಾಶಯ ಕೋರಿ ಭಾವೈಕ್ಯ ಮೆರೆದರು.

ADVERTISEMENT

ನಂತರ ನಟರಾಜ್ ಕಾಲೊನಿ ರಸ್ತೆ, ಟಿಪ್ಪುಸುಲ್ತಾನ್ ವೃತ್ತ, ಬಡಿಬೇಸ್ ಮಸ್ಜೀದ್, ಹಳೆಬಜಾರ್ ರಸ್ತೆ ಮೂಲಕ ಶೋಭಾಯಾತ್ರೆ ಸಾಗುತ್ತಿದ್ದಾಗ ಜೈನ ಸಮಾಜದ ಮುಖಂಡರು ಶರಬ್ತು ಹಾಗೂ ಶ್ಯಾಹೀನ್ ಜ್ಯುವೆಲರ್ಸ್ ಮಾಲೀಕ ಫಿರೋಜ್ ಅವರು ಕುಡಿಯುವ ನೀರಿನ ಸಾವಿರಾರು ಬಾಟಲಿಗಳನ್ನು ನೀಡಿ ಗಣೇಶ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ಮೆರವಣಿಗೆಯುದ್ದಕ್ಕೂ ಸುಮಾರು 10 ಸಾವಿರಕ್ಕೂ ಹೆಚ್ಚು ಯುವಕರು, ಸಾರ್ವಜನಿಕರು ಡಿಜೆ ಹಾಡುಗಳಿಗೆ ಕುಣಿದು, ಪರಸ್ಪರ ಕೇಸರಿ ಬಣ್ಣ ಎರಚಿಕೊಂಡು ಸಂಭ್ರಮಿಸಿದರು. ಬೃಹತ್ ಆಕಾರದ ಕೇಸರಿ ಧ್ವಜಗಳು, ಶಾಲುಗಳು ರಾರಾಜಿಸಿದವು. ರಾಮ, ಲಕ್ಷ್ಮಣ, ಆಂಜನೇಯ ವೇಷಾಧಾರಿಗಳ ನಾಟಕ, ಉಡುಪಿಯ ವಾದ್ಯಮೇಳ, ಆಘೋರಿ ನಾಗಸಾಧು ವೇಷಧಾರಿಗಳ ನೃತ್ಯ ಶೋಭಾಯಾತ್ರೆಗೆ ಮೆರಗು ತಂದವು.

ಕಿತ್ತೂರುರಾಣಿ ಚನ್ನಮ್ಮ ವೃತ್ತ, ಕನಕದಾಸ ವೃತ್ತ ಹಾಗೂ ಮಹಾತ್ಮಗಾಂಧಿ ವೃತ್ತದ ಮೂಲಕ ತಾಲ್ಲೂಕಿನ ದಢೇಸುಗೂರು ನದಿಗೆ ತೆರಳಿ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು.

ಮಾಜಿ ಸಚಿವರಾದ ವೆಂಕಟರಾವ್ ನಾಡಗೌಡ, ಕೆ.ಶಿವನಗೌಡ ನಾಯಕ, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಪಂಪನಗೌಡ ಬಾದರ್ಲಿ, ಸೋಮನಗೌಡ ಬಾದರ್ಲಿ, ಹಿಂದೂ ಮಹಾಗಣಪತಿ ಉತ್ಸವ ಸಮಿತಿ ಗೌರವಾಧ್ಯಕ್ಷ ಬಸವರಾಜ ನಾಡಗೌಡ, ಮುಖಂಡರಾದ ಕೆ.ಮರಿಯಪ್ಪ, ರಾಜೇಶ ಹಿರೇಮಠ, ಕೆ.ರಾಜಶೇಖರ, ಯಂಕೋಬ ನಾಯಕ, ಸಿದ್ರಾಮೇಶ ಮನ್ನಾಪುರ, ಅಭಿಷೇಕ ನಾಡಗೌಡ, ಬಸವರಾಜ ಹಿರೇಗೌಡರ್, ಕೆ.ವೆಂಕಟೇಶ, ಮಲ್ಲನಗೌಡ ಮಲ್ಕಾಪುರ, ಮಂಜುನಾಥ ಗಾಣಗೇರ್ ಭಾಗವಹಿಸಿದ್ದರು.

ಪೊಲೀಸ್ ಬಂದೋಬಸ್ತ್‌: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ನೇತೃತ್ವದಲ್ಲಿ 4 ಡಿವೈಎಸ್‍ಪಿ, 15 ಸಿಪಿಐಗಳು, 19 ಎಸ್‌ಐಗಳು, 45 ಎಎಸ್‍ಐ, 313 ಎಚ್‍ಸಿ, ಪಿಸಿ, 223 ಹೋಮ್ ಗಾರ್ಡ್‍ಗಳು, 2 ಕೆಎಸ್‍ಆರ್‌ಪಿ ತುಕಡಿ, 3 ಡಿಆರ್‌ಪಿ ತುಕಡಿ, 7 ಕಾರ್ ಪೆಟ್ರೋಲಿಂಗ್, 10 ಬೈಕ್ ಪೆಟ್ರೋಲಿಂಗ್ ಸರ್ಪಗಾವಲಿನಂತೆ ಬಂದೋಬಸ್ತ್ ಕೈಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.