ADVERTISEMENT

ಮನೆ ಗಣಪನ ಸ್ವಾಗತಕ್ಕೆ ರಾಯಚೂರು ಜಿಲ್ಲೆ ಅಣಿ

ಮಾರುಕಟ್ಟೆಯಲ್ಲಿ ಎಲ್ಲೆಡೆ ಪಿಒಪಿ ಮೂರ್ತಿಗಳು: ಹೂವು, ಹಣ್ಣು, ಬಾಳೆ ಗಿಡಗಳ ಬೆಲೆ ಹೆಚ್ಚಳ

ಚಂದ್ರಕಾಂತ ಮಸಾನಿ
Published 27 ಆಗಸ್ಟ್ 2025, 4:56 IST
Last Updated 27 ಆಗಸ್ಟ್ 2025, 4:56 IST
ರಾಯಚೂರಿನ ಯರಮರಸ್‌ ಬಳಿ ಭಕ್ತರು ಸಜ್ಜುಗೊಳಿಸಿದ ಮಂಟಪಗಳಿಗೆ ತೆರಳಲು ಸಜ್ಜಾಗಿದ್ದ ಗಣಪತಿ ಮೂರ್ತಿಗಳು                                            ಚಿತ್ರ: ಶ್ರೀನಿವಾಸ ಇನಾಮದಾರ್
ರಾಯಚೂರಿನ ಯರಮರಸ್‌ ಬಳಿ ಭಕ್ತರು ಸಜ್ಜುಗೊಳಿಸಿದ ಮಂಟಪಗಳಿಗೆ ತೆರಳಲು ಸಜ್ಜಾಗಿದ್ದ ಗಣಪತಿ ಮೂರ್ತಿಗಳು                                            ಚಿತ್ರ: ಶ್ರೀನಿವಾಸ ಇನಾಮದಾರ್   

ರಾಯಚೂರು: ಭಕ್ತರು ಮನೆಗಣಪನನ್ನು ಅದ್ದೂರಿಯಾಗಿ ಬರ ಮಾಡಿಕೊಳ್ಳಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

ಮಾರುಕಟ್ಟೆಯಲ್ಲಿ ಎಲ್ಲೆಡೆ ಪಿಒಪಿ ಗಣೇಶನ ಮೂರ್ತಿಗಳೇ ಕಾಣಸಿಗುತ್ತಿದ್ದರೂ ಬೆರಳೆಣಿಕೆಯಷ್ಟು ಕಲಾವಿದರು ತಯಾರಿಸಿರುವ ಮಣ್ಣಿನ ಗಣಪತಿಗಳ ಪ್ರತಿಷ್ಠಾಪನೆಗೆ ಸಂಪ್ರದಾಯಸ್ಥರು ಅಣಿಯಾಗಿದ್ದಾರೆ.

ಪರಿಸರಕ್ಕೆ ಹಾನಿ ಉಂಟುಮಾಡುವ ಪ್ಲಾಸ್ಟರ್‌ ಆಫ್‌ ಪ್ಯಾರಿಸ್ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡದಂತೆ ರಾಯಚೂರು ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಎರಡು ವಾರಗಳಿಂದ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರೂ ಬಹೇತಕ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಲ್ಲಿ ಆಗಲೇ ಏಕದಂತನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಮನೆ ಗಣಪನ ಮೂರ್ತಿಗಳನ್ನೂ ಅಷ್ಟೇ ಶ್ರದ್ಧಾ–ಭಕ್ತಿಯಿಂದ ತರಲಾಗುತ್ತಿದೆ.

ADVERTISEMENT

ಜಿಲ್ಲೆಯಲ್ಲಿ ಈ ವರ್ಷವೂ ಚೆನ್ನಾಗಿ ಮಳೆಯಾಗಿದೆ. ಕೃಷ್ಣಾ, ತುಂಗಭದ್ರಾ ನದಿಗಳು ತುಂಬಿ ಹರಿಯುತ್ತಿವೆ. ಬಹುತೇಕ ಬೆಳೆಗಳೂ ಚೆನ್ನಾಗಿ ಬಂದಿವೆ. ಎರಡು ವಾರಗಳಿಂದ ಸೂರ್ಯದೇವ ಸ್ವಲ್ಪಮಟ್ಟಿಗೆ ತಣ್ಣಗಾಗಿದ್ದಾನೆ. ವರುಣದೇವ ಆಗಾಗ ದರ್ಶನ ಕೊಡುತ್ತಿದ್ದಾನೆ. ಹಬ್ಬದ ಸಂಭ್ರಮದಲ್ಲಿರುವ ಲಂಬೋದರನ ಭಕ್ತರು ವಿಘ್ನವಿನಾಶಕನ ಪೂಜೆಗೆ ಉತ್ಸುಕರಾಗಿದ್ದಾರೆ.

ಪ್ರಸಕ್ತ ವರ್ಷವೂ ಜಿಲ್ಲೆಯ 1,954 ಸಾರ್ವಜನಿಕ ಗಣೇಶೋತ್ಸವ ಮಂಪಟಗಳಲ್ಲಿ ಗಣನಾಯಕ ವಿರಾಜಮಾನ ಆಗಲಿದ್ದಾನೆ. ರಾಯಚೂರು ಉಪವಿಭಾಗದಲ್ಲಿ 595, ಲಿಂಗಸುಗೂರು ಉಪ ವಿಭಾಗದಲ್ಲಿ 557 ಹಾಗೂ ಸಿಂಧನೂರು ಪೊಲೀಸ್ ಉಪ ವಿಭಾಗದಲ್ಲಿ 505 ಸಾರ್ವಜನಿಕ ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆಗೆ ಅನುಮತಿ ಪಡೆದುಕೊಳ್ಳಲಾಗಿದೆ.

ಬಳ್ಳಾರಿ ವಲಯದ ಐಜಿಪಿ ವರ್ತಿಕಾ ಕಟಿಯಾರ್ ಅವರು ರಾಯಚೂರಿನ ಪೊಲೀಸ್‌ ಮುಖ್ಯಾಲಯದಲ್ಲಿ ಪೊಲೀಸ್‌ ಅಧಿಕಾರಿಗಳ ಸಭೆ ನಡೆಸಿ ಬಂದೋಬಸ್ತ್‌ನ ಮಾಹಿತಿ ಪಡೆದುಕೊಂಡಿದ್ದಾರೆ.

ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಪಾಲನೆಗೆ ಒತ್ತು ಕೊಂಡುವಂತೆ ಜಿಲ್ಲೆಯ ಪೊಲೀಸ್‌ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಪೊಲೀಸರು ಶಾಂತಿಪಾಲನಾ ಸಭೆಗಳನ್ನು ನಡೆಸಿ ಸೂಕ್ಷ್ಮ ಪ್ರದೇಶಗಳಲ್ಲಿ ಪಥ ಸಂಚಲನ ಸಹ ನಡೆಸಿದ್ದಾರೆ.

ರಾಯಚೂರಿನ ಚಂದ್ರಮೌಳೇಶ್ವರ ವೃತ್ತ ಸಮೀಪದ ಮಳಿಗೆಯಲ್ಲಿ ಮಾರಾಟಕ್ಕೆ ಇಡಲಾಗಿದ್ದ ಮನೆ ಗಣಪತಿಗಳು
ಮಣ್ಣಿನ ಗಣಪತಿಗಳಿಗೆ ಬೇಡಿಕೆ ಕಡಿಮೆಯಾಗಿರುವ ಕಾರಣ ಈ ಬಾರಿ ಪಿಒಪಿ ಗಣಪತಿ ಮೂರ್ತಿಗಳನ್ನು ತಯಾರಿಸಿ ಮಾರಾಟ ಮಾಡಿದ್ದೇವೆ
ರೋಜಿ ಅಕ್ಕಸಾಲಿಗ ಮೂರ್ತಿಕಾರರು
ಭಕ್ತರು ಮನೆಗಳಲ್ಲಿ ಮಣ್ಣಿನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪರಿಸರ ಸಂರಕ್ಷಣೆಗೆ ನೆರವಾಗಬೇಕು. ಹಬ್ಬದ ಸಂದರ್ಭದಲ್ಲಿ ಸ್ವಚ್ಛತೆ ಕಾಯ್ದುಕೊಂಡು ಸಂಭ್ರಮಿಸಬೇಕು
ಜುಬಿನ್‌ ಮೊಹಾಪಾತ್ರ ಮಹಾನಗರ ಪಾಲಿಕೆ ಆಯುಕ್ತ

ಹೂವು ಹಣ್ಣುಗಳ ಬೆಲೆ ಏರಿಕೆ

ನಗರದ ಮಾರುಕಟ್ಟೆಯಲ್ಲಿ ಮಂಗಳವಾರ ಹಬ್ಬದ ಖರೀದಿ ಜೋರಾಗಿತ್ತು. ಬಾಳೆಗಿಡ ಚೆಂಡು ಹೂವಿನ ಗಿಡಗಳ ಮಾರಾಟ ಭರಾಟೆ ಕಂಡುಬಂದಿತು. ಬಾಳೆಹಣ್ಣು ಸೇಬು ಚಿಕ್ಕು ಮೊಸಂಬಿ ಸೀತಾಫಲದ ಬೆಲೆ ಸಾಮಾನ್ಯ ದರಕ್ಕಿಂತ ₹ 50ರಿಂದ ₹100 ಏರಿಕೆಯಾಗಿದೆ. ಭಕ್ತರು ಲಂಬೋದರನ ಪೂಜೆಗಾಗಿ ಬಿಡಿ ಬಿಡಿಯಾಗಿ ಹಣ್ಣುಗಳನ್ನು ಖರೀದಿಸಿದ್ದರಿಂದ ಹೆಚ್ಚು ಹಣ ವ್ಯಯಿಸಬೇಕಾಯಿತು. ಹಬ್ಬದ ಹೆಸರಿನಲ್ಲಿ ವ್ಯಾಪಾರಸ್ಥರು ಉತ್ತಮ ಲಾಭ ಮಾಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.