
ಪ್ರಜಾವಾಣಿ ವಾರ್ತೆ
ಲಿಂಗಸುಗೂರು: ‘ತಾಲ್ಲೂಕಿನಲ್ಲಿ ಬಾಡಿಗೆ ಕಟ್ಟಡಗಳಲ್ಲಿ ನಡೆಸಲಾಗುತ್ತಿರುವ ಹಾಸ್ಟೆಲ್‌ಗಳಿಗೆ ಹಂತ ಹಂತವಾಗಿ ಸ್ವಂತ ಕಟ್ಟಡ ನಿರ್ಮಾಣಕ್ಕೆ ಅನುದಾನ ಒದಗಿಸಲಾಗುತ್ತಿದೆ’ ಎಂದು ಶಾಸಕ ಮಾನಪ್ಪ ವಜ್ಜಲ್ ಹೇಳಿದರು.
ಪಟ್ಟಣದ ಹುಲಿಗುಡ್ಡದ ಬಳಿ ₹3.44 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಬಿಸಿಎಂ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್‌ನ ನೂತನ ಕಟ್ಟಡ ಉದ್ಘಾಟನೆ ಹಾಗೂ ₹5 ಕೋಟಿ ಅನುದಾನದಲ್ಲಿ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್ ನಿರ್ಮಾಣಕ್ಕೆ ಬುಧವಾರ ಅಡಿಗಲ್ಲು ನೆರವೇರಿಸಿ ಮಾತನಾಡಿದರು.
‘ಎಸ್.ಸಿ, ಎಸ್.ಟಿ ಹಾಸ್ಟೆಲ್‌ಗಳಲ್ಲಿ ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬೇ ಕು ಎನ್ನುವ ನಿಯಮ ಇದೆ. ಆದರೆ, ಬಿಸಿಎಂ ಹಾಸ್ಟೆಲ್‌ಗಳಲ್ಲಿ ಮೆರಿಟ್ ಆಧಾರದಲ್ಲಿ ಮಕ್ಕಳಿಗೆ ಪ್ರವೇಶ ನೀಡಲಾಗುತ್ತಿದೆ. ಇದರಿಂದ ಹಾಸ್ಟೆಲ್ ಸೌಲಭ್ಯ ಸಿಗದಿದ್ದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ’ ಎಂದರು.
‘ಸರ್ಕಾರ ಎಸ್.ಸಿ, ಎಸ್.ಟಿ ಹಾಸ್ಟೆಲ್‌ಗಳಲ್ಲಿರುವ ನಿಯಮವನ್ನು ಬಿಸಿಎಂ ಹಾಸ್ಟೆಲ್‌ಗಳಲ್ಲೂ ಜಾರಿಗೆ ತರಬೇಕು. ಸೌಲಭ್ಯ ಕೊರತೆಯ ಪಟ್ಟಿ ನೀಡಿದರೆ ಹಂತ ಹಂತವಾಗಿ ಸೌಲಭ್ಯ ಒದಗಿಸುವೆ. ಕೆಕೆಆರ್‌ಡಿಬಿ ಯೋಜನೆಯಡಿ ಹಾಸ್ಟೆಲ್‌ಗಳಿಗೆ ಅಗತ್ಯ ಸೌಕರ್ಯ ಒದಗಿಸಲು ಪ್ರತಿವರ್ಷ ₹6 ಕೋಟಿ ಮೀಸಲಿಡುವೆ’ ಎಂದು ಹೇಳಿದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭೂಪನಗೌಡ ಕರಡಕಲ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಬಸನಗೌಡ ಮೇಟಿ, ಟಿಎಪಿಸಿಎಂಎಸ್ ಅಧ್ಯಕ್ಷ ಶಶಿಧರ ಆಶಿಹಾಳ, ತಹಶೀಲ್ದಾರ್ ಸತ್ಯಮ್ಮ, ಬಿಸಿಎಂ ಜಿಲ್ಲಾಧಿಕಾರಿ ಸುನಿತಾ ಘಟಕಾಂಬಳೆ, ತಾಲ್ಲೂಕು ಅಧಿಕಾರಿ ಮಾನಪ್ಪ ಬಡಿಗೇರ, ಮುಖಂಡರಾದ ಗಿರಿಮಲ್ಲನಗೌಡ ಕರಡಕಲ್, ಬಿಜೆಪಿ ಮಂಡಲ ಅಧ್ಯಕ್ಷ ಕೆ.ನಾಗಭೂಷಣ, ಪುರಸಭೆ ಸದಸ್ಯ ಮುದಕಪ್ಪ ನಾಯಕ, ಪರಶುರಾಮ ಕೆಂಭಾವಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.