ADVERTISEMENT

ಸೇವೆ ಕಾಯಂಗೊಳಿಸಲು ಒತ್ತಾಯ

ಎಐಯುಟಿಯುಸಿಯಿಂದ ಜಿಲ್ಲಾಮಟ್ಟದ ಹಾಸ್ಟೆಲ್ ಕಾರ್ಮಿಕರ ಸಮಾವೇಶ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2022, 13:39 IST
Last Updated 7 ಅಕ್ಟೋಬರ್ 2022, 13:39 IST
ರಾಯಚೂರಿನ ಸ್ಪಂದನಾ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ವಸತಿ ನಿಲಯ ಕಾರ್ಮಿಕರ ಸಮಾವೇಶದಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯಗಳ ಕಾರ್ಮಿಕರ ಸಂಘದ ರಾಜ್ಯ ಅಧ್ಯಕ್ಷ ಸೋಮಶೇಖರ್ ಮಾತನಾಡಿದರು.
ರಾಯಚೂರಿನ ಸ್ಪಂದನಾ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ವಸತಿ ನಿಲಯ ಕಾರ್ಮಿಕರ ಸಮಾವೇಶದಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯಗಳ ಕಾರ್ಮಿಕರ ಸಂಘದ ರಾಜ್ಯ ಅಧ್ಯಕ್ಷ ಸೋಮಶೇಖರ್ ಮಾತನಾಡಿದರು.   

ರಾಯಚೂರು: ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳ ವಿವಿಧ ವಸತಿ ನಿಲಯಗಳಲ್ಲಿ ಹಲವಾರು ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವವರ ಸೇವೆಯನ್ನು ಕಾಯಂ ಮಾಡಬೇಕು ಎಂದು ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯಗಳ ಕಾರ್ಮಿಕರ ಸಂಘದ ರಾಜ್ಯ ಅಧ್ಯಕ್ಷ ಸೋಮಶೇಖರ್ ಒತ್ತಾಯಿಸಿದರು.

ನಗರದ ಸ್ಪಂದನಾ ಭವನದಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯಗಳ ಕಾರ್ಮಿಕರ ಸಂಘದಿಂದ ಐಎಯುಟಿಯುಸಿ ನೇತೃತ್ವದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ವಸತಿ ನಿಲಯ ಕಾರ್ಮಿಕರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ವಿವಿಧ ವಸತಿ ನಿಲಯಗಳಲ್ಲಿ ಲಕ್ಷಾಂತರ ಮಕ್ಕಳು ಓದುತ್ತಿದ್ದಾರೆ. ಅಂತಹ ಎಲ್ಲಾ ಮಕ್ಕಳಿಗೆ ಊಟ, ವಸತಿ, ಸುರಕ್ಷತೆ ಸಹಿತ ಅವರಿಗೆ ಸೇವೆ ಒದಗಿಸಲು ಅಡುಗೆಯವರು, ಅಡುಗೆ ಸಹಾಯಕರು, ಕಾವಲುಗಾರರ ಸಹಸ್ರಾರು ಹುದ್ದೆಗಳಿವೆ. ಸರ್ಕಾರದಿಂದ ಮಂಜೂರಾಗಿಯೂ ಖಾಲಿಯಿರುವ ಸಹಸ್ರಾರು ಈ ಡಿ ಗ್ರುಪ್ ಹುದ್ದೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಳೆದ ಹಲವಾರು ವರ್ಷಗಳಿಂದ ಅತ್ಯಂತ ಕಡಿಮೆ ವೇತನದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

ADVERTISEMENT

ಇವರಲ್ಲಿ ಬಹುಪಾಲು ಕಾರ್ಮಿಕರು ಮಹಿಳೆಯರೆ ಇದ್ದಾರೆ. ಈ ಕಾರ್ಮಿಕರ ಸಮಸ್ಯೆಗಳ ವಿರುದ್ಧ ಹೋರಾಟವನ್ನು ಕಟ್ಟುವ ಉದ್ದೇಶದಿಂದ ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಇವರಿಗೆ ಕಾನೂನುಬದ್ಧ ವಾರದ ರಜೆ, ರಾಷ್ಟ್ರೀಯ ಹಬ್ಬಗಳ ರಜೆಗಳನ್ನು ನೀಡುತ್ತಿಲ್ಲ. ಇಪಿಎಫ್, ಇಎಸ್‌ಐ ವಂತಿಗೆಯ ಸಂಪೂರ್ಣ ಹಣ ಕಾರ್ಮಿಕರ ಖಾತೆಗಳಿಗೆ ಪಾವತಿಸುತ್ತಿಲ್ಲ. ಕೆಲವು ಕಡೆ ನಿಗದಿಪಡಿಸಿದಷ್ಟು ವೇತನ ಸಹ ನೀಡುತ್ತಿಲ್ಲ. ದಿನಕ್ಕೆ 8 ಗಂಟೆಗಳಿಗಿಂತ ಹೆಚ್ಚಿನ ಅವಧಿಯ ಕೆಲಸ ಮಾಡಿಸಿಕೊಂಡರೂ, ಅದನ್ನು ಓಟಿ ಎಂದು ಪರಿಗಣಿಸಿ ಹೆಚ್ಚುವರಿ ವೇತನ ನೀಡುತ್ತಿಲ್ಲ ಎಂದು ಹೇಳಿದರು.

ವೇತನ ಪಾವತಿ ಚೀಟಿ ನೀಡುತ್ತಿಲ್ಲ. ಪ್ರತಿ ತಿಂಗಳು ನಿಗದಿತ ಸಮಯದಲ್ಲಿ ವೇತನ ಪಾವತಿಯಾಗುತ್ತಿಲ್ಲ. ಈಗಲೂ ಸಮಾಜ ಕಲ್ಯಾಣ ಇಲಾಖೆ ಕಾರ್ಮಿಕರಿಗೆ 11 ತಿಂಗಳಗಳ ವೇತನ ನೀಡಿಲ್ಲ. ಇಂತಹ ಹತ್ತು ಹಲವು ಸಮಸ್ಯೆಗಳನ್ನು ಈ ಕಾರ್ಮಿಕರು ಎದುರಿಸುತ್ತಿದ್ದಾರೆ ಎಂದರು.

ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷ ವೀರೇಶ್ ಏನ್.ಎಸ್ ಮಾತನಾಡಿ, ಕಾರ್ಮಿಕರು ಹಲವಾರು ಯಶಸ್ವಿ ಹೋರಾಟಗಳನ್ನು ಮಾಡಿದೆ. ಇನ್ನೂ ಹೆಚ್ಚಿನ ಗೆಲುವುಗಳನ್ನು ಸಾಧಿಸಲು ಬಲಿಷ್ಠ ಹೋರಾಟವನ್ನು ಮಾಡಲು ಎಲ್ಲರೂ ಮುಂದೆ ಬರಬೇಕು ಎಂದು ಹೇಳಿದರು.

ಮಹೇಶ್ ಚೀಕಲಪರ್ವಿ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಜಿಲ್ಲಾ ಕಾರ್ಯದರ್ಶಿ ಎಂ.ಗಾಯತ್ರಿ, ಅಣ್ಣಪ್ಪ, ಸುಲೋಚನಾ, ಅಂಬಿಕಾ, ಶಾಂತಾ, ಮಹೇಶ್ವರಿ, ಉಮಾದೇವಿ,ನಾಗರತ್ನ ಅಶ್ವತ್ಥಾಮ, ಅಮರೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.