ADVERTISEMENT

ರಾಯಚೂರು: ಹೋಟೆಲ್‌ ವ್ಯವಹಾರ ಶೇ 15 ಮಾತ್ರ!

ಗ್ರಾಹಕರು ಬರುವಿಕೆ ಅಂದಾಜು ಸಿಗದೆ ಗೊಂದಲದಲ್ಲಿ ಮಾಲೀಕರು

ನಾಗರಾಜ ಚಿನಗುಂಡಿ
Published 10 ಜೂನ್ 2020, 13:53 IST
Last Updated 10 ಜೂನ್ 2020, 13:53 IST
ರಾಯಚೂರು ಕೇಂದ್ರ ಬಸ್‌ ನಿಲ್ದಾಣ ಎದುರಿನ ಪ್ರಭುವಿಹಾರದಲ್ಲಿ ಬುಧವಾರ ಗ್ರಾಹಕರು ಕಂಡುಬಂದಿದ್ದು
ರಾಯಚೂರು ಕೇಂದ್ರ ಬಸ್‌ ನಿಲ್ದಾಣ ಎದುರಿನ ಪ್ರಭುವಿಹಾರದಲ್ಲಿ ಬುಧವಾರ ಗ್ರಾಹಕರು ಕಂಡುಬಂದಿದ್ದು   

ರಾಯಚೂರು: ಜಿಲ್ಲೆಯಲ್ಲಿ ಹೋಟೆಲ್‌ಗಳು, ದರ್ಶಿನಿಗಳು ಹಾಗೂ ರೆಸ್ಟೊರೆಂಟ್‌ಗಳನ್ನು ಆರಂಭಿಸುವುದಕ್ಕೆ ಸರ್ಕಾರ ಅನುಮತಿ ನೀಡಿದ್ದರೂ, ಲಾಕ್‌ಡೌನ್‌ ಪೂರ್ವದಲ್ಲಿದ್ದ ಸ್ಥಿತಿ ಮರಳುತ್ತಿಲ್ಲ. ಮೊದಲಿದ್ದ ವ್ಯವಹಾರಕ್ಕೆ ಹೋಲಿಕೆ ಮಾಡಿದರೆ ಶೇ 15 ರಷ್ಟು ಮಾತ್ರ ವ್ಯವಹಾರ ನಡೆಯುತ್ತಿದೆ.

ಕೇಂದ್ರ ಬಸ್‌ ನಿಲ್ದಾಣ ಎದುರಿನ ದರ್ಶಿನಿಗಳಲ್ಲಿ, ಮಾರುಕಟ್ಟೆಯ ಹೋಟೆಲ್‌ಗಳಲ್ಲಿ ಹಾಗೂ ಪ್ರತಿ ಬಡಾವಣೆಯ ಮುಖ್ಯರಸ್ತೆಗಳಲ್ಲಿ ನಿತ್ಯ ಬೆಳಿಗ್ಗೆ ಉಪಾಹಾರ ಸೇವಿಸಲು ಜನಜಂಗುಳಿ ನೆರೆಯುತ್ತಿತ್ತು. ತರಹೇವಾರಿ ಉಪಾಹಾರ ಸಿದ್ಧಪಡಿಸಿ ವ್ಯವಹಾರ ನಡೆಸುತ್ತಿದ್ದ ಹೋಟೆಲ್‌ ಮಾಲೀಕರಿಗೆ ಕೋವಿಡ್‌ ಲಾಕ್‌ಡೌನ್‌ ಇನ್ನೂ ಮುಗಿದಿಲ್ಲ.

ಜನರು ಬಾರದಿರುವುದು ಹೋಟೆಲ್‌ ವ್ಯವಹಾರಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಲಾಡ್ಜ್‌ಗಳನ್ನು ತೆರೆಯುವುದಕ್ಕೆ ಇನ್ನೂ ಅವಕಾಶ ನೀಡಿಲ್ಲ. ಸರ್ಕಾರಿ ಕಚೇರಿಗಳಿಗೆ ವಿವಿಧ ಕೆಲಸಕ್ಕಾಗಿ ಬರುತ್ತಿದ್ದ ಜನರ ಸಂಖ್ಯೆಯಲ್ಲೂ ಇಳಿಕೆಯಾಗಿದೆ.

ADVERTISEMENT

ಸರ್ಕಾರಿ ಬಸ್‌ಗಳು ಮತ್ತು ರೈಲ್ವೆ ಸೇವೆಗಳು ಯಥಾಸ್ಥಿತಿಗೆ ಮರಳಿದ ಬಳಿಕ ಅದಕ್ಕೆ ಪೂರಕವಾಗಿ ಜನಸಂಚಾರ ಹೆಚ್ಚಾಗುವುದರಿಂದ ಹೋಟೆಲ್‌ ವ್ಯವಹಾರ ಕೂಡಾ ಮೊದಲಿನ ಸ್ಥಿತಿ ಮರಳುತ್ತದೆ. ಅಲ್ಲಿಯವರೆಗೂ ಹೋಟೆಲ್‌ ವ್ಯವಹಾರವು ಸ್ಥಿತ್ಯರಂತರದಲ್ಲಿಯೇ ಮುಂದುವರಿಯಲಿದೆ. ಗ್ರಾಹಕರ ಸಂಖ್ಯೆ ಬಗ್ಗೆ ಹಾಗೂ ಬೇಡಿಕೆ ಪದಾರ್ಥಗಳ ಬಗ್ಗೆ ಹೋಟೆಲ್‌ಗಳ ಅಡುಗೆ ಮನೆಯಲ್ಲಿ ಗೊಂದಲ ನಿರ್ಮಾಣವಾಗಿದೆ.

ಗ್ರಾಹಕರ ನಿರೀಕ್ಷೆಯಿಂದ ಮಾಡಿರುವ ಪದಾರ್ಥಗಳು ಉಳಿಕೆಯಾಗುತ್ತಿವೆ. ಕೆಲವು ಸಲ ಮುಗಿದುಹೋದ ಪದಾರ್ಥಗಳನ್ನೆ ಜನರು ಕೇಳುತ್ತಾರೆ ಎನ್ನುವ ಮಾತನ್ನು ಹೋಟೆಲ್‌ ನಡೆಸುವವರು ಹೇಳುತ್ತಿದ್ದಾರೆ. ದೊಡ್ಡ ದೊಡ್ಡ ಕೆಲ ಹೋಟೆಲ್‌ಗಳು ಇನ್ನೂ ತೆರೆದಿಲ್ಲ.

ಬಾಡಿಗೆ ಕಟ್ಟಡದಲ್ಲಿ ಹೋಟೆಲ್‌, ದರ್ಶಿನಿಗಳನ್ನು ನಡೆಸುವವರಿಗೆ ಲಾಕ್‌ಡೌನ್‌ನಿಂದ ನಷ್ಟ ದುಪ್ಪಟ್ಟಾಗಿದೆ. ರೊಟ್ಟಿ ಕೇಂದ್ರಗಳಲ್ಲಿ, ಖಾನಾವಳಿಗಳಲ್ಲೂ ಗ್ರಾಹಕರು ಕಡಿಮೆ ಇದ್ದಾರೆ. ದಿನದಿಂದ ದಿನಕ್ಕೆ ವ್ಯವಹಾರ ಸುಧಾರಿಸಿ, ಸಹಜ ಮರಳಬಹುದು ಎನ್ನುವ ನಿರೀಕ್ಷೆಯಲ್ಲಿ ಹೋಟೆಲ್‌ ಮಾಲೀಕರು ಇದ್ದಾರೆ. ಆದರೆ, ಕೋವಿಡ್‌ ಸಂಕಷ್ಟ ಕೊನೆಗೊಳ್ಳುವುದು ಯಾವಾಗ ಎನ್ನುವ ಆತಂಕ ದೂರವಾಗುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.