ಮುದಗಲ್: ಸರ್ಕಾರದ ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಮನೆ ನಿರ್ಮಾಣಕ್ಕೆ ಅನುದಾನ ಬರದೆ ಇರುವುದರಿಂದ ಫಲಾನುಭವಿಗಳು ಕಂಗಾಲಾಗಿದ್ದಾರೆ.
ಸಮೀಪದ ಮಟ್ಟೂರ, ಮೇದಿಕನಾಳ, ಕನ್ನಾಳ ಹಾಗೂ ತಲೆಖಾನ ಗ್ರಾಮ ಪಂಚಾಯಿತಿಯಲ್ಲಿ ಬಸವ, ಡಾ.ಬಿ.ಆರ್. ಅಂಬೇಡ್ಕರ್ ವಸತಿ, ಪ್ರಧಾನ ಮಂತ್ರಿ ಆವಾಸ್ ಯೋಜನೆ ಸೇರಿದಂತೆ ಇನ್ನಿತರ ವಸತಿ ಯೋಜನೆಗಳಿಂದ ಫಲಾನುಭವಿಗಳಿಗೆ ಮನೆ ಮಂಜೂರಾಗಿವೆ.
ಪಿ.ಎಂ.ವೈ ಯೋಜನೆಯಡಿಯಲ್ಲಿ ಮನೆ ನಿರ್ಮಿಸಿಕೊಂಡ ಫಲಾನುಭವಿಗಳಿಗೆ ಏಳು ತಿಂಗಳು ಗತಿಸಿದರೂ ಹಣ ಜಮಾ ಆಗಿಲ್ಲ. ಮಸ್ಕಿ ತಾಲ್ಲೂಕಿನ ಮಟ್ಟೂರ, ಮೇದಿಕನಾಳ, ಕನ್ನಾಳ ಹಾಗೂ ತಲೆಖಾನ ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿಗಳಿಗೆ 2018-19, 2021-22 ಹಾಗೂ 2024-25ನೇ ಸಾಲಿನಲ್ಲಿ 1,640ಕ್ಕೂ ಹೆಚ್ಚು ಮನೆಗಳು ಮಂಜೂರು ಆಗಿವೆ.
ಖಾಲಿ ಜಾಗದ ಜಿಪಿಎಸ್ ಸೆರೆ ಹಿಡಿದ ಬಳಿಕ ಫಲಾನುಭವಿಗಳ ಖಾತೆಗೆ ಸರ್ಕಾರ ಮೊದಲನೇ ಕಂತಿನ ಹಣ ನೇರವಾಗಿ ಜಮೆ ಮಾಡಿತ್ತು. ಇದನ್ನು ನಂಬಿದ ಫಲಾನುಭವಿಗಳು ಮನೆಗಳ ತಳಪಾಯ ನಿರ್ಮಿಸಿಕೊಂಡು ಭಾವಚಿತ್ರ ಮತ್ತು ಇನ್ನಿತರ ದಾಖಲಾತಿಗಳನ್ನು ಗ್ರಾಮ ಪಂಚಾಯಿತಿಗೆ ಸಲ್ಲಿಸಿದರು. ಪಂಚಾಯಿತಿಯವರು ತಾಲ್ಲೂಕು ಪಂಚಾಯಿತಿಗೆ ಸಲ್ಲಿಸಿದ್ದಾರೆ.
ತಾಲ್ಲೂಕು ಪಂಚಾಯಿತಿ ಕಚೇರಿಯಿಂದ ಮನೆಗಳ ದಾಖಲಾತಿಗಳು ಮುಂದೆ ಹೋಗುತ್ತಿಲ್ಲ ಎಂಬ ಆರೋಪವಿದೆ. ‘ವಸತಿ ಯೋಜನೆಗಳ ಮನೆಗಳ ದಾಖಲಾತಿಗಳು ಮುಂದೆ ಕಳಿಸಲು ವಿಳಂಬ ವಿರೋಧಿಸಿ ಜೂ.20ರಂದು ಪ್ರತಿಭಟನೆ ಮಾಡುತ್ತೇವೆ ಎಂದು ತಲೆಖಾನ ಪಂಚಾಯಿತಿ ವ್ಯಾಪ್ತಿಯ ಫಲಾನುಭವಿಗಳು ಪತ್ರ ನೀಡಿದ್ದರಿಂದ ತಲೆಖಾನ ಪಂಚಾಯಿತಿ ದಾಖಲಾತಿಗಳನ್ನು ಎರಡು ದಿನಗಳಲ್ಲಿ ಜಿಲ್ಲಾ ಪಂಚಾಯಿತಿಗೆ ಕಳಿಸಿದ್ದಾರೆ’ ಎಂದು ದೇವಪ್ಪ ತಿಳಿಸಿದರು.
ಈಗಾಗಲೇ ಫಲಾನುಭವಿಗಳು ತಳಪಾಯ ಮತ್ತು ಗೋಡೆ ಹಂತದ ವರೆಗೆ ಮನೆ ನಿರ್ಮಿಸಿಕೊಂಡಿದ್ದಾರೆ. ಸಾಲ ಮಾಡಿ ಮನೆಗೆ ಸಿಮೆಂಟ್, ಮರಳು, ಕಿಟಕಿ, ಬಾಗಿಲು, ಇಟ್ಟಿಗೆ ಇನ್ನಿತರ ಸಾಮಾಗ್ರಿಗಳನ್ನು ತಂದುಕೊಂಡಿದ್ದಾರೆ. ಆರು ತಿಂಗಳಿಂದ ಅನುದಾನ ಬಿಡುಗಡೆಗಾಗಿ ಕಾಯ್ದು ಕುಳಿತ್ತಿದ್ದಾರೆ.
‘ಹರಕು-ಮುರಕು ಗುಡಿಸಲುಗಳಲ್ಲಿ ವಾಸ ಮಾಡುತ್ತಿದ್ದ ಬಡ ಕುಟುಂಬಗಳು ಸರ್ಕಾರದ ಮನೆ ನಂಬಿ ಗುಡಿಸಲುಗಳನ್ನು ಕಿತ್ತಿಹಾಕಿದ್ದಾರೆ. ಮಳೆಗಾಲ ಆರಂಭವಾಗಿದ್ದು, ವಾಸ ಮಾಡಲು ಮನೆ ಇಲ್ಲದೆ ಸಂಕಷ್ಟ ಪಡುತ್ತಿದ್ದಾರೆ. ಸಕಾಲಕ್ಕೆ ಹಣ ಬಾರದೆ ಇರುವುದರಿಂದ ಮನೆಗಳ ಕಾಮಗಾರಿ ಅರ್ಧಕ್ಕೆ ನಿಂತಿದೆ. ಸಂಬಂಧಿಸಿದ ಅಧಿಕಾರಿಗಳು ಮನೆ ನಿರ್ಮಿಸಿಕೊಂಡವರಿಗೆ ಶೀಘ್ರವೇ ಹಣ ಮಂಜೂರು ಮಾಡಿಸಬೇಕು’ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಭೀಮಶಪ್ಪ ರಾಠೋಡ ಆಗ್ರಹಿಸುತ್ತಾರೆ.
ಲಿಂಗಸುಗೂರು ತಾಲ್ಲೂಕಿನಲ್ಲಿ ನಿರ್ಮಿಸಿದ ವಸತಿ ಯೋಜನೆಯ ಮನೆಗಳಿಗೆ ನಿಗಮದಿಂದ ಹಣ ಜಮೆಯಾಗಿದೆ. ಮಸ್ಕಿ ತಾಲ್ಲೂಕಿನ ಅಧಿಕಾರಿಗಳ ನಿರ್ಲಕ್ಷ್ಯದಿಂದ ಫಲಾನುಭವಿಗಳಿಗೆ ಹಣ ಜಮೆಯಾಗಿಲ್ಲನಿಂಗಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೇದಿಕಿನಾಳ
ಮಸ್ಕಿ ತಾಲ್ಲೂಕಿಗೆ ಮಂಜೂರಾದ 940 ಬಸವ ಮತ್ತು ಡಾ. ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆಯ ಮನೆಗಳು ನಿಗದಿತ ಸಮಯಕ್ಕೆ ಫಲಾನುಭವಿಗಳನ್ನು ಆಯ್ಕೆ ಮಾಡದ ಕಾರಣ ವಾಪಸ್ ಹೋಗಿವೆದೇವಪ್ಪ ರಾಠೋಡ್ ಕೆಡಿಪಿ ಸದಸ್ಯ ಮಸ್ಕಿ ತಾಲ್ಲೂಕು
ವಸತಿ ಯೋಜನೆಗೆ ಸಂಬಂಧಿಸಿದ ಕಡತಗಳು ನಮ್ಮ ಕಚೇರಿಯಲ್ಲಿ ಯಾವುದೂ ಬಾಕಿ ಉಳಿದಿಲ್ಲ. ನಮ್ಮಿಂದ ಜಿಲ್ಲಾ ಪಂಚಾಯಿತಿ ಲಾಗ್‌ಇನ್‌ಗೆ ಕಳಿಸಿದ್ದೇವೆಸೋಮನಗೌಡ ಪಾಟೀಲ ಸಹಾಯಕ ನಿರ್ದೇಶಕ ತಾ.ಪಂ. ಮಸ್ಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.