ADVERTISEMENT

ಹಟ್ಟಿ ಚಿನ್ನದ ಗಣಿ| ₹998 ಕೋಟಿ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ

ಆ.6ಕ್ಕೆ ಹಟ್ಟಿ ಚಿನ್ನದ ಗಣಿಗೆ ಸಿಎಂ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 5:50 IST
Last Updated 30 ಜುಲೈ 2025, 5:50 IST
ಹಟ್ಟಿ ಪಟ್ಟಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಲ್ಗೊಳ್ಳಲಿರುವ ಕಾರ್ಯಕ್ರಮದ ಸ್ಧಳವನ್ನು ಗಣಿ ಕಂಪನಿಯ ಅಧ್ಯಕ್ಷ ಜೆ.ಟಿ. ಪಾಟೀಲ ವೀಕ್ಷಿಸಿದರು
ಹಟ್ಟಿ ಪಟ್ಟಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಲ್ಗೊಳ್ಳಲಿರುವ ಕಾರ್ಯಕ್ರಮದ ಸ್ಧಳವನ್ನು ಗಣಿ ಕಂಪನಿಯ ಅಧ್ಯಕ್ಷ ಜೆ.ಟಿ. ಪಾಟೀಲ ವೀಕ್ಷಿಸಿದರು   

ಹಟ್ಟಿ ಚಿನ್ನದ ಗಣಿ: ಹಟ್ಟಿ ಚಿನ್ನದ ಗಣಿ ಕಂಪನಿ ಪ್ರದೇಶದಲ್ಲಿ ₹998 ಕೋಟಿ ವೆಚ್ಚದ ಕಾರ್ಮಿಕರ ಹೊಸ ವಸತಿ ಸಮುಚ್ಛಯಗಳು ಸೇರಿದಂತೆ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಸ್ಟ್‌ 6ರಂದು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಗಣಿ ಕಂಪನಿ ನಿಗಮದ ಅಧ್ಯಕ್ಷ ಜೆ.ಟಿ. ಪಾಟೀಲ ಹೇಳಿದರು.

ಗಣಿ ಕಂಪನಿಯ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಕಾಮಗಾರಿಗಳಿಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ₹998 ಕೋಟಿ ವೆಚ್ಚದಲ್ಲಿ ವಸತಿ ಗೃಹಗಳು, ಶಾಲೆ, ಆಸ್ಪತ್ರೆ, ಕ್ರೀಡಾ ಸಂಕೀರ್ಣ ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ದೊರೆಯಲಿದೆ’ ಎಂದರು.

ADVERTISEMENT

‘ಇದರಲ್ಲಿ 912 ಮನೆಗಳು, ಲಿಫ್ಟ್ ಎಲಿವೇಟರ್‌ನಂತಹ ಬೇರೆಬೇರೆ ಆಧುನಿಕ ಸೌಲಭ್ಯಗಳು ಇರಲಿವೆ. ನೆಲ ಮತ್ತು ಎರಡು ಮಹಡಿಯ 130 ಹಾಸಿಗೆಗಳ ಆಸ್ಪತ್ರೆ ನಿರ್ಮಾಣವಾಗಲಿದೆ’ ಎಂದು ತಿಳಿಸಿದರು.

ಚಿನ್ನದ ಉತ್ಪಾದನೆ ಹೆಚ್ಚಳ: ‘ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಈ ಮೊದಲು ವರ್ಷಕ್ಕೆ 1,500 ಕೆ.ಜಿ.ಯಷ್ಟು ಚಿನ್ನ ಉತ್ಪಾದನೆಯ ಗುರಿ ಇತ್ತು. ನಾನು ಅಧಿಕಾರ ಸ್ವೀಕರಿಸಿದ ಮೇಲೆ ವಾರ್ಷಿಕವಾಗಿ 1605 ಕೆ.ಜಿ ಚಿನ್ನವನ್ನು ಉತ್ಪಾದಿಸಲಾಗಿದೆ. ಇದೀಗ 2025-26ನೇ ಸಾಲಿನಲ್ಲಿ ವಾರ್ಷಿಕವಾಗಿ 1,700 ಕೆ.ಜಿ.‌ ಚಿನ್ನವನ್ನು ಉತ್ಪಾದಿಸಲಾಗುವುದು’ ಎಂದು ಜೆ.ಟಿ.ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.

ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿ ಶಿಲ್ಪಾ ಆರ್., ಇಡಿ ಪ್ರಕಾಶ ರಾಮಾಯಾಜಿ, ಜಿಎಂ ಶಫಿವುಲ್ಲಾ ಖಾನ್, ಎಚ್‌ಆರ್ ಯಮನೂರಪ್ಪ ಗೌಡರ್, ಮುಖಂಡರಾದ ವೇಣುಗೋಪಾಲಗೌಡ ಜಾಲಹಳ್ಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.