ಹಟ್ಟಿ ಚಿನ್ನದ ಗಣಿ: ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಹೆರಿಗೆ ಮಾಡಿಸಲಾಗಿದೆ ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೌರ ವಿದ್ಯುತ್ ಸೌಲಭ್ಯ ಇದ್ದರೂ ಉಪಯೋಗಕ್ಕೆ ಬಾರದಂತಾಗಿದೆ. ಜನರೇಟರ್ ಕೆಟ್ಟು ಹೋಗಿ ಹಲವು ವರ್ಷಗಳೇ ಕಳೆದಿವೆ. ಸಮಸ್ಯೆ ಬಗ್ಗೆ ಹಲವು ಸಲ ಅಧಿಕಾರಿಗಳ ಗಮನಕ್ಕೂ ತಂದರು ಪ್ರಯೋಜನವಾಗಿಲ್ಲ. ಗೋಳು ಕೇಳುವವರೆ ಇಲ್ಲದಂತಾಗಿದೆ ಎಂದು ಇಲ್ಲಿನ ಸಿಬ್ಬಂದಿ ನೋವು ತೋಡಿಕೊಂಡರು.
ಈ ಹಿಂದೆ ಮಹಿಳೆಗೆ ಹೆರಿಗೆ ಮಾಡಿಸುವ ಸಂದರ್ಭದಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿ ತೊಂದರೆ ಉಂಟಾಗಿತ್ತು. ಕೂಡಲೇ ಅವರನ್ನು ಬೇರೆ ಆಸ್ಪತ್ರೆಗೆ ಕಳುಹಿಸಲಾಗಿತ್ತು ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.
ವಿದ್ಯುತ್ ಇಲ್ಲದ ಸಮಯದಲ್ಲಿ ವೈದ್ಯರು, ನರ್ಸ್‌ಗಳು ಕತ್ತಲಿನಲ್ಲಿ ಮೊಬೈಲ್ ಟಾರ್ಚ್ ಇಲ್ಲವೆ ಕ್ಯಾಂಡಲ್ ಬೆಳಕಿನಲ್ಲಿ ಚಿಕಿತ್ಸೆ ನೀಡಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಆಸ್ಪತ್ರೆಯಲ್ಲಿ ಮೂಲಸೌಕರ್ಯ ಮರೀಚಿಕೆಯಾಗಿದೆ ಎನ್ನುತ್ತಾರೆ ರೋಗಿಗಳು.
ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಸೌರ ವಿದ್ಯುತ್ ಹಾಗೂ ಯುಪಿಎಸ್ ದುರಸ್ತಿ ಮಾಡಿಸಿ ಬಡ ಜನರಿಗೆ ಅನುಕೂಲ ಮಾಡಿಕೊಡಬೇಕು ಎನ್ನುವುದು ಜನರ ಆಗ್ರಹವಾಗಿದೆ.
ಹಟ್ಟಿ ಪಟ್ಟಣದ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕು. ಜನರ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸಬೇಕು. ನಿರ್ಲಕ್ಷ್ಯ ಮಾಡಿದರೆ ಹೋರಾಟ ನಡೆಸಲಾಗುವುದುಶಿವರಾಜ ಕಂದಗಲ್ ಸಾಮಾಜಿಕ ಹೋರಾಟಗಾರ
ಹಟ್ಟಿ ಆಸ್ಪತ್ರೆಯಲ್ಲಿ ಸೌರ ವಿದ್ಯುತ್ ಯುಪಿಎಸ್ ವ್ಯವಸ್ಧೆ ಇದೆ. ತಾಂತ್ರಿಕ ಕಾರಣದಿಂದ ಘಟನೆ ಜರುಗಿದೆ. ಘಟನೆ ಮರುಕಳಿಸದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದುಅಮರೇಶ ಮಾಕಾಪುರ ತಾಲ್ಲೂಕು ಆರೋಗ್ಯ ಅಧಿಕಾರಿ
ಹಳೆ ವಿಡಿಯೊ ಹರಿಬಿಡುವುದರಿಂದ ವೈದ್ಯರ ನೈತಿಕ ಧೈರ್ಯ ಕುಗ್ಗುತ್ತದೆ. ವಿಡಿಯೊ ಮಾಡಿದವರ ಬಗ್ಗೆ ತನಿಖೆ ನಡೆಸಲಾಗುವುದು. ಇಲಾಖೆಯ ಸಿಬ್ಬಂದಿ ತಪ್ಪಿತಸ್ಧರಾಗಿದ್ದರೆ ಅವರ ವಿರುದ್ದ ಕ್ರಮ ಕೈಗೊಳ್ಳಲಾಗುವುದುಡಾ.ಸುರೇದ್ರಬಾಬು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.