ADVERTISEMENT

ಜೀವನ ರೂಪಿಸುವ ಶಿಕ್ಷಕರ ಕಾರ್ಯ ಮಹತ್ತರ

ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜಿಪಂ ಸಿಇಒ ಅಭಿಮತ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2021, 16:10 IST
Last Updated 8 ಸೆಪ್ಟೆಂಬರ್ 2021, 16:10 IST
ಶಿಕ್ಷಣ ಕಿರಣ ಸಂಸ್ಥೆಯಿಂದ ರಾಯಚೂರಿನ ಕನ್ನಡ ಭವನದಲ್ಲಿ ಬುಧವಾರ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಶೈಕ್ಷಣಿಕವಾಗಿ ಸಾಧನೆ ಮಾಡಿದ ಶಿಕ್ಷಕರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು
ಶಿಕ್ಷಣ ಕಿರಣ ಸಂಸ್ಥೆಯಿಂದ ರಾಯಚೂರಿನ ಕನ್ನಡ ಭವನದಲ್ಲಿ ಬುಧವಾರ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಶೈಕ್ಷಣಿಕವಾಗಿ ಸಾಧನೆ ಮಾಡಿದ ಶಿಕ್ಷಕರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು   

ರಾಯಚೂರು: ಮಕ್ಕಳ ಭವಿಷ್ಯ ಸುಧಾರಣೆ ಮಾಡುವ ಶಿಕ್ಷಕರ ವೃತ್ತಿ ಪವಿತ್ರ ಹಾಗೂ ಮಹತ್ತರವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಅಸೀಫ್ ಅಭಿಪ್ರಾಯಪಟ್ಟರು.

ನಗರದ ಕನ್ನಡ ಭವನದಲ್ಲಿಶಿಕ್ಷಣ ಕಿರಣ ಸಂಸ್ಥೆಯಿಂದ ಬುಧವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಮಕ್ಕಳ ಜೀವನಕ್ಕೆ ಮಾರ್ಗದರ್ಶಕರು, ಬದುಕು ರೂಪಿಸುವವರು ಶಿಕ್ಷಕರಾಗಿದ್ದಾರೆ.ಪುರಾತನ ಕಾಲದಲ್ಲಿ ಚಾಣಕ್ಯ, ಬುದ್ಧರಂತಹ ಮಹನೀಯರು ನೈಸರ್ಗಿಕ ಶಿಕ್ಷಣ ಪಡೆದು ಜ್ಞಾನಿಗಳಾಗಿದ್ದಾರೆ. ಆದರೆ ಆಧುನಿಕ ಯುಗದಲ್ಲಿ ಸ್ವಾತಂತ್ರ್ಯದ ನಂತರ ಶೈಕ್ಷಣಿಕ ಸುಧಾರಣೆಯಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ವಿಫುಲ ಅವಕಾಶಗಳು ನಿರ್ಮಾಣವಾಗಿವೆ ಎಂದು ಹೇಳಿದರು.

ADVERTISEMENT

ಶಿಕ್ಷಣ ಸುಧಾರಣೆಗೆ ಜಿಲ್ಲಾ ಪಂಚಾಯಿತಿಯಿಂದ ಅನೇಕ ಕಾರ್ಯಕ್ರಮ ಹಮ್ಮಿಕೊಂಡು ಮಕ್ಕಳಿಗೆ ನೆರವು ಒದಗಿಸಲಾಗಿದೆ. ಎರಡು ವರ್ಷಗಳ ಹಿಂದೆ ರಾಯಚೂರು ಜಿಲ್ಲೆಯು ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ 15ನೇ ಸ್ಥಾನದಲ್ಲಿತ್ತು. ಈ ವರ್ಷ ರಾಜ್ಯದಲ್ಲಿ ಇಬ್ಬರು 2ನೇ ಸ್ಥಾನದಲ್ಲಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದರು.

ಜಿಲ್ಲೆಯ ಶೈಕ್ಷಣಿಕ ಮಟ್ಟ ಸುಧಾರಣೆಗಾಗಿ ಮಾದರಿ ಶಾಲೆಗಳು, ಸುಸಜ್ಜಿತ ಗ್ರಂಥಾಲಯ, ಸ್ಮಾರ್ಟ್ ಕ್ಲಾಸ್ ಸೇರಿ ಇತರೆ ಸೌಕರ್ಯ ಕಲ್ಪಿಸಲಾಗುತ್ತಿದೆ. ಸರ್ಕಾರಿ ಶಾಲೆಯ ಶಿಕ್ಷಕರು ಯಾವುದಕ್ಕೂ ಕಡಿಮೆಯಿಲ್ಲ. ಉತ್ತಮ ಶಿಕ್ಷಕರನ್ನು ಗುರುತಿಸಿ ಪ್ರಶಸ್ತಿ ನಿಡುತ್ತಿರುವ ಶಿಕ್ಷಣ ಕಿರಣ ಸಂಸ್ಥೆಯ ಕಾರ್ಯ ಶ್ಲಾಘನೀಯ. ಪ್ರಶಸ್ತಿಯಿಂದ ಮತ್ತಷ್ಟು ಉತ್ತಮವಾಗಿ ಕೆಲಸ ಮಾಡಲು ಪ್ರೇರೇಪಣೆಯಾಗುತ್ತದೆ ಎಂದು ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವೃಷಬೇಂದ್ರ ಮಾತನಾಡಿ, ಕೋವಿಡ್ ಹಿನ್ನೆಲೆಯಲ್ಲಿ ಅನೇಕ ತಿಂಗಳ ನಂತರ ಶಾಲೆ ಆರಂಭವಾಗಿದ್ದು ಹೊಸ ಸವಾಲುಗಳನ್ನು ಸ್ವೀಕರಿಸಿ ಶಿಕ್ಷಣ ಇಲಾಖೆ ಕೆಲಸ ಮಾಡಬೇಕಿದೆ. ಜಿಲ್ಲೆಯ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗೆ ಇಲಾಖೆಯಿಂದ ಮಾದರಿ ಪ್ರಶ್ನೆ ಹಂಚಿಕೆ, ಮಾದರಿ ಪರೀಕ್ಷೆ ಸೇರಿ ಇತರೆ ಕಾರ್ಯಕ್ರಮ ಮಾಡಲಾಗುವುದು. ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಭಯ ಹೋಗಲಾಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಆತ್ಕೂರು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಶಶಿಧರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಪ್ರಶಸ್ತಿಯಿಂದ ಮತ್ತಷ್ಟು ಜವಾಬ್ದಾರಿ ಹೆಚ್ಚಾಗಿದೆ. ವೃತ್ತಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಅಭಿವೃದ್ಧಿ ವಿಭಾಗದ ಉಪನಿರ್ದೇಶಕ ರಾಮಚಂದ್ರಪ್ಪ ಶಿವಂಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ದೇವದುರ್ಗದ ಮದರಕಲ್ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಉತ್ತಮ್ ಮಾಲೆ, ಹಂಚಿನಾಳ ಸರ್ಕಾರಿ ಪ್ರೌಢಶಾಲೆಯ ಸ.ಶಿ ಪ್ರಭಾವತಿ, ಕುರ್ಡಿ ಸರ್ಕಾರಿ ಶಾಲೆಯ ಸ.ಶಿಕ್ಷಕಿ ರೇಣವ್ವ ಕಟ್ನಳ್ಳಿ, ಗೌಳಿಪುರದ ಸರ್ಕಾರಿ ಪ್ರಾಥಮಿಕ ಶಾಲೆಯ ಸ.ಶಿಕ್ಷಕಿ ಜರೀನಾ ತಾಜ್ ಅವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕ್ಷೇತ್ರ ಶಿಕ್ಷಣ ಅಧಿಕಾರಿ ಚಂದ್ರಶೇಖರ ದೊಡ್ಡಮನಿ, ಶಿಕ್ಷಣ ಕಿರಣ ಸಂಸ್ಥೆಯ ಗೌರವಾಧ್ಯಕ್ಷ ಜಯಣ್ಣ, ಅಧ್ಯಕ್ಷ ಹನುಮಂತಪ್ಪ ಗವಾಯಿ, ಕಾರ್ಯದರ್ಶಿ ಸೈಯದ್ ಹಫೀಜುಲ್ಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.