ಲಿಂಗಸುಗೂರು: ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣವಾಗುತ್ತಿದ್ದು 21 ಗ್ರಾಮಗಳಿಗೆ ಬಾಡಿಗೆ ಜಲ ಮೂಲವೇ ಗತಿಯಾಗಿದೆ.
ತಾಲ್ಲೂಕಿನ ಗೆಜ್ಜಲಗಟ್ಟಾ, ಕೆ.ಮರಿಯಮ್ಮನಹಳ್ಳಿ, ಕನಸಾವಿ, ಆಶಿಹಾಳ, ಆಶಿಹಾಳ ತಾಂಡ, ಹಾಲವರ್ತಿತಾಂಡ, ಮಾವಿನಭಾವಿ, ಭೂಪುರ,ಭೂಪುರ ತಾಂಡ, ಹುನಕುಂಟಿ, ಗುಂಡಸಾಗರ,ಅಡವಿಭಾವಿ, ಆನ್ವರಿ, ಹಿರೇನಗನೂರು, ಚುಕನಟ್ಟಿ,ಮರಳಿ, ಆರ್ಯಭೋಗಾಪುರ, ಯರಡೋಣಾ, ವ್ಯಾಕರನಾಳ, ಹೆಗ್ಗಾಪುರತಾಂಡ, ಮಾಚನೂರು ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದರಿಂದ ಗ್ರಾಮಗಳಲ್ಲಿರುವ ಖಾಸಗಿ ವ್ಯಕ್ತಿಗಳ ಜಮೀನಿನಲ್ಲಿರುವ ಕೊಳವೆಭಾವಿಗಳನ್ನು ಬಾಡಿಗೆ ತೆಗೆದುಕೊಂಡು ನೀರು ಪೂರೈಕೆ ಮಾಡಲಾಗುತ್ತಿದೆ.
ನದಿ ತೀರದಲ್ಲಿ ನೀರಿನ ದಾಹ: ತಾಲ್ಲೂಕಿನ ಹಂಚಿನಾಳ, ಜಲದುರ್ಗ, ಕಡದರಗಡ್ಡಿ, ಯಳಗುಂದಿ, ಸೇರಿದಂತೆ ಇನ್ನಿತರ ಗ್ರಾಮಗಳ ಪಕ್ಕದಲ್ಲಿ ಕೃಷ್ಣಾ ನದಿ ಇದ್ದರೂ ಕೂಡಾ ಕುಡಿವ ನೀರಿಗಾಗಿ ಪರಿತಪಿಸುವಂತಾಗಿದೆ.
ಹಂಚಿನಾಳ ಗ್ರಾಮದಲ್ಲಿರುವ ತೆರೆದ ಭಾವಿಯಿಂದಲೇ ಇಡೀ ಊರಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ ಭಾವಿಯಲ್ಲಿ ನೀರಿನ ಮಟ್ಟ ಕುಸಿದಿದ್ದರಿಂದ ನಾಲ್ಕೈದು ದಿನಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಮನೆಯಲ್ಲಿ ನೀರು ಖಾಲಿಯಾದರೆ ಜಮೀನಿಗಳಲ್ಲಿರುವ ಬೋರ್‌ವೆಲ್ ನೀರಿಗಾಗಿ ಅಲೆದಾಡಬೇಕಾಗಿದೆ. ಇಲ್ಲದಿದ್ದರೆ ನದಿಯಲ್ಲಿರುವ ಕಲುಷಿತ ನೀರನ್ನೇ ಕುಡಿಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.
27 ಶುದ್ಧ ನೀರಿನ ಘಟಕ ಬಂದ್: ತಾಲ್ಲೂಕಿನಲ್ಲಿ 117 ಕಡೆಗಳಲ್ಲಿ ಶುದ್ಧ ನೀರಿನ ಘಟಕಗಳನ್ನು ಅಳವಡಿಸಲಾಗಿದೆ. ಆದರೆ ಇದರಲ್ಲಿ 90 ಆರ್‌ಒ ಪ್ಲಾಂಟ್ ಕಾರ್ಯನಿರ್ವಹಿಸುತ್ತಿವೆ. 27 ಆರ್‌ಒ ಪ್ಲಾಂಟ್‌ಗಳು ಬಂದ್ ಆಗಿವೆ. ಹಂಚಿನಾಳ ಗ್ರಾಮದಲ್ಲಿ ಆರ್‌ಒ ಪ್ಲಾಂಟ್ ಅಳವಡಿಸಿದಾಗಿನಿಂದ ಇಲ್ಲಿವರೆಗೂ ಚಾಲೂ ಇಲ್ಲ. ಆದರೆ ಅಧಿಕಾರಿಗಳು ಕೆಡಿಪಿ ಸಭೆಗೆ ಹಂಚಿನಾಳ ಗ್ರಾಮದಲ್ಲಿ ಆರ್‌ಒ ಕಾರ್ಯನಿರ್ವಹಣೆ ಮಾಡುತ್ತಿದೆ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ.
ವಾಸ್ತವದಲ್ಲಿ ಆರ್‌ಒ ಪ್ಲಾಂಟ್‌ಗಳು ಬಂದ್ ಆಗಿರುವ ಸಂಖ್ಯೆಯೇ ಹೆಚ್ಚಾಗಿದೆ. ಶುದ್ಧ ಕುಡಿಯುವ ನೀರು ಪೂರೈಕೆ ಸರ್ಕಾರದ ಕನಸಿಗೆ ಅಧಿಕಾರಿಗಳೇ ಹಾಗೂ ಕೆಲ ಗ್ರಾ.ಪಂ ಆಡಳಿತ ಮಂಡಳಿಗಳು ತಣ್ಣೀರೆಚಿವೆ. ಇದರಿಂದ ಗ್ರಾಮೀಣ ಭಾಗದಲ್ಲಿ ಅಶುದ್ಧ ನೀರೇ ಗತಿಯಾಗಿದೆ.
ಕೈಕೊಟ್ಟ ಯೋಜನೆ: ತಾಲ್ಲೂಕಿನ ಮಾವಿನಭಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೂಪುರ, ಹುನುಕುಂಟಿ, ಹಳ್ಳಿ ಲಿಂಗಸುಗೂರು ಗ್ರಾಮಗಳಿಗೆ ಪೂರೈಕೆಗಾಗಿ 2018ರಲ್ಲಿ ₹4 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಕೆರೆ ನಿರ್ಮಾಣ ಮಾಡಲಾಗಿದ್ದರೂ ನೀರು ಕುಡಿಯಲು ಹಾಗೂ ಬಳಕೆ ಮಾಡಲು ಯೋಗ್ಯವಲ್ಲದ್ದು ಎಂದು ಆರೋಗ್ಯ ಇಲಾಖೆ ವರದಿ ನೀಡಿದ್ದರಿಂದ ಕೆರೆ ನೀರಿನ ಯೋಜನೆ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗಿದೆ.
ನಾಲೆಯಲ್ಲಿ ನೀರಿಲ್ಲ, ನೀರಿಲ್ಲದೆ ಭಾವಿ ಭತ್ತಿದ್ದರಿಂದ ಹುನಕುಂಟಿಯಲ್ಲಿ ನೀರಿನ ತಾಪತ್ರಯ ಹೇಳತೀರದಾಗಿದೆ. ತಾಲ್ಲೂಕಿನ ಹೊನ್ನಹಳ್ಳಿ ಗ್ರಾಮದ ಬಳಿ ಬಹುಗ್ರಾಮ ಯೋಜನೆಯಡಿಯಲ್ಲಿ ನಾರಾಯಣಪುರ ಬಲದಂಡೆ ನಾಲೆ ಮೂಲಕ ಆರಂಭದಲ್ಲಿ ಏಳು ಗ್ರಾಮಕ್ಕೆ ನೀರು ಪೂರೈಕೆಗೆ ಯೋಜನೆ ರೂಪಿಸಲಾಗಿತ್ತು. ಆದರೆ ಐದು ಹಳ್ಳಿಗಳಿಗೆ ಮಾತ್ರ ಅದು ಸಮರ್ಪಕ ಕುಡಿವ ನೀರು ಪೂರೈಕೆಯಾಗುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
ಹಂಚಿನಾಳ ಗ್ರಾಮದಲ್ಲಿ ಕುಡಿವ ನೀರಿಗಾಗಿ ಇರುವ ಒಂದೇ ಭಾವಿಯಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ಕುಯುಡಿವ ನೀರಿಗಾಗಿ ಅಲೆದಾಡುವಂತಾಗಿದೆ. ಗ್ರಾಮದ ಪಕ್ಕದಲ್ಲಿ ಕೃಷ್ಣಾ ನದಿ ಹರಿಯುತ್ತಿದ್ದರೂ ಪರದಾಟ ತಪ್ಪಿಲ್ಲ. ಕುಡಿಯುವ ನೀರಿಗಾಗಿ ಶಾಶ್ವತ ಯೋಜನೆ ಒದಗಿಸಲು ತಾಲ್ಲೂಕು ಆಡಳಿತ ಮುಂದಾಗಬೇಕು ಬಾಲಾಜಿ ಹಂಚಿನಾಳ ಗ್ರಾಮಸ್ಥ ಹುನುಕುಂಟಿ ಗ್ರಾಮದಲ್ಲಿ ಮೂರು ಗ್ರಾಮಗಳಿಗೆ ಕುಡಿಯುವ ನೀರಿಗಾಗಿ ಜಾರಿಯಾದ ಯೋಜನೆ ಅವೈಜ್ಞಾನಿಕವಾಗಿ ಮಾಡಿದ್ದರಿಂದ ಕುಡಿಯಲು ಅಲ್ಲದೆ ಬಳಕೆಗೂ ಯೋಗ್ಯವಲ್ಲದ್ದಾಗಿದೆ. ಕುಡಿಯುವ ನೀರಿಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಸಂಜೀವಪ್ಪ ಛಲವಾದಿ ಹುನುಕುಂಟಿ ಗ್ರಾಮಸ್ಥ 21 ಗ್ರಾಮಗಳಿಗೆ ಬಾಡಿಗೆ ಬೋರ್‌ವೆಲ್ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಕುಡಿಯುವ ನೀರಿನ ಸಮಸ್ಯೆಗೆ ತ್ವರಿತಗತಿಯಲ್ಲಿ ಸ್ಪಂದಿಸುವಂತೆ ತಾಲ್ಲೂಕಿನ ಎಲ್ಲಾ ಪಿಡಿಒಗಳಿಗೆ ಸೂಚನೆ ನೀಡಿದ್ದೇನೆ ಪಂಪನಗೌಡ ಪಾಟೀಲ ಸಹಾಯಕ ನಿರ್ದೇಶಕ ತಾ.ಪಂ ಲಿಂಗಸುಗೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.