ADVERTISEMENT

ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಪ್ರವಾಹ ಭೀತಿ ಹೆಚ್ಚಳ: ಅಪಾರ ಬೆಳೆ ನಷ್ಟ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2024, 14:03 IST
Last Updated 1 ಆಗಸ್ಟ್ 2024, 14:03 IST
ಲಿಂಗಸುಗೂರು ತಾಲ್ಲೂಕು ಗುಂತಗೋಳ ಬಳಿ ಕೃಷ್ಣಾ ನದಿ ಪಾತ್ರದಲ್ಲಿ ಕೃಷ್ಣಾ ಪ್ರವಾದಿಂದ ರೇಷ್ಮೆ ಸೇರಿದಂತೆ ಇತರೆ ಬೆಳೆ ಜಲಾವೃತಗೊಂಡಿರುವ ಚಿತ್ರಣ
ಲಿಂಗಸುಗೂರು ತಾಲ್ಲೂಕು ಗುಂತಗೋಳ ಬಳಿ ಕೃಷ್ಣಾ ನದಿ ಪಾತ್ರದಲ್ಲಿ ಕೃಷ್ಣಾ ಪ್ರವಾದಿಂದ ರೇಷ್ಮೆ ಸೇರಿದಂತೆ ಇತರೆ ಬೆಳೆ ಜಲಾವೃತಗೊಂಡಿರುವ ಚಿತ್ರಣ   

ಲಿಂಗಸುಗೂರು: ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದ ಮಳೆ ಬೀಳುತ್ತಿರುವುದರಿಂದ  ಜಲಾಶಯಗಳು ಭರ್ತಿ ಆಗಿ ಕೃಷ್ಣಾ ನದಿಯಲ್ಲಿ ಪ್ರವಾಹ ಹೆಚ್ಚುತ್ತ ಸಾಗಿದೆ. ತಾಲ್ಲೂಕಿನಲ್ಲಿ ಕೂಡ ಕೃಷ್ಣಾ ನದಿ ಪ್ರವಾಹ ಹೆಚ್ಚುತ್ತಿದ್ದು, ಜನರಲ್ಲಿ ಭೀತಿ ಉಂಟಾಗಿದೆ.  ನದಿ ತಟದ ಪ್ರದೇಶದಲ್ಲಿ ಅಪಾರ ಬೆಳೆ ಜಲಾವೃತಗೊಂಡು ನಷ್ಟ ಸಂಭವಿಸಿದೆ.

ಹತ್ತು ದಿನಗಳಿಂದ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿ ಕರಡಕಲಗಡ್ಡಿ, ಮ್ಯಾದರಗಡ್ಡಿ, ವೆಂಕಮ್ಮನಗಡ್ಡಿ ಪ್ರದೇಶ ಸಂಪೂರ್ಣ ಬಾಹ್ಯ ಸಂಪರ್ಕ ಕಳೆದುಕೊಂಡಿವೆ. ಕೆಲ ನಡುಗಡ್ಡೆ ಗ್ರಾಮಗಳ ಜನ ಸುತ್ತುವರೆದು ಬಾಹ್ಯ ಸಂಪರ್ಕ ಸಾಧಿಸುತ್ತಿದ್ದಾರೆ. ಇನ್ನೊಂದಡೆ ಬೆಳೆದು ನಿಂತ ಬೆಳೆಗಳು ಜಲಾವೃತಗೊಂಡು ಕೊಳೆಯುತ್ತಿರುವುದು ರೈತರಿಗೆ ಸಂಕಷ್ಟ ತಂದೊಡ್ಡಿದೆ.

ಶೀಲಹಳ್ಳಿ, ತವದಗಡ್ಡಿ, ಗೋನವಾಟ್ಲ, ಗುಂತಗೋಳ, ಗದ್ದಗಿ ಸೇರಿದಂತೆ ನದಿ ತಟದ ದೊಡ್ಡಿಗಳ ನೂರಾರು ಎಕರೆ ಜಮೀನದಲ್ಲಿ ಬೆಳೆದು ನಿಂತ ತೊಗರಿ, ಹೆಸರು, ಸಜ್ಜೆ, ರೇಷ್ಮೆ ಬೆಳೆ, ದಾಳಿಂಬೆ ಸೇರಿದಂತೆ ವಿವಿಧ ಕೃಷಿ, ತೋಟಗಾರಿಕೆ ಬೆಳೆಗಳು ಜಲವೃತಗೊಂಡಿವೆ. ಬೆಳೆ ನಷ್ಟದ ಬಗ್ಗೆ ತಾಲ್ಲೂಕು ಆಡಳಿತದ ಗಮನಕ್ಕೆ ತಂದಿದ್ದು ಯಾವೊಬ್ಬ ಅಧಿಕಾರಿ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿಲ್ಲ ಎಂದು ರೈತರು ದೂರಿದ್ದಾರೆ.

ADVERTISEMENT

ನಾರಾಯಣಪುರ ಅಣೆಕಟ್ಟೆ ನೀರು ಸಂಗ್ರಹಣೆ ಸಾಮರ್ಥ್ಯ 492.252 ಮೀ ಇದ್ದು ಗುರುವಾರ ಸಂಜೆ 489.990 ಮೀ ಮಟ್ಟ ಕಾಯ್ದುಕೊಂಡು ಹೆಚ್ಚುವರಿ 3.27 ಲಕ್ಷ ಕ್ಯುಸೆಕ್‍ ನೀರನ್ನು 30 ಕ್ರೆಸ್ಟ್ ಗೇಟ್‍ಗಳ ಮೂಲಕ ಕೃಷ್ಣಾ ನದಿಗೆ ಹರಿಸಲಾಗುತ್ತಿದೆ. ಅಣೆಕಟ್ಟೆ ಒಳಹರಿವು ಆಧರಿಸಿ ನದಿಗೆ ಹರಿಸುವ ನೀರಿನ ಪ್ರಮಾಣ ಹೆಚ್ಚು ಅಥವಾ ಕಡಿಮೆ ಮಾಡುವ ಸಾಧ್ಯತೆಗಳಿವೆ ಎಂದು ಎಇಇ ವಿಜಯಕುಮಾರ ತಿಳಿಸಿದ್ದಾರೆ.

 'ಕೆಲ ದಿನಗಳಿಂದ ಕೃಷ್ಣಾ ನದಿಗೆ 3 ಲಕ್ಷಕ್ಕಿಂತ ಹೆಚ್ಚು ಕ್ಯುಸೆಕ್‍ ನೀರು ಹರಿಸಲಾಗುತ್ತಿದೆ. ಶೀಲಹಳ್ಳಿ ಸೇತುವೆ ಮುಳುಗಡೆಯಾಗಿದೆ, ನಡುಗಡ್ಡೆ ಪ್ರದೇಶ ಮತ್ತು ಗ್ರಾಮಗಳ ಜನ ಸುರಕ್ಷಿತವಾಗಿದ್ದಾರೆ. ನೋಡಲ್‍ ಅಧಿಕಾರಿಗಳು ಭೇಟಿ ನೀಡಿ ಎಚ್ಚರಿಕೆ ನೀಡುತ್ತಿದ್ದಾರೆ. ನದಿ ತಟದ ಜಮೀನು ಬೆಳೆ ಜಲವೃತಗೊಂಡ ಮಾಹಿತಿ ಬಂದಿದೆ. ಶೀಘ್ರದಲ್ಲಿಯೆ ಸಮೀಕ್ಷೆ ನಡೆಸಲಾಗುವುದು' ಎಂದು ತಹಶೀಲ್ದಾರ್‌ ಶಂಶಾಲಂ ನಾಗಡದಿನ್ನಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.