ಸಿಂಧನೂರು: ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಹಾಗೂ ಶಾಸಕ ಅಬ್ಬಯ್ಯ ಪ್ರಸಾದ್ ಅವರು ನಗರದಲ್ಲಿ ಮಂಡಳಿಯಿಂದ ಅನುಷ್ಠಾನಗೊಳಿಸಲಾದ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಹಂತ-7 ಮತ್ತು 8ರ 250 ಮನೆಗಳ ಕಾಮಗಾರಿಯನ್ನು ಪರಿಶೀಲಿಸಿದರು.
250 ಮನೆಗಳ ಪೈಕಿ 202 ಮನೆಗಳ ಕಾಮಗಾರಿ ಪ್ರಾರಂಭಿಸಲಾಗಿದ್ದು, ಅವುಗಳಲ್ಲಿ 162 ಮನೆಗಳು ಪೂರ್ಣಗೊಂಡಿವೆ. 40 ಮನೆಗಳ ಕಾಮಗಾರಿಯು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿದ್ದು, ಇನ್ನುಳಿದ 48 ಮನೆಗಳ ಕಾಮಗಾರಿ ಶೀಘ್ರವಾಗಿ ಪ್ರಾರಂಭಿಸಲು ಹಾಗೂ ಗುಣಮಟ್ಟವನ್ನು ಕಾಯ್ದುಕೊಂಡು ಮನೆಗಳ ನಿರ್ಮಾಣ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರತಿ ಮನೆಯ ಕಾಮಗಾರಿಯ ಅಂದಾಜು ವೆಚ್ಚ ₹ 6.78 ಲಕ್ಷ ಇದೆ. ಈ ಹಿಂದೆ ಮೊತ್ತದಲ್ಲಿ ಕೇಂದ್ರ ಸರ್ಕಾರ ₹ 1.50 ಲಕ್ಷ ಹಾಗೂ ರಾಜ್ಯ ಸರ್ಕಾರ ಎಸ್‌ಸಿ, ಎಸ್‌ಟಿ ಪಂಗಡದವರಿಗೆ ₹ 2 ಲಕ್ಷ ಹಾಗೂ ಇತರೆ ವರ್ಗದವರಿಗೆ ₹ 1.20 ಲಕ್ಷ ಅನುದಾನ ನೀಡುತ್ತಿದ್ದು, ಉಳಿದ ಮೊತ್ತವನ್ನು ಫಲಾನುಭವಿಯ ವಂತಿಕೆ ಹಣದ ರೂಪದಲ್ಲಿ ಶೇ10 ಎಸ್‌ಸಿ, ಎಸ್‌ಟಿ, ಶೇ.15 ರಷ್ಟು ಇತರೆ ವರ್ಗದವರು ಪಾವತಿಸಿದ ನಂತರ ಉಳಿದ ಮೊತ್ತವನ್ನು ಬ್ಯಾಂಕ್ ಸಾಲ, ಲೇಬರ್ ಸಾಲದ ಮುಖಾಂತರ ಪಾವತಿಸಬೇಕಾಗಿದೆ ಎಂದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಮುಖ್ಯಮಂತ್ರಿಗಳು ಹಾಗೂ ವಸತಿ ಸಚಿವರು ಸೇರಿ ಚರ್ಚಿಸಿ ಫಲಾನುಭವಿಗಳಿಗೆ ಹೊರೆ ಆಗಬಾರದು ಎಂಬ ಉದ್ದೇಶದಿಂದ ಪ್ರತಿ ಫಲಾನುಭವಿಯಿಂದ ಗರಿಷ್ಠ ₹1 ಲಕ್ಷವನ್ನು ವಂತಿಗೆ ರೂಪದಲ್ಲಿ ಪಾವತಿಸಲು ಸರ್ಕಾರದ ವಸತಿ ಇಲಾಖೆಯ ಅಧೀನ ಕಾರ್ಯದರ್ಶಿ-2 ಅವರಿಗೆ ಆದೇಶಿಸಲಾಗಿದ್ದು, ಈ ಮೊತ್ತವನ್ನು ಪಾವತಿಸಿಕೊಂಡು ಉಳಿದ ಮನೆಗಳ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಆಯುಕ್ತ ಅಶೋಕ ಡಿ.ಆರ್, ತಾಂತ್ರಿಕ ನಿರ್ದೇಶಕ ಎಂ.ಎ.ಖಯ್ಯುಂ, ಕಲಬುರಗಿ ವಿಭಾಗದ ಎಇಇ ದೇವೇಂದ್ರ ಕುಮಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.