ADVERTISEMENT

ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಸಾವು ಪ್ರಕರಣ:ಸ್ಥಳ ಸಾಕ್ಷಿ ಆಧರಿಸಿ ತನಿಖೆ-ಎಸ್‌ಪಿ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2019, 11:24 IST
Last Updated 20 ಏಪ್ರಿಲ್ 2019, 11:24 IST
ರಾಯಚೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಕಿಶೋರಬಾಬು ಮತ್ತು ಬಳ್ಳಾರಿ ವಲಯ ಐಜಿಪಿ ಎಂ.ನಂಜುಂಡಸ್ವಾಮಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು
ರಾಯಚೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಕಿಶೋರಬಾಬು ಮತ್ತು ಬಳ್ಳಾರಿ ವಲಯ ಐಜಿಪಿ ಎಂ.ನಂಜುಂಡಸ್ವಾಮಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು   

ರಾಯಚೂರು: ‘ಈಚೆಗೆ ನಡೆದ ಎಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿನಿಯ ಶಂಕಿತ ಆತ್ಯಾಚಾರ ಮತ್ತು ಕೊಲೆ ಪ್ರಕರಣದ ಬಗ್ಗೆ ಸ್ಥಳದಲ್ಲಿ ಸಿಕ್ಕಿರುವ ಸಾಕ್ಷಿಗಳನ್ನು ಆಧರಿಸಿ ಹಲವು ಆಯಾಮಗಳಲ್ಲಿ ತನಿಖೆ ಮಾಡಲಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಕಿಶೋರಬಾಬು ಹೇಳಿದರು.

ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

‘ಎಫ್‌ಐಆರ್‌ ದಾಖಲಿಸಿಕೊಂಡು ಶಂಕಿತ ಆರೋಪಿಯನ್ನು ವಶಕ್ಕೆ ಪಡೆದು ವಿಚಾರ ಮಾಡಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಸತ್ಯಾಂಶ ಹೊರ ಬರಲಿದೆ’ ಎಂದರು.

ADVERTISEMENT

‘ಮರಣೋತ್ತರ ಪರೀಕ್ಷಾ ವರದಿ ಮತ್ತು ಡೆತ್‌ನೋಟ್‌ ವಿಧಿವಿಜ್ಞಾನ ವರದಿ (ಎಫ್‌ಎಸ್‌ಎಲ್‌) ಇನ್ನೂ ಬರಬೇಕಿದೆ. ಮೃತಳ ಮನೆ ಇರುವ ಬಡಾವಣೆ, ಕಾಲೇಜು ಆವರಣದ ಸಿಸಿಟಿವಿಗಳು ಮತ್ತು ಮೊಬೈಲ್‌ ಕರೆಗಳ ಮಾಹಿತಿ ಕಲೆ ಹಾಕಿ ತನಿಖೆ ಮಾಡಲಾಗುತ್ತಿದೆ. ಇನ್ನೂ ತನಿಖೆ ಸೂಕ್ಷ್ಮಗಳನ್ನು ಸದ್ಯಕ್ಕೆ ಬಹಿರಂಗಗೊಳಿಸಲು ಆಗುವುದಿಲ್ಲ’ ಎಂದು ತಿಳಿಸಿದರು.

’ಪೊಲೀಸರು ನಡೆಸುತ್ತಿರುವ ಸಮಗ್ರ ಮತ್ತು ವೈಜ್ಞಾನಿಕ ತನಿಖೆಯ ಮಾಹಿತಿಯನ್ನು ಮೃತಳ ಸಂಬಂಧಿಗಳು ಮತ್ತು ಕಾಲೇಜಿನ ವಿದ್ಯಾರ್ಥಿ ಸಮೂಹಕ್ಕೆ ಮನವರಿಕೆ ಮಾಡಲಾಗಿದೆ. ಆದಷ್ಟು ಶೀಘ್ರ ತನಿಖೆ ಪೂರ್ಣಗೊಳಿಸುವ ಭರವಸೆಯನ್ನು ಎಲ್ಲರೂ ಒಪ್ಪಿದ್ದಾರೆ’ ಎಂದು ತಿಳಿಸಿದರು.

ಮಾಣಿಕಪ್ರಭು ಲೇಔಟ್ ಗುಡ್ಡದ ಸುತ್ತಲೂ ಶಾಲಾ, ಕಾಲೇಜು ಮತ್ತು ಹಾಸ್ಟೇಲ್‌ಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಅಲ್ಲೊಂದು ಪೊಲೀಸ್‌ ಚೆಕ್‌ಪೋಸ್ಟ್‌ ಸ್ಥಾಪಿಸಬೇಕು ಹಾಗೂ ಬೀದಿದೀಪಗಳನ್ನು ಅಳವಡಿಸುವಂತೆ ವಿದ್ಯಾರ್ಥಿಗಳು ಕೋರಿದ್ದಾರೆ. ಈ ಬೇಡಿಕೆಗಳನ್ನು ಒಪ್ಪಿ ಕ್ರಮ ವಹಿಸಲಾಗುತ್ತಿದೆ ಎಂದರು.

ಬಳ್ಳಾರಿ ವಲಯದ ಐಜಿಪಿ ಎಂ ನಂಜುಂಡಸ್ವಾಮಿ ಮಾತನಾಡಿ, ’ಇಂತಹ ಪ್ರಕರಣಗಳಲ್ಲಿ ಮೃತಳು, ಸಂಬಂಧಿಗಳು ಹಾಗೂ ಸಂಸ್ಥೆಯ ಹೆಸರು ಪ್ರಕಟಿಸಬಾರದು ಎನ್ನುವುದು ಕಾನೂನಾತ್ಮಕ ಮತ್ತು ನೈತಿಕತೆಯಿಂದ ಕೂಡಿದ ವಿಚಾರ. ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಊಹಾಪೋಹದ ವಿಚಾರಗಳು ಹರಿದಾಡುತ್ತಿವೆ. ಈ ತಪ್ಪನ್ನು ಜವಾಬ್ದಾರಿಯುತ ಮಾಧ್ಯಮಗಳು ಮಾಡಬಾರದು. ಹೆಸರುಗಳನ್ನು ಗೌಪ್ಯವಾಗಿಡಬೇಕು. ಪ್ರಕರಣದ ತನಿಖೆಯನ್ನು ರಾಯಚೂರು ಪೊಲೀಸರು ಸೂಕ್ತ ಮತ್ತು ವೈಜ್ಞಾನಿಕವಾಗಿ ಮಾಡುತ್ತಿದ್ದಾರೆ’ ಎಂದು ಹೇಳಿದರು.

ಹಿನ್ನೆಲೆ

ರಾಯಚೂರಿನ ಐಡಿಎಸ್‌ಎಂಟಿ ಬಡಾವಣೆಯಲ್ಲಿರುವ ಮನೆಯಿಂದ ಕಾಲೇಜಿಗೆ ಏಪ್ರಿಲ್‌ 13 ರಂದು ಬೆಳಿಗ್ಗೆ ಹೋಗಿದ್ದ ವಿದ್ಯಾರ್ಥಿನಿಯು ವಾಪಸ್‌ ಬಂದಿರಲಿಲ್ಲ. ಆತಂಕಕ್ಕೊಳಗಾದ ಪಾಲಕರು ಅದೇ ದಿನ ನೇತಾಜಿ ನಗರ ಪೊಲೀಸರ ಗಮನಕ್ಕೆ ತಂದಿದ್ದಾರೆ. ವಿದ್ಯಾರ್ಥಿನಿಯು ಶವವಾಗಿ ಪತ್ತೆಯಾದ ಏ. 15 ರವರೆಗೂ ಪೊಲೀಸರು ಕಾಣೆ ಪ್ರಕರಣ ದಾಖಲಿಸಿಕೊಂಡಿರಲಿಲ್ಲ.

ಶವ ಪತ್ತೆ ನಂತರ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸುದರ್ಶನ ಎನ್ನುವ ಶಂಕಿತ ಆರೋಪಿಯನ್ನು ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ. ಆದರೆ, ಇದು ಅತ್ಯಾಚಾರ ಮತ್ತು ಕೊಲೆ ಪ್ರಕರಣವಾಗಿದ್ದು ಸಮಗ್ರ ತನಿಖೆ ನಡೆಸಬೇಕು ಎಂದು ಪಾಲಕರು ಮತ್ತು ಕಾಲೇಜಿನ ವಿದ್ಯಾರ್ಥಿ ಸಮೂಹ ಗುರುವಾರ ಪ್ರತಿಭಟನೆ ಮಾಡಿದರು. ಪಾಲಕರಿಂದ ಮತ್ತೊಂದು ದೂರು ಪಡೆದುಕೊಂಡ ಪೊಲೀಸರು ಸಮಗ್ರ ತನಿಖೆ ಆರಂಭಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.