ಲಿಂಗಸುಗೂರು: 'ಜಿಲ್ಲೆಯ ಎಲ್ಲ ತಾಲ್ಲೂಕುಗಳ ಬಿಸಿಎಂ ಇಲಾಖೆ ವಸತಿ ನಿಲಯಗಳಿಗೆ ಬೇಕಾಗುವ ಸಾಮಗ್ರಿಗಳ ಖರೀದಿಯಲ್ಲಿ ಅವ್ಯವಹಾರ ಮಾಡಿದ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ವಿರುದ್ಧ ಕ್ರಮ ಜರಗಿಸಬೇಕು’ ಎಂದು ಆಗ್ರಹಿಸಿ ಕರವೇ ತಾಲ್ಲೂಕು ಘಟಕದ ಪದಾಧಿಕಾರಿಗಳು ಬುಧವಾರ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.
‘ಸಾಮಗ್ರಿಗಳ ಖರೀದಿಯಲ್ಲಿ ಕೆಟಿಟಿಪಿ ನಿಯಮಗಳನ್ನು ಪಾಲಿಸದೆ ಒಂದೇ ಏಜನ್ಸಿಯವರಿಗೆ ಒಂದು ದಿನಾಂಕ ಇರುವ ನಕಲಿ ಬಿಲ್ ಸೃಷ್ಟಿಸಿ ಸರ್ಕಾರ ಬಿಡುಗಡೆಗೊಳಿಸಿರುವ ಅನುದಾನವನ್ನು ಬಿಸಿಎಂ ಜಿಲ್ಲಾ ಅಧಿಕಾರಿ ಅಶೋಕ ದುರುಪಯೋಗ ಮಾಡಿಕೊಂಡಿದ್ದಾರೆ’ ಎಂದು ಆರೋಪಿಸಿದರು.
‘ಲಿಂಗಸುಗೂರು ತಾಲ್ಲೂಕಿನ ಬಿಸಿಎಂ ವಸತಿ ನಿಲಯಗಳಿಗೆ ಟೆಂಡರ್‌ನ ಕರಾರಿನಂತೆ ಆಹಾರ ಸರಬರಾಜು ಮಾಡುವ ಬೆಂಗಳೂರು ಮೂಲದ ಗುತ್ತಿಗೆದಾರರು, ಆಹಾರ ಸರಬರಾಜು ಮಾಡಲು ಉಪಗುತ್ತಿಗೆ ನೀಡಿದ್ದಾರೆ. ಆಹಾರ ಪದಾರ್ಥಗಳನ್ನು ಹಾಸ್ಟೆಲ್‌ಗಳಿಗೆ ಸರಬರಾಜು ಮಾಡದೇ ಗುತ್ತಿಗೆದಾರರು ನೇರವಾಗಿ ವಾರ್ಡನ್‌ಗಳಿಗೆ ಪ್ರತಿ ತಿಂಗಳು ಹಣ ನೀಡುತ್ತಿದ್ದಾರೆ. ವಾರ್ಡನ್‌ಗಳು ಕಡಿಮೆ ದರದಲ್ಲಿ ಕಳಪೆ ಆಹಾರ ಪದಾರ್ಥಗಳನ್ನು ಖರೀದಿಸಿ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ತಾಲ್ಲೂಕಿನ ಸಜ್ಜಲಗುಡ್ಡ ಗ್ರಾಮದ ವಸತಿನಿಲಯದ ಮಕ್ಕಳಿಗೆ ಕಳೆದ 8 ವರ್ಷಗಳಿಂದ ಚಿಕನ್, ಮೊಟ್ಟೆ ನೀಡದೇ ಹಣ ದುರಪಯೋಗ ಮಾಡಿದ ವಾರ್ಡನ್ ಅಮಾನತು ಮಾಡಬೇಕು. ಆನ್ವರಿ ಗ್ರಾಮದ ವಸತಿನಿಲಯಕ್ಕೆ ಪ್ರತಿದಿನ ಹೋಗದೆ ತಿಂಗಳಿಗೊಮ್ಮೆ ಭೇಟಿ ನೀಡುವ ವಾರ್ಡನ್ ವಿರುದ್ಧ ಮತ್ತು ಮುದಗಲ್ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯದಲ್ಲಿ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಿನ ಸಂಖ್ಯೆ ತೋರಿಸಿದ ವಾರ್ಡನ್ ವಿರುದ್ಧ ಕ್ರಮಕೈಗೊಳ್ಳಬೇಕು’ ಆಗ್ರಹಿಸಿದರು.
ಕರವೇ ಪ್ರಧಾನ ಕಾರ್ಯದರ್ಶಿ ಶರಣಬಸವ ಈಚನಾಳ, ಮುತ್ತಣ್ಣ ಗುಡಿಹಾಳ, ಮಹಾಂತೇಶ ಹೂಗಾರ, ರಾಜು ರೆಡ್ಡಿ, ರಾಜೇಶ ಮಾಣಿಕ್, ಅಂಜನೇಯ ನಾಯಕ, ಜೀವಾ ನಾಯಕ, ಮೌನೇಶ ನಾಯಕ, ಪ್ರಕಾಶ ಮಡ್ಡಿಕಾರ, ಮಂಜುನಾಥ ಗಂಗಾವತಿ, ಈಶ್ವರ ವಿಶ್ವಕರ್ಮ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.