ಲಿಂಗಸುಗೂರು: ತಾಲ್ಲೂಕಿನ ಕರಡಕಲ್ಲನ ಬಿಲ್ಲಮರಾಜನ ಬೆಟ್ಟದ ಕೆಳಭಾಗದ ಗುರುಲಿಂಗೇಶ್ವರ ಕರ್ತೃ ಗದ್ದುಗೆ ಮೇಲಿನ ಈಶ್ವರ ಲಿಂಗ ಮತ್ತು ಬಸವಣ್ಣ ಮೂರ್ತಿಗಳು ಭಗ್ನಗೊಂಡಿವೆ.
ಈಶ್ವರ ಮೂರ್ತಿಯ ಮೇಲ್ಭಾಗದ ಲಿಂಗ ಹಾಗೂ ಬಸವಣ್ಣ ಮೂರ್ತಿಯ ಕುತ್ತಿಗೆ ಭಾಗವನ್ನು ದುಷ್ಕರ್ಮಿಗಳು ಕತ್ತರಿಸಿಕೊಂಡು ಹೋಗಿದ್ದಾರೆ. ಗದ್ದುಗೆ ಹಿಂಭಾಗದಲ್ಲಿ ಆಳವಾದ ಗುಂಡಿ ಅಗೆಯಲಾಗಿದೆ.
ಯಾದವ ವಂಶದ ಬಿಲ್ಲಮರಾಜ ಆಳಿದ ಕೋಟೆ ಕೊತ್ತಲು, ದೇವಸ್ಥಾನಗಳು, ಮೂರು ಸುತ್ತಿನ ಕೋಟೆ ಭಾಗಶಃ ನಿಧಿಗಳ್ಳರ ಹಾವಳಿಗೆ ನೆಲಸಮಗೊಳ್ಳುತ್ತ ಬಂದಿವೆ. ಕುಣಿಸೋಮೇಶ್ವರ ದೇವಸ್ಥಾನದ ಮೂರ್ತಿ, ಶಿಲಾಶಾಸನ ಸ್ಥಳಗಳಲ್ಲಿ ಕೂಡ ಹಲವು ಬಾರಿ ನಿಧಿಗಳ್ಳರ ಕೈಚಳಕ ನಡೆದಿರುವ ಸಂಗತಿಗಳು ಬೆಳಕಿಗೆ ಬಂದಿವೆ.
ಹತ್ತು ಹಲವು ಘಟನೆಗಳು ಈ ಪ್ರದೇಶದಲ್ಲಿ ನಡೆದಿದ್ದರು ಕೂಡ ಶಿಲಾಶಾಸನ, ಮೂರ್ತಿಗಳು ಭಗ್ನಗೊಂಡಿರಲಿಲ್ಲ. ನಾಲ್ಕು ದಿನಗಳ ಹಿಂದೆಯಷ್ಟೆ ಜರುಗಿದ ಈ ಘಟನೆಯಲ್ಲಿ ಈಶ್ವರ, ಬಸವಣ್ಣ ಮೂರ್ತಿಗಳ ಭಗ್ನಗೊಳಿಸಿ ಅದರ ಪಳಿಯುಳಿಕೆ ತೆಗೆದುಕೊಂಡು ಹೋಗಿದ್ದಾರೆ.
‘ಐತಿಹಾಸಿಕ ಪ್ರಸಿದ್ಧ ಬಿಮ್ಮರಾಜನ ಬೆಟ್ಟದಲ್ಲಿ ನಡೆಯುತ್ತಿರುವ ನಿಧಿಗಳ್ಳರ ಕೈಚಳಕ ಹಾಗೂ ದುಷ್ಕರ್ಮಿಗಳ ಗುಂಪು ದೇವರ ಮೂರ್ತಿಗಳ ಭಗ್ನಗೊಳಿಸಿರುವ ಕುರಿತು ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ಐತಿಹಾಸಿಕ ಕುರುಹುಗಳ ಸಂರಕ್ಷಣೆಗೆ ಮುಂದಾಗಬೇಕು’ ಎಂದು ಸಮಾಜ ಸೇವಕ ರಮೇಶ ಕಟ್ಟಿಮನಿ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.