ADVERTISEMENT

ರಾಯಚೂರಿನಲ್ಲಿ ಇಟಾಲಿಯನ್‌ ಮಾದರಿ ಪೀಜಾ

ಪಿ.ಹನುಮಂತು
Published 20 ಜೂನ್ 2019, 11:17 IST
Last Updated 20 ಜೂನ್ 2019, 11:17 IST
ರಾಯಚೂರು ಪೀಪಿಜಾ ಜೋನ್‌ನಲ್ಲಿ ತಯಾರಿಸಲಾದ ವಿಶೇಷ ಪೀಜಾ
ರಾಯಚೂರು ಪೀಪಿಜಾ ಜೋನ್‌ನಲ್ಲಿ ತಯಾರಿಸಲಾದ ವಿಶೇಷ ಪೀಜಾ   

ರಾಯಚೂರು: ನಗರದ ಎಲ್‌ವಿಡಿ ಕಾಲೇಜು ರಸ್ತೆಯಲ್ಲಿರುವ ರಾಯಚೂರು ಪೀಜಾ ಜೋನ್‌ನಲ್ಲಿ ಇಟಾಲಿಯನ್‌ ಮಾದರಿಯ ಪಿಜಾಗಳನ್ನು ತಯಾರಿಸಲಾಗುತ್ತಿದ್ದು, ಇಲ್ಲಿನ ಪೀಜಾಗಳಿಗೆ ಜನರು ಮನಸೋತಿದ್ದಾರೆ.

ಈ ಮಾರ್ಗದಲ್ಲಿ ಶಾಲಾ– ಕಾಲೇಜುಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ವಿದ್ಯಾರ್ಥಿಗಳು ಹೆಚ್ಚಾಗಿ ಬರುತ್ತಾರೆ. ಯುವಕ– ಯುವತಿಯರು ತರಹೇವಾರಿ ತಿಂಡಿಗಳನ್ನು ಇಷ್ಟಪಡುವುದರಿಂದ ಪೀಜಾಕ್ಕೆ ಹೆಚ್ಚಿನ ಬೇಡಿಕೆಯೂ ಇದೆ.

ಜೋನ್‌ ಮಾಲೀಕ ಟಿ.ಆರ್.ಮಂಜುನಾಥ ಪಿಯುಸಿ ವ್ಯಾಸಂಗ ಮಾಡಿದ್ದು, ಮೈಸೂರಿನ ಪೀಜಾ ಹಟ್‌ನಲ್ಲಿ ನಾಲ್ಕು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಅಲ್ಲಿದ್ದಾಗಲೇ ಪೀಜಾ ಮಾಡುವುದನ್ನು ಕಲಿತುಕೊಂಡಿದ್ದಾರೆ. 2011ರಲ್ಲಿ ರಾಯಚೂರಿನಲ್ಲಿ ಪೀಜಾ ಜೋನ್‌ ಆರಂಭಿಸಿ ವಿಶೇಷವಾದ ಪೀಜಾವನ್ನು ತಯಾರಿಸಿ ಜನರಿಗೆ ಉಣಬಡಿಸುತ್ತಿದ್ದಾರೆ. ಜೋನ್‌ನಲ್ಲಿ ಮೂವರು ಯುವಕರಿಗೆ ಕೆಲಸ ಒದಗಿಸಿ, ಆ ಯುವಕರಿಗೂ ಪೀಜಾ ತಯಾರಿಸುವುದನ್ನು ಕಲಿಸಿಕೊಟ್ಟಿದ್ದಾರೆ.

ADVERTISEMENT

‘ಗ್ರಾಹಕರು ಬಂದು ಆರ್ಡರ್‌ ನೀಡಿದ ನಂತರವೇ ಪೀಜಾವನ್ನು ತಯಾರಿಸಿ ಕೊಡಲಾಗುತ್ತದೆ. ಆದ್ದರಿಂದ ಆರ್ಡರ್‌ ನೀಡಿ 15 ನಿಮಿಷಗಳ ಕಾಯಲೇಬೇಕು. ನಗರ ಮಾತ್ರವಲ್ಲದೇ ಸುತ್ತಮುತ್ತಲಿನ ಗ್ರಾಮಗಳ ಜನರು ಕೂಡ ಪಾರ್ಸಲ್‌ ತೆಗೆದುಕೊಂಡು ಹೋಗುತ್ತಾರೆ’ ಎನ್ನುವುದು ಮಾಲೀಕ ಟಿ.ಆರ್.ಮಂಜುನಾಥ ವಿವರಣೆ.

ಕ್ಲಾಸಿಕ್ ಹಾಗೂ ಸುಪ್ರೀಂ ಎಂಬ ಬಗೆಬಗೆಯ ಪೀಜಾ ಮಾಡಲಾಗುತ್ತಿದ್ದು, ಒಟ್ಟು 18 ವಿಧಗಳ ಪೀಜಾಗಳಿವೆ. ಬೆಲೆ ₹80 ರಿಂದ ಆರಂಭಗೊಂಡು ₹180 ರವರೆಗಿದೆ. ಆರಂಭದ ದರಕ್ಕೆ ನಾಲ್ಕು ಪೀಸುಗಳ ಪೀಜಾ ಕೊಡಲಾಗುತ್ತದೆ. ಆರು ಪೀಸುಗಳ ಪಿಜಾಕ್ಕೆ ₹ 40 ಬೆಲೆ ಹೆಚ್ಚು. ಎಂಟು ಪೀಸುಗಳ ಪಿಜಾಕ್ಕೆ ಇನ್ನೂ ₹40 ಬೆಲೆ ಹೆಚ್ಚು

ಮಕ್ಕಳಿಗಾಗಿ ವಿಶೇಷ ಪೀಜಾಗಳನ್ನು ಮಾಡಲಾಗುತ್ತದೆ. ಕ್ಲಾಸಿಕ್‌ ಬಗೆಯ ಪೀಜಾದಲ್ಲಿ ತರಕಾರಿ ಕಡಿಮೆಯಿರುತ್ತದೆ. ಸುಪ್ರೀಂ ಬಗೆಯ ಪೀಜಾದಲ್ಲಿ ತರಕಾರಿ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಇದು ಬಹಳ ರುಚಿಕರವಾಗಿರುತ್ತದೆ.

‘ಪೀಜಾ ತಯಾರಿಸಲು ಬೇಕಾಗಿರುವ ಮೈದಾ ಹಿಟ್ಟಿನಿಂದ ಸಿದ್ಧಪಡಿಸುವ ಬೇಸ್‌ನ್ನು ನಮ್ಮಲ್ಲಿಯೇ ತಯಾರಿಸುತ್ತೇವೆ. ಆದರೆ, ಬೇರೆಯವರು ಸಿದ್ಧಗೊಂಡ ಬೇಸ್‌ ತರಿಸಿಕೊಂಡು ಪೀಜಾ ತಯಾರಿಸುತ್ತಾರೆ. ಬೇಸ್ ನಾವೇ ತಯಾರಿಸುವುದರಿಂದ ಪೀಜಾ ರುಚಿಕರವಾಗಿರುತ್ತದೆ. ಹಾಟ್‌ ಮತ್ತು ಸ್ಪೈಸಿ ಪೀಜಾ ಹಾಗೂ ಎಕ್ಸೊಟಿಕಾ ಪೀಜಾಕ್ಕೆ ಹೆಚ್ಚಿನ ಬೇಡಿಕೆಯಿದೆ. ಬಹಳಷ್ಟು ಜನರು ಇದೇ ಪೀಜಾ ಬಯಸುತ್ತಾರೆ’ ಎಂದರು.

‘ಪೀಜಾದಲ್ಲಿ ಈರುಳ್ಳಿ, ಡೊಣ್ಣೆ ಮೆಣಸಿನಕಾಯಿ, ಟೊಮೆಟೊ, ಹಸಿ ಮೆಣಸಿನಕಾಯಿ, ಸ್ವೀಟ್‌ ಕಾರ್ನ್‌, ಚೀಸ್‌ ಹಾಗೂ ಪನ್ನೀರ್‌ ಸೇರಿದಂತೆ ವಿವಿಧ ತರಕಾರಿಯನ್ನು ಬಳಕೆ ಮಾಡಲಾಗುತ್ತದೆ. ಒಂದೊಂದು ವಿಧದ ಪೀಜಾದಲ್ಲಿ ಬೇರೆ ಬೇರೆ ತರಕಾರಿ ಬಳಸಲಾಗುತ್ತದೆ. ಬೇಸ್‌ ಮುಂಚಿತವಾಗಿ ತಯಾರಿಸಿಕೊಂಡು ಇಟ್ಟುಕೊಳ್ಳಲಾಗುತ್ತದೆ. ಗ್ರಾಹಕರು ಯಾವ ವಿಧದ ಪೀಜಾ ಆರ್ಡರ್ ನೀಡುತ್ತಾರೊ ಆ ವಿಧ ಪೀಜಾದಲ್ಲಿ ಬಳಸುವ ತರಕಾರಿಯನ್ನು ಬೇಸ್‌ನಲ್ಲಿ ಹಾಕಿ ಪೀಜಾ ತಯಾರಿಸಲಾಗುತ್ತದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.