
ಲಿಂಗಸುಗೂರು: ಗತಕಾಲದ ವೈಭವ ಸಾರುವ ತಾಲ್ಲೂಕಿನ ಜಲದುರ್ಗ ಕೋಟೆಯಲ್ಲಿ ಪ್ರವಾಸಿಗರ ಅನುಕೂಲಕ್ಕೆ ಒಂದು ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿದ ಉದ್ಯಾನ ಈಗ ನಿರ್ವಹಣೆ ಕೊರತೆಯಿಂದಾಗಿ ಜಾಲಿ ಗಿಡಗಳ ವನವಾಗಿ ಮಾರ್ಪಟ್ಟಿದೆ.
12ನೇ ಶತಮಾನದಲ್ಲಿ ದೇವಗಿರಿ ಯಾದವ ಅರಸರು ಜಲದುರ್ಗ ಕೋಟೆ ನಿರ್ಮಿಸಿದ್ದಾರೆ. ನಂತರದ ವರ್ಷಗಳಲ್ಲಿ ಬಿಜಾಪುರದ ಆದಿಲ್ ಶಾಹಿ, ವಿಜಯನಗರ ಅರಸರು ಕೋಟೆಯಲ್ಲಿ ಆಳ್ವಿಕೆ ನಡೆಸಿದ್ದರು ಎಂಬುದು ಇತಿಹಾಸದಿಂದ ತಿಳಿದುಬರುತ್ತದೆ.
ಜಲದುರ್ಗದ ಕೋಟೆ ಸುತ್ತಲೂ ಕೃಷ್ಣಾನದಿ ಕವಲೊಡೆದು ಹರಿಯುವ ದೃಶ್ಯ ನಯನ ಮನೋಹರವಾಗಿದೆ. ಈ ಕೋಟೆ ಹಾಗೂ ಸುತ್ತಲಿನ ಪ್ರಕೃತಿ ಸೌಂದರ್ಯ ಸವಿಯಲು ಬರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿದೆ.
ಕೋಟಿ ನೀರುಪಾಲು: ಪ್ರವಾಸೋದ್ಯಮ ಇಲಾಖೆ ಯೋಜನೆಯಡಿ 2019-20ರಲ್ಲಿ ಜಲದುರ್ಗ ಕೋಟೆ ಒಳಗಡೆ ಪ್ರವಾಸಿಗರಿಗೆ ಎರಡು ಉದ್ಯಾನ, ಹೈ–ಟೆಕ್ ಶೌಚಾಲಯ, ಹುಲ್ಲಿನ ಹಾಸು, ವಿಶ್ರಾಂತಿ ಬೆಂಚ್‍ಗಳು, ವಾಕಿಂಗ್ ಟ್ರ್ಯಾಕ್, ಶುದ್ಧ ಹಾಗೂ ಸಮರ್ಪಕ ಕುಡಿಯುವ ನೀರು ಪೂರೈಕೆ, ನದಿ ವೀಕ್ಷಣೆಗಾಗಿ ವೀಕ್ಷಣೆ ಪಾಯಿಂಟ್ ಸೇರಿದಂತೆ ಇತರೆ ಅಭಿವೃದ್ಧಿಗಾಗಿ ₹1 ಕೋಟಿ ಖರ್ಚು ಮಾಡಲಾಗಿದೆ.
ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಿ ಲೋಕೋಪಯೋಗಿ ಇಲಾಖೆಯು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರ ಮಾಡಿದೆ. ಪ್ರವಾಸೋದ್ಯಮ ಇಲಾಖೆಗೆ ಉದ್ಯಾನ ನಿರ್ವಹಣೆ ಮಾಡಲು ಆಗಿಲ್ಲ. ಆದ್ದರಿಂದ ಪಾಳು ಬಿದ್ದಿದೆ. ಉದ್ಯಾನದಲ್ಲಿ ಮುಳ್ಳಿನ ಜಾಲಿ ಗಿಡಗಳು ಹೇರಳವಾಗಿ ಬೆಳೆದು ನಿಂತು ಜಾಲಿ ಗಿಡಗಳ ವನವಾಗಿ ಮಾರ್ಪಾಡಾಗಿದೆ. ಇದರಿಂದ ಕೋಟಿ ರೂಪಾಯಿ ಕೃಷ್ಣೆಯ ಪಾಲಾಗಿದೆ.
ಮರಣದಂಡನೆ ನೀಡುವ ಬುರುಜು, ಇತರೆ ಕುರುಹುಗಳು ಕಣ್ಮರೆಯಾಗುತ್ತಿವೆ. ಇದರ ಬಗ್ಗೆ ಸರ್ಕಾರ ಕಾಳಜಿವಹಿಸಬೇಕಾಗಿದೆ. ಪ್ರವಾಸಕ್ಕೆಂದು ರಾಜ್ಯದ ವಿವಿಧ ಜಿಲ್ಲೆ ಮತ್ತು ಅಂತರರಾಜ್ಯಗಳಿಂದ ಆಗಮಿಸುವ ಪ್ರವಾಸಿಗರು ವರ್ಷದಿಂದ ವರ್ಷಕ್ಕೆ ನೆಲಸಮಗೊಳ್ಳುತ್ತಿರುವ ಕೋಟೆ–ಕೊತ್ತಲು ಕುರುಹುಗಳು ಕಂಡು ನಿರಾಶೆಗೊಳ್ಳುತ್ತಾರೆ.
ಜಲದುರ್ಗ ಕೋಟೆ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಇಲ್ಲಿ ವಾಸ್ತವ್ಯ ಮಾಡಲು ಯಾತ್ರಿ ನಿವಾಸ ಇಲ್ಲದಾಗಿದೆ. ಪ್ರವಾಸಿಗರು ಕುಡಿಯುವ ನೀರಿನೊಂದಿಗೆ ಇಲ್ಲಿಗೆ ಬರಬೇಕಾದ ಸ್ಥಿತಿ ಇದೆ. ಕನಿಷ್ಠ ಶುದ್ಧ ನೀರಿನ ಸೌಲಭ್ಯ ಇಲ್ಲದಾಗಿದೆ. ಇಂಥ ದುಸ್ಥಿತಿಯಲ್ಲಿ ಐತಿಹಾಸಿಕ ಜಲದುರ್ಗ ಕೋಟೆ ಇದೆ ಎಂಬುದು ವಿಪರ್ಯಾಸದ ಸಂಗತಿಯಾಗಿದೆ ಎಂದು ಪ್ರವಾಸಿಗರು ಹೇಳುತ್ತಾರೆ.
ಐತಿಹಾಸಿಕ ಸಾಂಸ್ಕೃತಿಕ ಪ್ರವಾಸಿ ತಾಣವಾದ ಜಲದುರ್ಗ ಕೋಟೆ ಅಭಿವೃದ್ಧಿಗೊಳಿಸದೇ ನಿರ್ಲಕ್ಷ್ಯಕ್ಕೊಳಗಾಗಿದೆ. ಉದ್ಯಾನ ನಿರ್ವಹಣೆ ಕೊರತೆಯಿಂದಾಗಿ ಹಾಳಾಗುತ್ತಿರುವುದು ಕೋಟೆಯ ಬಗ್ಗೆ ಆಡಳಿತಕ್ಕೆ ಇರುವ ಕಾಳಜಿಗೆ ಹಿಡಿದ ಕನ್ನಡಿಯಾಗಿದೆಮಹಾದೇವಪ್ಪ ನಾಗರಾಳ ಅಧ್ಯಕ್ಷ ಕನ್ನಡ ಸಾಹಿತ್ಯ ಪರಿಷತ್ ಲಿಂಗಸುಗೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.