ಕವಿತಾಳ: ಜೆಸಿಬಿ ಯಂತ್ರ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ ಕವಿತಾಳ ಠಾಣೆ ಪೊಲೀಸರು, ಅಂದಾಜು ₹38 ಲಕ್ಷ ಮೌಲ್ಯದ ಜೆಸಿಬಿ ಯಂತ್ರವನ್ನು ವಶಪಡಿಸಿಕೊಂಡಿದ್ದಾರೆ.
ಕುಷ್ಟಗಿ ತಾಲ್ಲೂಕಿನ ಹುಲಿಗೇರಿಯ ಬಸವರಾಜ ಕಾವಲಿ ಮತ್ತು ಹುನಗುಂದ ತಾಲ್ಲೂಕಿನ ನಾಗೂರಿನ ಜಗದೀಶ ಶಿವನಗೌಡ ಪರ್ತಗೌಡ ಬಂಧಿತರು.
ಸಮೀಪದ ಬಾಗಲವಾಡ ಗ್ರಾಮದಲ್ಲಿ ನಿಲ್ಲಿಸಿದ್ದ ಹುಲಿಗೇರಿಯ ಶರಣಪ್ಪ ಸಂಗಪ್ಪ ರೂಢಗಿ ಅವರಿಗೆ ಸೇರಿದ ಜೆಸಿಬಿ ಯಂತ್ರವನ್ನು ಅ.13ರಂದು ಕಳವು ಮಾಡಲಾಗಿತ್ತು. ಆರೋಪಿಗಳು ಜೆಸಿಬಿಯಲ್ಲಿದ್ದ ಜಿಪಿಎಸ್ ಟ್ರ್ಯಾಕರ್ ಅನ್ನು ತೆಗೆದು ಪಪ್ಪಾಯಿ ಸಾಗಿಸುತ್ತಿದ್ದ ಲಾರಿಯಲ್ಲಿ ಎಸೆದಿದ್ದರು. ಜಿಪಿಎಸ್ ಜಾಡು ಹಿಡಿದ ಪೊಲೀಸರು ಉತ್ತರ ಪ್ರದೇಶಕ್ಕೆ ತೆರಳಿ ಹುಡುಕಾಟ ನಡೆಸಿದ್ದರೂ ಪತ್ತೆಯಾಗಿರಲಿಲ್ಲ.
ಆರೋಪಿಗಳು ಜೆಸಿಬಿ ಯಂತ್ರ ಮಾರಾಟ ಮಾಡಲು ಜಾಲತಾಣದಲ್ಲಿ ಹರಿಬಿಟ್ಟ ಮಾಹಿತಿ ಆಧರಿಸಿ ಬಾದಾಮಿಯಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಹತ್ತು ದಿನಗಳಲ್ಲಿ ಪ್ರಕರಣ ಬೇಧಿಸಿದ ಸಿರವಾರ ಸರ್ಕಲ್ ಇನ್‌ಸ್ಪೆಕ್ಟರ್ ಶಶಿಕಾಂತ, ಕವಿತಾಳ ಠಾಣೆ ಸಬ್ ಇನ್‌ಸ್ಪೆಕ್ಟರ್ ವೆಂಕಟೇಶ ನಾಯಕ, ಎಎಸ್‌ಐ ರಮೇಶಕುಮಾರ ಮತ್ತು ಸಿಬ್ಬಂದಿ ಮಹೇಶ ಅವರ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಕವಿತಾಳಕ್ಕೆ ಭೇಟಿ ನೀಡಿ ಪ್ರಶಂಸೆ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.