ADVERTISEMENT

ಜೀವ ಇರುವವರೆಗೂ ರೈತರಿಗಾಗಿ ಹೋರಾಟ

ದೇವದುರ್ಗದಲ್ಲಿ ಸಮಾವೇಶ: ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2021, 16:45 IST
Last Updated 10 ಫೆಬ್ರುವರಿ 2021, 16:45 IST
ದೇವದುರ್ಗದಲ್ಲಿ ಬುಧವಾರ ಆಯೋಜಿಸಿದ್ದ ಜೆಡಿಎಸ್‌ ಸಮಾವೇಶವನ್ನು ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು
ದೇವದುರ್ಗದಲ್ಲಿ ಬುಧವಾರ ಆಯೋಜಿಸಿದ್ದ ಜೆಡಿಎಸ್‌ ಸಮಾವೇಶವನ್ನು ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು   

ದೇವದುರ್ಗ: ‘ಜೀವ ಇರುವವರೆಗೂ ನಾನು ರೈತರಿಗಾಗಿ ಹೋರಾಟ ಮಾಡುವೆ. ರೈತರ ವಿಚಾರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸಲಹೆ ಕೊಟ್ಟಿದ್ದೇನೆ. ಈ ಕಾರಣದಿಂದ ಮೋದಿ ಅವರು ನನ್ನ ಬಗ್ಗೆ ಸಂಸತ್‌ನಲ್ಲಿ ಮಾತನಾಡಿದ್ದು ನಿಜ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದರು.

ಪಟ್ಟಣದ ಬಸವ ಕಾಲೇಜು ಹತ್ತಿರ ಬುಧವಾರ ಆಯೋಜಿಸಿದ್ದ ಜೆಡಿಎಸ್‌ ಸಮಾವೇಶ ಹಾಗೂ ರೈತರಿಂದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

‘ಗುರುವಾರ ಬೆಳಿಗ್ಗೆ ದೆಹಲಿಗೆ ತೆರಳುತ್ತಿದ್ದು, ರಾಜ್ಯಸಭೆ ಅಧಿವೇಶನದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ರೈತರ ಬಗ್ಗೆ, ಗ್ರಾಮೀಣ ಅಭ್ಯುದಯದ ಬಗ್ಗೆ ಮಾತನಾಡುತ್ತೇನೆ. ರಾಜ್ಯಕ್ಕೆ ಸಂಬಂಧಿಸಿ ಮಹಾದಾಯಿ, ಕೃಷ್ಣಾ ಹಾಗೂ ಕಾವೇರಿ ನದಿಗಳ ನೀರು ಪಡೆಯುವಲ್ಲಿ ಕಿಂಚಿತ್ತು ಅನ್ಯಾಯವಾಗಲು ಬಿಡುವುದಿಲ್ಲ. ದೆಹಲಿ ಮಟ್ಟದಲ್ಲಿ ಹೇಗೆ ಹೋರಾಟ ಮಾಡಬೇಕು ಎಂಬುದು ಗೊತ್ತಿದೆ’ ಎಂದರು.

ADVERTISEMENT

‘ರಾಜ್ಯ ಸರ್ಕಾರದಲ್ಲಿ ಹಣವಿಲ್ಲ. ಈ ಸರ್ಕಾರದ ಬಗ್ಗೆ ಹಗುರ ಮಾತನಾಡುವುದಿಲ್ಲ. ವ್ಯಕ್ತಿಗತ ನಿಂದನೆಯೂ ಮಾಡುವುದಿಲ್ಲ. ಆದರೆ, ವ್ಯವಸ್ಥೆ ಚೆನ್ನಾಗಿಲ್ಲ’ ಎಂದು ಒಗಟಿನಂತೆ ಹೇಳಿದರು.

‘ರಾಯಚೂರು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೆ ಮುಂದಿನ ದಿನಗಳಲ್ಲಿ ಪ್ರವಾಸ ಮಾಡುತ್ತೇನೆ. ರೈತ ಸಮುದಾಯಕ್ಕೆ, ಬಡವರಿಗಾಗಿ ಕುಮಾರಸ್ವಾಮಿ ಅವರು ಈಗಾಗಲೇ ಯೋಜನೆಗಳನ್ನು ಘೋಷಿಸಿದ್ದಾರೆ. ಬಡತನ ಇರುವ ಕಡೆಗಳಲ್ಲಿ ಹೆಚ್ಚು ಶಕ್ತಿ ಕೊಡುವ ಕೆಲಸ ಆಗಬೇಕಿದೆ. ದೇವದುರ್ಗದ ರೈತರು ತೋರಿಸಿದ ಕಾಳಜಿ, ತಾಳ್ಮೆಗೆ ಆಭಾರಿಯಾಗಿದ್ದೇನೆ' ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜೆಡಿಎಸ್ ನಾಯಕಿ ಕರಿಯಮ್ಮ, ದೇವೇಗೌಡರ ಪುತ್ಥಳಿ ಕಾಣಲು ಮತ್ತು ಆ ಬಡರೈತನನ್ನು ಭೇಟಿ ಮಾಡಲು ರಾಜ್ಯದ ಎಲ್ಲಾ ಜೆಡಿಎಸ್ ಮುಖಂಡರು ಅಪೇಕ್ಷಿಸಿದ್ದರು. ಆ ಕಾರಣಕ್ಕಾಗಿ ದೇವದುರ್ಗದಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮ ನಡೆಯದಂತೆ ಮಾಡಲು ಶಾಸಕ ಶಿವನಗೌಡ ನಾಯಕ ಅವರು ಎಫ್‌ಐಆರ್‌ ದಾಖಲಿಸುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು.

ಜೆಡಿಎಸ್‌ ಮುಖಂಡ ವೈ. ಎಸ್. ವಿ. ದತ್ತ, ಸಮಾವೇಶವು ದೇಶದಲ್ಲಿ ಐತಿಹಾಸಿಕವಾಗಿದೆ. ಉತ್ತರ ಕರ್ನಾಟಕದ ಜನರು ಅನ್ನ-ನೀರು ಪಡೆದು ಬದುಕು ಉಜ್ವಲ ಮಾಡಿಕೊಳ್ಳಲು ರೈತ ನಾಯಕ ಎಚ್‌.ಡಿ. ದೇವೇಗೌಡರೇ ಕಾರಣ. ಎನ್‌ಆರ್‌ ಬಿಸಿ ಬಲದಂಡೆಗೆ ನೃಪತುಂಗನ ನಾಡಿಗೆ ದೇವೇಗೌಡರ ಕೊಡುಗೆ ಬಹುದೊಡ್ಡದು. ಉತ್ತರ ಕರ್ನಾಟಕದ ಜನರು ವಿಜಯಪುರದಲ್ಲಿ ಇಂದಿರಾಗಾಂಧಿಗೆ ಚಿನ್ನದ ತುಲಾಭಾರ ಮಾಡಿದರು ಕೂಡಾ ಕೃಷ್ಣಾ ನದಿಗೆ ಹಣ ನೀಡಲಿಲ್ಲ. ಆದರೆ ದೇವೇಗೌಡರು ಭಾರತದ ಎಲ್ಲಾ ರಾಜ್ಯಗಳಿಗೆ ನೀರಾವರಿ ಯೋಜನೆಗಳನ್ನು ಘೋಷಿಸಿ ಕರ್ನಾಟಕಕ್ಕೆ ಅತಿಹೆಚ್ಚು ಅನುದಾನವನ್ನು ನೀಡುವಲ್ಲಿ ಬಹಳ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ತಿಳಿಸಿದರು.

ದೇವದುರ್ಗ ತಾಲ್ಲೂಕಿನ ಜೆಡಿಎಸ್ ಪಕ್ಷದ ಅಧ್ಯಕ್ಷರಾಗಿ ಬುಡ್ಡನಗೌಡ ಅವರು ಪದಗ್ರಹಣ ಮಾಡಿ, ಮಾತನಾಡಿದರು.

ಜಿಲ್ಲಾ ಜೆಡಿಎಸ್ ಅಧ್ಯಕ್ಷ ವಿರುಪಾಕ್ಷಪ್ಪ, ಶಾಸಕರಾದ ರಾಜಾ ವೆಂಕಟಪ್ಪ ನಾಯಕ, ವೆಂಕಟರಾವ್‌ ನಾಡಗೌಡ, ಬಂಡೆಪ್ಪ ಕಾಶೆಂಪೂರ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಮಹಾಂತೇಶ್ ಅತ್ತನೂರು, ಜೆಡಿಎಸ್ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ, ಮುಖಂಡರಾದ ಯೂಸುಫ್ ಖಾನ್, ರವಿ ಪಾಟೀಲ, ದೇವದುರ್ಗ ಪುರಸಭೆಯ ಅಧ್ಯಕ್ಷ ಹನುಮೇಗೌಡ ಶಂಕರ ಬಂಡಿ, ಸಿದ್ದು ಬಂಡಿ, ಶಾಲಂ ಪಾಷಾ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.