ADVERTISEMENT

ರಾಯಚೂರು: ಪತ್ರಕರ್ತರಿಗಾಗಿ ರಾಜ್ಯ ಮಟ್ಟದ ಕಥೆ, ಕವನ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 11:49 IST
Last Updated 17 ಜನವರಿ 2026, 11:49 IST
   

ರಾಯಚೂರು: ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಬೆಳ್ಳಿ ಮಹೋತ್ಸವದ ಅಂಗವಾಗಿ ಪತ್ರಕರ್ತರಿಗಾಗಿ ರಾಜ್ಯ ಮಟ್ಟದ ಕಥೆ, ಕವನ ಸ್ಪರ್ಧೆ ಏರ್ಪಡಿಸಲಾಗಿದೆ.

ಆಯ್ಕೆಯಾದ ಕಥೆ, ಕವನ, ಲೇಖನಗಳನ್ನು ಪ್ರತ್ಯೇಕ ಮೂರು ಪುಸ್ತಕಗಳಾಗಿ ಪ್ರಕಟಿಸಲು ನಿರ್ಧರಿಸಲಾಗಿದೆ ಎಂದು ರಿಪೋರ್ಟರ್ಸ್ ಗಿಲ್ಡ್ ಅಧ್ಯಕ್ಷ ವಿಜಯ ಜಾಗಟಗಲ್‌ ನಗರದಲ್ಲಿ ಶನಿವಾರ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯಮಟ್ಟದ ಕವನ ಹಾಗೂ ಕಥಾ ಸ್ಪರ್ಧೆಯಲ್ಲಿ ರಾಜ್ಯದ ಯಾವುದೇ ಭಾಗದ ಪತ್ರಕರ್ತರು ಭಾಗವಹಿಸಬಹುದಾಗಿದೆ. ರಾಯಚೂರು ಜಿಲ್ಲಾ ಪತ್ರಕರ್ತರಿಂದಲೂ ಪ್ರತ್ಯೇಕವಾಗಿ ಲೇಖನಗಳನ್ನು ಆಹ್ವಾನಿಸಲಾಗಿದೆ ಎಂದು ಹೇಳಿದರು.

ADVERTISEMENT

ಕಥಾ ಸ್ಪರ್ಧೆಯ ವಿಜೇತರಿಗೆ ಪ್ರಥಮ ಬಹುಮಾನವಾಗಿ ₹10000, ದ್ವಿತೀಯ ಬಹುಮಾನವಾಗಿ ₹ 7000, ತೃತೀಯ ಬಹುಮಾನವಾಗಿ ₹ 3,000 ನೀಡಲಾಗುವುದು.  ಕವನ ಸ್ಪರ್ಧೆಯ ವಿಜೇತರಿಗೆ ₹5000, ₹ 3000 ಹಾಗೂ ₹ 2000 ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವಾಗಿ ಕೊಡಲಾಗುವುದು ಎಂದರು.

ಕಥೆ, ಕವನ ಸ್ಪರ್ಧೆಗೆ ಹಾಗೂ ಆಹ್ವಾನಿತ ಲೇಖನಗಳಿಗೆ ಯಾವುದೇ ನೋಂದಣಿ ಶುಲ್ಕ ಇರುವುದಿಲ್ಲ. ಸ್ಪರ್ಧೆಗೆ ಕಳುಹಿಸುವ ಕಥೆ, ಕವನ ಸ್ವರಚಿತವಾಗಿರಬೇಕು .ಯಾವುದೇ ಪುಸ್ತಕ, ಪತ್ರಿಕೆಗಳಲ್ಲಿ ಪ್ರಕಟವಾಗಿರಬಾರದು. ಕಥೆ 1500 ಗರಿಷ್ಠ ಪದಮಿತಿಯಲ್ಲಿರಬೇಕು. ಸ್ಪರ್ಧೆಯಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಪತ್ರಕರ್ತರಾಗಿರಬೇಕು ಎಂದು ತಿಳಿಸಿದರು.

ಕಥೆ, ಕವನದ ಜೊತೆ ಕೆಲಸ ಮಾಡುವ ಸುದ್ದಿ ಸಂಸ್ಥೆ ನೀಡಿದ ಗುರುತಿನ ಚೀಟಿ, ಪತ್ರ ಅಥವಾ ಮಾನ್ಯತಾ ಚೀಟಿ ಕಡ್ಡಾಯ. ಒಬ್ಬ ಪತ್ರಕರ್ತ ಎರಡೂ ವಿಭಾಗದಲ್ಲಿ ಸ್ಪರ್ಧಿಸಬಹುದು ಒಂದು ಕಥೆ, ಒಂದು ಕವನ ಮಾತ್ರ ಕಳುಹಿಸಬೇಕು.  ಲೇಖನ, ಕಥೆ, ಕವನವನ್ನು ನುಡಿ/ಯುನಿಕೋಡ್ ತಂತ್ರಾಂಶದಲ್ಲಿ ಸಿದ್ದಪಡಿಸಿ ಇ-ಮೇಲ್: rrgraichur@gmail.com ಗೆ ಕಳುಹಿಸಬೇಕು. ಕವನ, ಕಥೆ, ಲೇಖನಗಳನ್ನು ಫೆಬ್ರುವರಿ 25 ರೊಳಗೆ ರಾಯಚೂರಿನ ಗಿಲ್ಸ್‌ ಕಚೇರಿಗೆ ತಲುಪಬೇಕು ಎಂದು ಹೇಳಿದರು.

ರಾಯಚೂರು ಜಿಲ್ಲಾ ಪತ್ರಕರ್ತರು 400 ಪದಗಳ ಮಿತಿಯಲ್ಲಿ ಲೇಖನ ಕಳುಹಿಸಬೇಕು, ಆಯ್ಕೆಯಾದ ಲೇಖನಗಳನ್ನು ಪುಸ್ತಕದಲ್ಲಿ ಪ್ರಕಟಿಸಲಾಗುವುದು. ಲೇಖನಗಳಿಗೆ ಯಾವುದೇ ಬಹುಮಾನಗಳು ಇರುವುದಿಲ್ಲ. ಪ್ರತ್ಯೇಕ ಹಾಳೆಯಲ್ಲಿ ಸ್ವ-ಪರಿಚಯ ಬರೆದು ಕಳುಹಿಸಬೇಕು.  ಹೆಸರು, ವಿಳಾಸ, ಕಿರುಪರಿಚಯ, ಭಾವಚಿತ್ರ, ಮೊಬೈಲ್ ಸಂಖ್ಯೆ, ಇ-ಮೇಲ್ ವಿಳಾಸ ನಮೂದಿಸಿರಬೇಕು. ಕಥೆ, ಕವನ, ಲೇಖನಗಳ ಆಯ್ಕೆ ಸಮಿತಿ ತೀರ್ಮಾನವೇ ಅಂತಿಮವಾಗಿರಲಿದೆ

ಹೆಚ್ಚಿನ ಮಾಹಿತಿಗಾಗಿ: ಮೊ.ಸಂ: 9964804206, 9739334156, 8971451949, 9902059734 ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.