ADVERTISEMENT

ಕನ್ನಡ ಬದುಕಿನ ಭಾಷೆಯಾಗಲಿ

ಶಾಸಕ ವೆಂಕಟರಾವ್ ನಾಡಗೌಡ ಅಭಿಮತ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2019, 16:01 IST
Last Updated 1 ನವೆಂಬರ್ 2019, 16:01 IST
 ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ವೆಂಕಟರಾವ್ ನಾಡಗೌಡ ಮಾತನಾಡಿದರು
 ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ವೆಂಕಟರಾವ್ ನಾಡಗೌಡ ಮಾತನಾಡಿದರು   

ಸಿಂಧನೂರು: ಕನ್ನಡದ ಸಮಸ್ಯೆ ಎಂಬುದು ಕೇವಲ ಭಾಷೆ ಸಮಸ್ಯೆಯಲ್ಲ. ಅದು ಕನ್ನಡಿಗರ ಸಾಮಾಜಿಕ, ಆರ್ಥಿಕ ಸಮಸ್ಯೆಯೂ ಹೌದು. ಕನ್ನಡಿಗರನ್ನು ಉಳಿಸಿದರೆ ಕನ್ನಡ ಉಳಿಯುತ್ತದೆ. ಕನ್ನಡವನ್ನು ಬದುಕಿನ ಭಾಷೆಯಾಗಿ ಮಾಡುವುದು ಹೇಗೆ ಎಂದು ಸರ್ಕಾರ ಚಿಂತನೆ ಮಾಡಿ ಕಾರ್ಯರೂಪಕ್ಕೆ ತರಬೇಕು ಎಂದು ಶಾಸಕ ವೆಂಕಟರಾವ್ ನಾಡಗೌಡ ಅಭಿಪ್ರಾಯಪಟ್ಟರು.

ಸ್ಥಳೀಯ ಸ್ತ್ರೀಶಕ್ತಿ ಭವನದಲ್ಲಿ ತಾಲ್ಲೂಕು ಆಡಳಿತ ವತಿಯಿಂದ ಶುಕ್ರವಾರ ನಡೆದ 64ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕನ್ನಡ ಭಾಷೆಯ ಉಳಿವು, ಬೆಳೆವು ಶಿಕ್ಷಣ, ಸಾಮಾಜಿಕ, ಆರ್ಥಿಕ ಸ್ಥಿತಿಗೆ ಸಂಬಂಧಿಸಿದೆ. ಮೊದಲು ಆ ಭಾಷೆಯ ಶಿಕ್ಷಣ ನಂತರ ಆ ಭಾಷಿಕರಿಗೆ ಉದ್ಯೋಗ ನೀಡಬೇಕು ಆಗ ಕನ್ನಡ ಉಳಿಯುತ್ತದೆ ಎಂದರು.

ADVERTISEMENT

ಕನ್ನಡಕ್ಕೆ ಸಾವಿರಾರು ವರ್ಷಗಳ ಚರಿತ್ರೆ ಇದೆ. ಸಹೃದಯತೆ, ಆತಿಥ್ಯ ಸತ್ಕಾರ ಮತ್ತು ಸಹಬಾಳ್ವೆಗೆ ಕನ್ನಡಿಗರು ಯಾವತ್ತೂ ಹೆಸರಾದವರು. ವಿವಿಧ ರಾಜ್ಯಗಳ ಜನರು ಕರ್ನಾಟಕದಲ್ಲಿ ನೆಮ್ಮದಿಯ ಬದುಕು ಕಂಡುಕೊಂಡಿರುವುದೇ ಅದಕ್ಕೆ ಸಾಕ್ಷಿ. ಅನ್ಯ ಭಾಷೆಯಗಳ ವ್ಯಾಮೋಹಕ್ಕೆ ಒಳಗಾಗಿರುವ ಕನ್ನಡಿಗರಿಂದಲೇ ಕನ್ನಡ ಭಾಷೆ ಮರೆಯಾಗುತ್ತಿರುವುದು ದುರಂತದ ಸಂಗತಿಯಾಗಿದೆ ಎಂದರು.

ಅನ್ಯ ಭಾಷೆಗಳನ್ನು ಕಲಿಯಬೇಕು, ಅಭಿಮಾನಿಸಬೇಕು, ಆದರೆ ಸ್ವಾಭಿಮಾನದ ಸಂಕೇತವಾಗಿರುವ ಮಾತೃಭಾಷೆ ಮರೆಯಬಾರದು. ಬೇರೆ ಭಾಷೆಗಳ ನಡುವೆ ಕನ್ನಡಾಭಿವೃದ್ದಿಗೆ ಶ್ರಮಿಸಬೇಕು ಎಂದು ನಾಡಗೌಡ ಕರೆ ನೀಡಿದರು.

ಉಪನ್ಯಾಸಕಿ ಡಾ.ಈರಮ್ಮ ಹಿರೇಮಠ ಮಾತನಾಡಿ, ‘ಒಂದು ಭಾಷೆಯನ್ನು ಎಲ್ಲಿಯವರೆಗೆ ಬಳಸುವುದಿಲ್ಲವೋ ಅಲ್ಲಿಯವರೆಗೆ ಆ ಭಾಷೆ ಮೃತ ಭಾಷೆಯಾಗುತ್ತದೆ’ ಎಂದರು.

ಪ್ರಭಾರಿ ತಹಶೀಲ್ದಾರ್ ಶಂಶಾಲಂ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿದೇವಿ ಗುರಿಕಾರ, ಡಿವೈಎಸ್‍ಪಿ ವಿಶ್ವನಾಥರಾವ್ ಕುಲಕರ್ಣಿ, ನಗರಸಭೆ ಪೌರಾಯುಕ್ತ ವಿರೂಪಾಕ್ಷಮೂರ್ತಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಾಬು ರಾಠೋಡ್, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಂ.ವೃಷಭೇಂದ್ರಯ್ಯ, ತುರ್ವಿಹಾಳ ವಲಯ ಸಿಡಿಪಿಒ ಅಶೋಕ, ವೆಂಕಟರಮಣ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ಹಿರೇಮಠ ವೇದಿಕೆಯಲ್ಲಿ ಇದ್ದರು. ವೀರೇಶ ಸಾಲಿಮಠ ಹಾಗೂ ಅನುಷಾ ಹಿರೇಮಠ ನಾಡಗೀತೆ ಹಾಗೂ ರೈತಗೀತೆ ಹಾಡಿದರು. ಮಲ್ಲಿಕಾರ್ಜುನ ಸ್ವಾಗತಿಸಿದರು. ಶಿಕ್ಷಕ ವೀರೇಶ ಗೋನವಾರ ನಿರೂಪಿಸಿದರು.

ಕಾರ್ಯಕ್ರಮದ ಮುಂಚೆ ತಾಲ್ಲೂಕಾಡಳಿತ ವತಿಯಿಂದ ಭುವನೇಶ್ವರಿ ದೇವಿಯ ಭಾವಚಿತ್ರವನ್ನು ನಗರದ ಪ್ರಮುಖ ರಸ್ತೆಗಳಲ್ಲಿ ಭವ್ಯ ಮೆರವಣಿಗೆ ನಡೆಸಲಾಯಿತು.

ವಿವಿಧ ಶಾಲೆಗಳ ಮಕ್ಕಳು ಭುವನೇಶ್ವರಿ, ಕಿತ್ತೂರು ರಾಣಿಚೆನ್ನಮ್ಮ, ಒನಕೆ ಓಬವ್ವ, ಝಾನ್ಸಿರಾಣಿ ಲಕ್ಷ್ಮಿಬಾಯಿ, ಸಂಗೋಳ್ಳಿರಾಯಣ್ಣ ಸೇರಿದಂತೆ ಮತ್ತಿತರ ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ತೊಟ್ಟು ಮೆರವಣಿಗೆಯುದ್ದಕ್ಕೂ ನೋಡುಗರನ್ನು ಆಕರ್ಷಿಸಿದರು. ವಿದ್ಯಾರ್ಥಿನಿಯರ ಕೋಲು ಕುಣಿತ ಮೆರವಣಿಗೆಗೆ ಮೆರಗು ತಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.