ADVERTISEMENT

ರಾಯಚೂರು: ಕ.ಸಾ.ಪ ಚುನಾವಣೆ; ಪ್ರಾತಿನಿಧ್ಯ ನೀಡಲು ಮನವಿ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2021, 14:18 IST
Last Updated 8 ಏಪ್ರಿಲ್ 2021, 14:18 IST
ಸಾಂದರ್ಭಿಕಿ ಚಿತ್ರ
ಸಾಂದರ್ಭಿಕಿ ಚಿತ್ರ   

ರಾಯಚೂರು: ‘ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು ನನ್ನನ್ನು ಬೆಂಬಲಿಸಿ ಗೆಲ್ಲಿಸಿದರೆ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಜನರಿಗೆ ಅನುಕೂಲವಾಗುವಂತೆ ಬೆಳಗಾವಿಯಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಶಾಖೆ ಸ್ಥಾಪನೆ ಮಾಡುತ್ತೇನೆ. ಎಂ.ಎಂ ಕಲ್ಬುರ್ಗಿ ಭವನ, ಬೃಹತ್ ಸಂಶೋಧನಾ ಕೇಂದ್ರ ಸ್ಥಾಪಿಸಿ ಕನ್ನಡಪರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲಾಗುವುದು’ ಎಂದು ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಶಿವರಾಜ ಪಾಟೀಲ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕನ್ನಡ ಸಾಹಿತ್ಯ ಪರಿಷತ್ ಅಸ್ತಿತ್ವಕ್ಕೆ ಬಂದಾಗಿನಿಂದ ಈವರೆಗೆ ಕಲ್ಯಾಣ ಕರ್ನಾಟಕ ಭಾಗದವರು ಅಧ್ಯಕ್ಷರಾಗಿಲ್ಲ. ಈ ಭಾಗದವನಾದ ನನಗೆ ರಾಜ್ಯಧ್ಯಕ್ಷರನ್ನಾಗಿ ಮಾಡಿದರೆ ಭಾಗಕ್ಕೆ ಅನುಕೂಲವಾಗಲಿದೆ’ ಎಂದರು.

‘ಶ್ರೀಕೃಷ್ಣರಾಜ ಪರಿಷನ್ಮಂದಿರ ಹಳೆಯ ಕಟ್ಟಡವನ್ನುಳಿಸಿ ಅದರ ಮೇಲೆ 21 ಅಂತಸ್ತಿನ ₹ 500 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಹೈಟೆಕ್ ಶ್ರೀ ಕೃಷ್ಣರಾಜ ಶತಮಾನೋತ್ಸವ ಭವನ ನಿರ್ಮಾಣ ಮಾಡಲಾಗುವುದು. ಇದರಲ್ಲಿ ರಾಷ್ಟ್ರಕವಿ ಕುವೆಂಪು ಸಭಾಂಗಣ, ಗೋವಿಂದ ಪೈ ಡಿಜಿಟಲೀಕರಣ ಗ್ರಂಥಾಲಯ, ಶಿವರುದ್ರಪ್ಪ ಸಂಶೋಧನಾ, ನಿಘಂಟು ಮತ್ತು ಸಂಶೋಧನಾ ಮತ್ತು ಪ್ರಕಟಣ ಸ್ಥಾಪನೆ ಮಾಡಿ ಆರ್ಥಿಕ ಸ್ವಾಯತ್ತತೆ ತರುತ್ತೇನೆ’ ಎಂದು ಹೇಳಿದರು.

ADVERTISEMENT

ಉಡುಪಿಯಲ್ಲಿ ರಾಷ್ಟ್ರಮಟ್ಟದ ದಾಸ ಸಾಹಿತ್ಯ ಸಮ್ಮೇಳನ, ಕೂಡಲಸಂಗಮದಲ್ಲಿ ವಿಶ್ವ ವಚನ ಸಾಹಿತ್ಯ ಸಮ್ಮೇಳನ, ಕಲಬುರ್ಗಿಯಲ್ಲಿ ಅಖಿಲ ಭಾರತ ಮಟ್ಟದ ದಲಿತ ಸಾಹಿತ್ಯ ಸಮ್ಮೇಳನ, ಧಾರವಾಡದಲ್ಲಿ ಮಹಿಳಾ ಸಮ್ಮೇಳನ ಏರ್ಪಡಿಸಿ ದಲಿತ ಮಹಿಳಾ ಸಾಹಿತ್ಯಕ್ಕೆ ಪ್ರೋತ್ಸಾಹಿಸುತ್ತೇನೆ ಎಂದು ತಿಳಿಸಿದರು.

ದೇಶದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸುವ ಮಾದರಿಯಲ್ಲಿ ಸಾರ್ವಜನಿಕರಿಂದ ₹ 10, ಸರ್ಕಾರಿ ನೌಕರರಿಂದ ₹ 100, ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ ₹ 1 ಲಕ್ಷ ಅಮೃತ ನಿಧಿಗೆ ಸೇರಿಸಿ ₹ 100 ಕೋಟಿ ಸಂಗ್ರಹಿಸಿ ಆರ್ಥಿಕ ಸುಧಾರಣೆ ಮಾಡಲಾಗುವುದು ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಮಾರುತಿ ರಾವ್, ಸಾಹಿತಿ ಮಲ್ಲನಗೌಡ ಪಾಟೀಲ, ಪಂಪಾಪತಿ ಶಾಸ್ತ್ರೀ, ಪರಮೇಶ್ವರ ಸಾಲಿಮಠ ಪತ್ರಿಕಾಗೋಷ್ಠಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.