ADVERTISEMENT

‘ಸಾಹಿತ್ಯ ಕೃಷಿಗೆ ವಿವಿಯಿಂದ ಪ್ರೋತ್ಸಾಹ’: ಪ್ರೊ.ಹರೀಶ್ ರಾಮಸ್ವಾಮಿ

ರಾಯಚೂರು ವಿವಿ ಕನ್ನಡ ಸಾಹಿತ್ಯ ಸಂಘದ ವಾರ್ಷಿಕ ಚಟುವಟಿಕೆಗಳ ಸಮಾರೋಪ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2021, 15:18 IST
Last Updated 27 ಅಕ್ಟೋಬರ್ 2021, 15:18 IST
ರಾಯಚೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಿಂದ ಮಂಗಳವಾರ ಆಯೋಜಿಸಿದ್ದ ಕವಿ ಡಾ.ಸಿದ್ಧಲಿಂಗಯ್ಯ, ಡಾ. ಲಿಂಗಣ್ಣ ಗಾಣದಾಳ ಮತ್ತು ಅಮರೇಶ ಸಿಂಗಿ ಅವರಿಗೆ ನುಡಿನಮನ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು
ರಾಯಚೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಿಂದ ಮಂಗಳವಾರ ಆಯೋಜಿಸಿದ್ದ ಕವಿ ಡಾ.ಸಿದ್ಧಲಿಂಗಯ್ಯ, ಡಾ. ಲಿಂಗಣ್ಣ ಗಾಣದಾಳ ಮತ್ತು ಅಮರೇಶ ಸಿಂಗಿ ಅವರಿಗೆ ನುಡಿನಮನ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು   

ರಾಯಚೂರು: ಸಾಹಿತ್ಯ ಕಾರ್ಯಕ್ರಮಗಳು ಹೆಚ್ಚಾಗುತ್ತಾ ಹೋದಂತೆ ರಾಯಚೂರು ವಿಶ್ವವಿದ್ಯಾಲಯವನ್ನು ಬೆಳೆಸುವಲ್ಲಿ ಎಲ್ಲ ರೀತಿಯ ಪ್ರೋತ್ಸಾಹವು ಸಿಗುತ್ತದೆ ಎಂದು ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಹರೀಶ್ ರಾಮಸ್ವಾಮಿ ಹೇಳಿದರು.

ರಾಯಚೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಿಂದ ಮಂಗಳವಾರ ಆಯೋಜಿಸಿದ್ದ ಕನ್ನಡ ಸಾಹಿತ್ಯ ಸಂಘದ ವಾರ್ಷಿಕ ಚಟುವಟಿಕೆಗಳ ಸಮಾರೋಪ ಸಮಾರಂಭ ಅಂಗವಾಗಿ ಕವಿ ಡಾ.ಸಿದ್ಧಲಿಂಗಯ್ಯ, ಡಾ. ಲಿಂಗಣ್ಣ ಗಾಣದಾಳ ಮತ್ತು ಅಮರೇಶ ಸಿಂಗಿ ಅವರಿಗೆ ನುಡಿನಮನ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿಶ್ವವಿದ್ಯಾಲಯದಲ್ಲಿ ಸಾಹಿತ್ಯ ಕೃಷಿ ಹೆಚ್ಚಾಗಬೇಕು. ಸಾಹಿತ್ಯ ಓದುವುದು ಜಾತಿಮಟ್ಟಕ್ಕೆ ನಿಲ್ಲಿಸಿ ಅದನ್ನು ಎಲ್ಲರೂ ಸ್ವೀಕರಿಸುವ ಉದಾರ ಗುಣ ಹೊಂದಬೇಕು ಎಂದು ಸಲಹೆ ನೀಡಿದರು.

ADVERTISEMENT

ನೋವನ್ನೂ ಮೀರಿ ಸಾಕಷ್ಟು ಚಿಂತನೆಗಳಿವೆ. ಅಂತಹ ಚಿಂತನೆಗಳನ್ನು ಹೊಂದಿರುವ ರಾಯಚೂರು ಜಿಲ್ಲೆ ಸಾಕಷ್ಟು ವಿಚಾರಗಳನ್ನು ಹೊರಸೂಸಿ ರಾಯಚೂರು ವಿಶ್ವವಿದ್ಯಾಲಯದ ಮೂಲಕ ಜಿಲ್ಲೆಗೆ ಮೆರಗು ಚೆಲ್ಲುವ ಕಾರ್ಯ ನಿರಂತರವಾಗಿ ನಡೆಯಬೇಕು. ರಾಯಚೂರು, ಯಾದಗಿರಿ ಜಿಲ್ಲೆಗಳ ಗಡಿಭಾಗಗಳಲ್ಲಿ ಇಂದಿಗೂ ಕನ್ನಡ ನಾಮಫಲಕಗಳು ಕಾಣುವುದಿಲ್ಲ ಎಂದರು.

ಗಡಿ ಗ್ರಾಮಗಳಲ್ಲಿ ಕನ್ನಡದ ಜ್ಞಾನ ಪಸರಿಸಿ ಕನ್ನಡ ಕಸ್ತೂರಿ ಚೆಲ್ಲುವ ಕೆಲಸ ಮಾಡಬೇಕು. ಯಾವುದೇ ಸಮುದಾಯ ಧರ್ಮ, ಜಾತಿಮೀರಿ ಉತ್ತಮ ಕೆಲಸ ಮಾಡಿದಾಗ ರಾಯಚೂರು ವಿಶ್ವವಿದ್ಯಾಲಯ ಬೆಳೆಸಲು ಸಾಧ್ಯ ಎಂದು ಹೇಳಿದರು.

ಮುಖ್ಯ ಅತಿಥಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಪಿ.ಎಂ.ಭಾಸ್ಕರ್ ಮಾತನಾಡಿ, ಕತ್ತಲೆ ನುಂಗಿ ಬೆಳಕನ್ನು ಸುರಿಸುವ ಕಲೆ ದೀಪಕ್ಕೆ ಇರುವ ಹಾಗೆ ಸಾಹಿತ್ಯ ರಂಗದಲ್ಲಿ ಅಸ್ತಂಗತರಾದ ಸಾಧಕರ ಸಾಧನೆಗಳು ಅಜ್ಞಾನವನ್ನು ಕಳೆದು ಜ್ಞಾನವನ್ನು ಉಣಬಡಿಸುವ ಅಮರ ಸಾಧನಗಳಾಗಿವೆ ಎಂದರು.

ಮೌಲ್ಯಮಾಪನ ಕುಲಸಚಿವ ಪ್ರೊ.ಯರಿಸ್ವಾಮಿ, ಹಣಕಾಸು ಅಧಿಕಾರಿ ಪ್ರೊ.ಪಾರ್ವತಿ ಸಿ.ಎಸ್. ಇದ್ದರು.

ಅತಿಥಿ ಉಪನ್ಯಾಸಕ ಡಾ. ಶರಣಪ್ಪ ಛಲವಾದಿ ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾರ್ಥಿನಿ ನಿಂಗಮ್ಮ ಪ್ರಾರ್ಥಿಸಿದರು. ಅಕ್ಕನಾಗಮ್ಮ ಸ್ವಾಗತಿಸಿದರು. ಚಂದ್ರಣ್ಣ, ಈರಮ್ಮ ಅತಿಥಿಗಳನ್ನು ಪರಿಚಯಿಸಿದರು. ಶರಣಬಸವ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.