ADVERTISEMENT

ಸಿಂಧನೂರು: ‘3, 4ಕ್ಕೆ ಕರ್ನಾಟಕ ಜನಶಕ್ತಿ ರಾಜ್ಯ ಸಮ್ಮೇಳನ’

​ಪ್ರಜಾವಾಣಿ ವಾರ್ತೆ
Published 30 ಜೂನ್ 2022, 14:01 IST
Last Updated 30 ಜೂನ್ 2022, 14:01 IST
ಸಿಂಧನೂರಿನ ಶ್ರಮಿಕ ಭವನದಲ್ಲಿ ಗುರುವಾರ ನಡೆದ ಸಭೆಯಲ್ಲಿ ಕರ್ನಾಟಕ ಜನಶಕ್ತಿ 3ನೇ ರಾಜ್ಯ ಸಮ್ಮೇಳನದ ಕರಪತ್ರವನ್ನು ಬಿಡುಗಡೆ ಮಾಡಲಾಯಿತು
ಸಿಂಧನೂರಿನ ಶ್ರಮಿಕ ಭವನದಲ್ಲಿ ಗುರುವಾರ ನಡೆದ ಸಭೆಯಲ್ಲಿ ಕರ್ನಾಟಕ ಜನಶಕ್ತಿ 3ನೇ ರಾಜ್ಯ ಸಮ್ಮೇಳನದ ಕರಪತ್ರವನ್ನು ಬಿಡುಗಡೆ ಮಾಡಲಾಯಿತು   

ಸಿಂಧನೂರು: ರಾಯಚೂರಿನ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜುಲೈ 3 ಮತ್ತು 4 ರಂದು ಕರ್ನಾಟಕ ಜನಶಕ್ತಿ 3ನೇ ರಾಜ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಮಲ್ಲಿಗೆ ಸಿರಿಮನೆ ತಿಳಿಸಿದರು.

ನಗರದ ಶ್ರಮಿಕ ಭವನದಲ್ಲಿ ಗುರುವಾರ ನಡೆದ ವಿವಿಧ ಸಂಘಟನೆಗಳ ಸಮಾನ ಮನಸ್ಕರ ಸಭೆಯಲ್ಲಿ ಅವರು ಮಾತನಾಡಿದರು. ಎರಡು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ 12 ರಾಜ್ಯಗಳ 26 ಸಂಘಟನೆಗಳ ಪ್ರತಿನಿಧಿಗಳು ಹಾಗೂ ನಾಡಿನ ಪ್ರಗತಿಪರರು, ಬುದ್ಧಿಜೀವಿಗಳು, ಹೋರಾಟಗಾರರು ಭಾಗವಹಿಸಲಿದ್ದಾರೆ. ಪ್ರಮುಖ ಚರ್ಚೆ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಸಂವಾದ ನಡೆಯಲಿದೆ ಎಂದು ವಿವರಿಸಿದರು.

ತೀಸ್ತಾ ಸೆಟಲ್‍ವಾಡ್ ಬಂಧನಕ್ಕೆ ಖಂಡನೆ: ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್‍ವಾಡ್ ಅವರನ್ನು ಗುಜರಾತ್ ಪೊಲೀಸರು ಬಂಧಿಸುವ ಮೂಲಕ ಸಂವಿಧಾನದ ಆಶಯಗಳನ್ನು ಬುಡಮೇಲುಗೊಳಿಸಿದ್ದಾರೆ ಎಂದು ದೂರಿದರು.

ADVERTISEMENT

ಸರ್ಕಾರದ ಜನವಿರೋಧಿ ನೀತಿ, ನಿರೂಪಣೆಗಳನ್ನು ವಿಮರ್ಶಿಸುವವರ ಮೇಲೆ ದಮನ, ದಬ್ಬಾಳಿಕೆ ನಡೆಸುತ್ತಿರುವುದಲ್ಲದೇ ಬಂಧಿಸುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಎದುರಾಗಿರುವ ಆಪತ್ತಿಗೆ ಸಾಕ್ಷಿಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ದಿನದಿಂದ ದಿನಕ್ಕೆ ಜನಸಾಮಾನ್ಯರ ಸಮಸ್ಯೆಗಳು ಬೆಳೆಯುತ್ತಲೇ ಹೋಗುತ್ತಿವೆ. ನಿರುದ್ಯೋಗ ಸಮಸ್ಯೆ ಮಿತಿಮೀರಿದೆ. ಅಲ್ಪಸಂಖ್ಯಾತರು ಮತ್ತು ಕೆಳವರ್ಗದವರ ಮೇಲಿನ ದಾಳಿಗಳಿಗೆ ಎಲ್ಲೆ ಇಲ್ಲದಾಗಿದೆ. ಅಸಹಾಯಕರು, ನೊಂದವರ ಪರವಾಗಿ ಧ್ವನಿ ಎತ್ತಿದವರನ್ನು ಸುಳ್ಳು ಕೇಸುಗಳ ಮೂಲಕ ಬಂಧಿಸಿ ಜೈಲಿನಲ್ಲಿಡಲಾಗಿದೆ. ಕಾರ್ಪೊರೇಟ್ ಕಂಪನಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಸರ್ಕಾರಗಳು ಜನರ ಆಶೋತ್ತರಗಳನ್ನು ಮತ್ತು ಅವರ ಬದುಕಿನ ಪ್ರಶ್ನೆಗಳನ್ನು ಸಂಪೂರ್ಣ ಮರೆತಿವೆ ಎಂದು ಮಲ್ಲಿಗೆ ಸಿರಿಮನೆ ಅಸಮಾಧಾನ ವ್ಯಕ್ತಪಡಿಸಿದರು.

ಮನುಜಮತ ಬಳಗದ ಎಸ್.ಎ.ಖಾದರ್ ಸುಭಾನಿ, ಬಸವರಾಜ ಬಾದರ್ಲಿ, ಉಪನ್ಯಾಸಕ ಶಂಕರ ಗುರಿಕಾರ್, ಗೌರಿ, ಮಾರೆಪ್ಪ ಹರವಿ, ಮಂಜುನಾಥ ಗಾಂಧಿನಗರ, ನಾಗರಾಜ್ ಪೂಜಾರ್, ಜಿಶಾನ್ ಮಾನ್ವಿ, ರವಿ ನವಲಹಳ್ಳಿ, ಚಾಂದ್‍ಪಾಶಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.