ADVERTISEMENT

ಅಟಲ್‌ ಜೀ ಜನ ಸ್ನೇಹಿ ಕೇಂದ್ರ: ಕಾಯಂ ಗ್ರಾಮ ಆಡಳಿತಾಧಿಕಾರಿ ನೇಮಕಕ್ಕೆ ಆಗ್ರಹ

ಮಂಜುನಾಥ ಎನ್ ಬಳ್ಳಾರಿ
Published 29 ಜನವರಿ 2025, 6:17 IST
Last Updated 29 ಜನವರಿ 2025, 6:17 IST
ಕವಿತಾಳ ಸಮೀಪದ ಪಾಮನಕಲ್ಲೂರು ಗ್ರಾಮದ ಅಟಲ್‌ ಜೀ ಜನಸ್ನೇಹಿ ಕೇಂದ್ರದ ಎದುರು ಅಧಿಕಾರಿಗಳ ಬರುವಿಕೆಗೆ ಫಲಾನುಭವಿಗಳು ಕಾಯ್ದು ನಿಂತಿರುವುದು
ಕವಿತಾಳ ಸಮೀಪದ ಪಾಮನಕಲ್ಲೂರು ಗ್ರಾಮದ ಅಟಲ್‌ ಜೀ ಜನಸ್ನೇಹಿ ಕೇಂದ್ರದ ಎದುರು ಅಧಿಕಾರಿಗಳ ಬರುವಿಕೆಗೆ ಫಲಾನುಭವಿಗಳು ಕಾಯ್ದು ನಿಂತಿರುವುದು   

ಕವಿತಾಳ: ಸ್ವಂತ ಕಟ್ಟಡ ನಿರ್ಮಿಸಲು ಜಾಗ ಗುರುತಿಸಿದ್ದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷದಿಂದ ಮಸ್ಕಿ ತಾಲ್ಲೂಕಿನ ಪಾಮನಕಲ್ಲೂರು ಗ್ರಾಮದಲ್ಲಿನ ಅಟಲ್‌ ಜೀ ಜನ ಸ್ನೇಹಿ ಕೇಂದ್ರ ಮತ್ತು ನಾಡ ಕಚೇರಿ ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ.

‘ಐದು ವರ್ಷಗಳಿಂದ ಕಾಯಂ ಗ್ರಾಮ ಆಡಳಿತಾಧಿಕಾರಿ ನೇಮಕವಾಗಿಲ್ಲ. ಪ್ರಭಾರ ಅಧಿಕಾರಿ ನಿತ್ಯ ಕಚೇರಿಗೆ ಬರುವುದಿಲ್ಲ, ಈಚೆಗೆ ಉಪ ತಹಶೀಲ್ದಾರ್‌ ಅವರೂ ನಿತ್ಯ ಕಚೇರಿಗೆ ಬರುತ್ತಿಲ್ಲ ಹೀಗಾಗಿ ಸಾರ್ವಜನಿಕರ ಕೆಲಸ ಕಾರ್ಯಗಳು ವಿಳಂಬವಾಗುತ್ತಿವೆ’ ಎನ್ನುವ ಆರೋಪ ಕೇಳಿ ಬಂದಿದೆ.

‘ಬಸಾಪುರ, ಪರಸಾಪುರ, ವಟಗಲ್‌, ಯಕ್ಲಾಸ್ಪುರ, ಅಮೀನಗಡ, ಗುಡಿಹಾಳ, ಚಿಲ್ಕರಾಗಿ, ಕೊಟೇಕಲ್‌, ನೆಲಕೊಳ ಸೇರಿದಂತೆ ಅಂದಾಜು 20 ಹಳ್ಳಿಗಳು ಪಾಮನಕಲ್ಲೂರು ಹೋಬಳಿ ವ್ಯಾಪ್ತಿಗೆ ಒಳಪಟ್ಟಿವೆ. ವೃದ್ಯಾಪ, ಅಂಗವಿಕಲ ಸೇರಿದಂತೆ ವಿವಿಧ ಮಾಸಾಶನ, ಜಾತಿ–ಆದಾಯ ಪ್ರಮಾಣ ಪತ್ರ ಸೇರಿದಂತೆ ವಿವಿಧ ದಾಖಲೆಗಳನ್ನು ಪಡೆಯಲು ನಿತ್ಯ ನೂರಾರು ಜನ ಫಲಾನುಭವಿಗಳು, ರೈತರು ಕಚೇರಿಗೆ ಎಡತಾಕುತ್ತಾರೆ. ಅಧಿಕಾರಿಗಳು ಸಿಗದ ಕಾರಣ ನಿಗದಿತ ಸಮಯದಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ’ ಎಂದು ಗ್ರಾಮದ ರಮೇಶ ಗಂಟ್ಲ, ಆಂಜನೇಯ ಕೊಟೇಕಲ್‌, ರವಿಕುಮಾರ ಬಸಾಪುರ ಮತ್ತು ರಮೇಶ ಕೊಟೇಕಲ್‌ ಆರೋಪಿಸಿದರು.

ADVERTISEMENT

‘ಈ ಹಿಂದೆ ನಾಡ ಕಚೇರಿ ಸರ್ಕಾರಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಆ ಕಟ್ಟಡ ಶಿಥಿಲಗೊಂಡ ಹಿನ್ನೆಲೆ ಒಂಬತ್ತು ವರ್ಷಗಳ ಹಿಂದೆ ಖಾಸಗಿ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಸ್ವಂತ ಕಟ್ಟಡ ನಿರ್ಮಿಸಲು ಸರ್ಕಾರಿ ಜಾಗ ಗುರುತಿಸಿದ್ದರೂ ನಿರ್ಮಾಣಕ್ಕೆ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಮುಂದಾಗುತ್ತಿಲ್ಲ. ಉಪ ತಹಶೀಲ್ದಾರರು ನಿತ್ಯ ಕಚೇರಿಗೆ ಬಾರದ ಕಾರಣ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ, ಕಾಯಂ ಗ್ರಾಮ ಆಡಳಿತಾಧಿಕಾರಿ ನೇಮಕ, ಉಪ ತಹಶೀಲ್ದಾರರಿಗೆ ನಿತ್ಯ ಕಚೇರಿಗೆ ಬರುವಂತೆ ಸೂಚಿಸುವುದು ಮತ್ತು ಸಿಬ್ಬಂದಿ ಹಣ ಪಡೆಯುವ ಕುರಿತು ತಹಶೀಲ್ದಾರ್‌ಗೆ ದೂರು ನೀಡುತ್ತೇವೆ’ ಎಂದು ಮುಖಂಡ ಲಕ್ಷ್ಮಣ ಚೌಡ್ಲಿ ಹೇಳಿದರು.

ಕವಿತಾಳ ಸಮೀಪದ ಪಾಮನಕಲ್ಲೂರು ಗ್ರಾಮದ ಅಟಲ್‌ ಜೀ ಜನಸ್ನೇಹಿ ಕೇಂದ್ರ ಖಾಸಗಿ ಕಟ್ಟಡದ ಹೊರನೋಟ
ನಿಗದಿತ ಅವಧಿಯಲ್ಲಿ ಪ್ರಮಾಣ ಪತ್ರಗಳು ಸಿಗುತ್ತಿಲ್ಲ ಫಲಾನುಭವಿಗಳು ಅನಗತ್ಯವಾಗಿ ಕಚೇರಿಗೆ ಅಲೆಯುವಂತಾಗಿದೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು ಲಕ್ಷ್ಮಣ ಚೌಡ್ಲಿ ಪಾಮನಕಲ್ಲೂರು ಕಂಪ್ಯೂಟರ್‌ ಬಗ್ಗೆ ಮಾಹಿತಿ ಇಲ್ಲದ ಸಿಬ್ಬಂದಿ ಫಲಾನುಭವಿಗಳನ್ನು ಅನಗತ್ಯ ಕಚೇರಿಗೆ ಅಲೆಯುವಂತೆ ಮಾಡುತ್ತಿದ್ದಾರೆ. ಪ್ರಮಾಣ ಪತ್ರಕ್ಕಾಗಿ ತಿಂಗಳು ಗಟ್ಟಲೆ ಕಾಯಬೇಕಿದೆ ರಮೇಶ ಗಂಟ್ಲ ಪಾಮನಕಲ್ಲೂರು ಆರೋಗ್ಯ ಸರಿಯಿಲ್ಲದ ಕಾರಣ ರಜೆ ಹಾಕಿದ್ದೆ ಸಾರ್ವಜನಿಕರ ಎಲ್ಲಾ ಕೆಲಸಗಳನ್ನು ನಿಗದಿತ ಅವಧಿಯಲ್ಲಿ ಮಾಡಲಾಗುತ್ತಿದೆ
ದೇವರಾಜ ಉಪ ತಹಶೀಲ್ದಾರ್ ಪಾಮನಕಲ್ಲೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.