ಸಿಂಧನೂರು: ‘ದುಡ್ಡೇ ದೊಡ್ಡಪ್ಪ ವಿದ್ಯೆ ಅವರಪ್ಪ. ಇಡೀ ಪ್ರಪಂಚವನ್ನು ಜ್ಞಾನ ಆಳುತ್ತಿದೆ. ಹೀಗಾಗಿ ಜ್ಞಾನಕ್ಕಿಂತ ಮಿಗಿಲಾದದ್ದು ಯಾವುದು ಇಲ್ಲ’ ಎಂದು ಪೊಲೀಸ್ ಅಧಿಕಾರಿ ರವಿ ಡಿ.ಚನ್ನಣ್ಣನವರ್ ಹೇಳಿದರು.
ಇಲ್ಲಿನ ಸತ್ಯಗಾರ್ಡನ್‍ನಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಸಿಂಧನೂರು ದಸರಾ ಉತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಶನಿವಾರ ಸಂಜೆ ನಡೆದ ಶಿಕ್ಷಣ ದಸರಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಪ್ರಸ್ತುತ ದಿನಗಳಲ್ಲಿ ಎಸ್‍ಎಸ್‍ಎಲ್‍ಸಿ ಮುಗಿದ ತಕ್ಷಣವೇ ವಿದ್ಯಾರ್ಥಿಗಳು ಬೈಕ್, ಮೊಬೈಲ್, ಗುಟ್ಕಾ, ಮದ್ಯ ಸೇವನೆಯನ್ನು ಫ್ಯಾಷನ್ ಮಾಡಿಕೊಂಡು ದುಶ್ಚಟಕ್ಕೆ ದಾಸರಾಗುತ್ತಿರುವುದು ವಿಷಾನೀಯ ಸಂಗತಿ’ ಎಂದರು.
‘ಪರಿಶ್ರಮ ಪಟ್ಟರೆ ಲಕ್ಷ್ಮಿ ಮತ್ತು ಸರಸ್ವತಿ ಸದಾ ನಮ್ಮ ಜೊತೆಗೆ ಇರುತ್ತಾರೆ. ಬಡತನ, ಅಸಮಾನತೆ ಮತ್ತು ಕಷ್ಟ ಕಾಲದಿಂದ ಪಾರು ಮಾಡುವ ಪ್ರಮುಖ ಅಸ್ತ್ರವೇ ಶಿಕ್ಷಣ. ಇದಕ್ಕೆ ನಮ್ಮನ್ನು ಗಟ್ಟಿಗೊಳಿಸುವ ಶಕ್ತಿಯಿದೆ. ಯೋಗ್ಯತೆಗಾಗಿ ಮಾತ್ರ ಪದವಿ, ಸ್ನಾತಕೋತ್ತರ ಪದವಿ ಪ್ರಮಾಣ ಪತ್ರ ಪಡೆಯುವುದು ಶಿಕ್ಷಣ ಅಲ್ಲ. ನಮ್ಮ ಬದುಕನ್ನು ಬದಲಿಸುವುದು ಮತ್ತು ಸಮಾಜ ಪರಿವರ್ತನೆ ಮಾಡುವುದು ಶಿಕ್ಷಣ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿದರು.
ತಹಶೀಲ್ದಾರ್ ಅರುಣ್ ಎಚ್.ದೇಸಾಯಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ, ನಗರಸಭೆ ಪೌರಾಯುಕ್ತ ಪಾಂಡುರಂಗ ಇಟಗಿ, ಡಿವೈಎಸ್‍ಪಿ ಬಿ.ಎಸ್.ತಳವಾರ, ರೈಲ್ವೆ ಭೂ ಸ್ವಾಧೀನ ಅಧಿಕಾರಿ ಶೃತಿ, ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಶ್ರೀದೇವಿ ಶ್ರೀನಿವಾಸ, ದಸರಾ ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್.ದೇವೇಂದ್ರಗೌಡ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ಹಿರೇಮಠ ಉಪಸ್ಥಿತರಿದ್ದರು.
ಆಕರ್ಷಕ ಸಂಗೀತ ರಸ ಸಂಜೆ: ನಂತರ ಸರಿಗಮಪ ಖ್ಯಾತಿಯ ದ್ಯಾಮೇಶ ಕಾರಟಗಿ ಹಾಗೂ ರಮೇಶ ಲಮಾಣಿ ಅವರಿಂದ ಸಂಗೀತ ರಸಸಂಜೆ, ರಂಗಾಧಾರೆ ರೇಪರ್ಟರಿ ಕೊಪ್ಪಳ ತಂಡದಿಂದ ಶಿಕ್ಷಣ, ಆರೋಗ್ಯಕ್ಕೆ ಸಂಬಂಧಿಸಿದಂತೆ ಜಾಗೃತಿ ರೂಪಕ ನಾಟಕ, ಕಾಲೇಜು ತಂಡಗಳಿಂದ ಗುಮ್ರಾ, ಕಂಸಾಳೆ, ಗರ್ಬಾ ನೃತ್ಯಗಳು ಕಾರ್ಯಕ್ರಮದಲ್ಲಿ ನೆರೆದಿದ್ದ ಸಾವಿರಾರು ಜನರನ್ನು ಆಕರ್ಷಿಸಿದವು.
ಯುವಜನರು ಕ್ಷಣಿಕ ಸುಖಕ್ಕಾಗಿ ಮೋಜು-ಮಸ್ತಿಗೆ ಬಿದ್ದು ಜೀವನ ಹಾಳು ಮಾಡಿಕೊಳ್ಳುತ್ತಿರುವುದು ದುರದೃಷ್ಟಕರ ಸಂಗತಿ. ಪಾಲಕರ ಕಷ್ಟ ಅರಿತವರು ಮಾತ್ರ ಜೀವನದಲ್ಲಿ ಯಶಸ್ಸು ಪಡೆಯುತ್ತಾರೆ.ಹಂಪನಗೌಡ ಬಾದರ್ಲಿ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.