ಪ್ರಜಾವಾಣಿ ವಾರ್ತೆ
ಲಿಂಗಸುಗೂರು: ‘ಕೃಷ್ಣಾ ನದಿಯಲ್ಲಿ ಪ್ರವಾಹ ಇಳಿಮುಖವಾಗುವವರೆಗೂ ತಾಲ್ಲೂಕಿನ ನದಿ ತೀರದ ಗ್ರಾಮಗಳಲ್ಲಿ ಸಂಚಾರಿ ಆರೋಗ್ಯ ಸೇವೆ ಒದಗಿಸಲಾಗುವುದು’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅಮರೇಶ ಪಾಟೀಲ ತಿಳಿಸಿದರು.
ತಾಲ್ಲೂಕಿನ ಕೃಷ್ಣಾ ನದಿ ತೀರದ ಹಂಚಿನಾಳ ಗ್ರಾಮದಲ್ಲಿ ಶುಕ್ರವಾರ ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸಿ ಬಳಿಕ ಮಾತನಾಡಿದ ಅವರು,‘ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 2.60 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಆದ್ದರಿಂದ ಶೀಲಹಳ್ಳಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಪ್ರವಾಹ ಕಡಿಮೆ ಆಗುವವರೆಗೂ ಸಂಚಾರಿ ಆರೋಗ್ಯ ಘಟಕ ಕಡದರಗಡ್ಡಿ, ಯರಗೋಡಿ, ಹಂಚಿನಾಳ, ಜಲದುರ್ಗ ಗ್ರಾಮಗಳಲ್ಲಿ ನಿತ್ಯವೂ ಸಂಚಾರ ಮಾಡಿ ಸಾಮಾನ್ಯ ಕಾಯಿಲೆ, ಜ್ವರ, ಬಿ.ಪಿ, ಮಧುಮೇಹ ತಪಾಸಣೆ ಹಾಗೂ ಸೂಕ್ತ ಮಾರ್ಗದರ್ಶನ, ಚಿಕಿತ್ಸೆ ನೀಡಲಿದೆ’ ಎಂದರು.
ಶುಶ್ರೂಷಕ ಅಧಿಕಾರಿ ರಂಗಸ್ವಾಮಿ, ಬಸವರಾಜ, ಸಿದ್ಧಾರೂಢ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.