ADVERTISEMENT

ಕವಿತಾಳ: ಬಿಸಿಲಲ್ಲೇ ಬಸ್‌ಗೆ ಕಾಯುವ ಅನಿವಾರ್ಯತೆ

ಮಂಜುನಾಥ ಎನ್ ಬಳ್ಳಾರಿ
Published 18 ಫೆಬ್ರುವರಿ 2024, 4:40 IST
Last Updated 18 ಫೆಬ್ರುವರಿ 2024, 4:40 IST
ಕವಿತಾಳದಲ್ಲಿ ಅಂಗಡಿಗಳ ಮುಂದೆ ಕುಳಿತು ಬಸ್ಸಿಗಾಗಿ ಕಾಯುತ್ತಿರುವ ಮಹಿಳೆಯರು ಮತ್ತು ವಿದ್ಯಾರ್ಥಿನಿಯರು
ಕವಿತಾಳದಲ್ಲಿ ಅಂಗಡಿಗಳ ಮುಂದೆ ಕುಳಿತು ಬಸ್ಸಿಗಾಗಿ ಕಾಯುತ್ತಿರುವ ಮಹಿಳೆಯರು ಮತ್ತು ವಿದ್ಯಾರ್ಥಿನಿಯರು   

ಕವಿತಾಳ: ಪಟ್ಟಣದ ಹಳೇ ಬಸ್ ನಿಲ್ದಾಣದ ಹತ್ತಿರ ತಂಗುದಾಣ ಇಲ್ಲದ ಕಾರಣ ವಿವಿಧ ಹಳ್ಳಿಗಳಿಂದ ಬರುವ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಬಿಸಿಲು, ಮಳೆಯಲ್ಲಿ ನಿಂತು ಬಸ್ಸಿಗಾಗಿ ಕಾಯುವುದು ಅನಿವಾರ್ಯವಾಗಿದೆ. ಬೇಸಿಗೆ ಬಿಸಿಲು ಹೆಚ್ಚುತ್ತಿದ್ದು, ಮಹಿಳೆಯರು, ಮಕ್ಕಳು ಮತ್ತು ವಿದ್ಯಾರ್ಥಿಗಳು ಖಾಸಗಿ ಅಂಗಡಿಗಳ ಮುಂದೆ ಕುಳಿತುಕೊಳ್ಳುವಂತಾಗಿದೆ.

ಇಲ್ಲಿನ ಹಳೇ ಬಸ್ ನಿಲ್ದಾಣದ ಹತ್ತಿರವಿದ್ದ ತಂಗುದಾಣವನ್ನು ರಸ್ತೆ ವಿಸ್ತರಣೆ ಸಂದರ್ಭದಲ್ಲಿ ತೆರವುಗೊಳಿಸಲಾಗಿದ್ದು, ಅಲ್ಲಿ ಅಂಚೆ ಇಲಾಖೆಯ ನಿವೇಶನಕ್ಕೆ ಕಾಂಪೌಂಡ್‌ ನಿರ್ಮಿಸಲಾಗಿದೆ ಸದ್ಯ ಅಲ್ಲಿ ಜಾಗದ ಕೊರತೆಯಿಂದ ಮರು ನಿರ್ಮಾಣ ಸಾಧ್ಯವಾಗಿಲ್ಲ.

ಆಸ್ಪತ್ರೆ, ನೆಮ್ಮದಿ ಕೇಂದ್ರ, ವಾರದ ಸಂತೆ ಮತ್ತು ಮಾರುಕಟ್ಟೆಗೆ ಹೀಗೆ ವಿವಿಧ ಕಾರಣಗಳಿಗಾಗಿ ಸುತ್ತಮುತ್ತಲಿನ ಹಳ್ಳಿಗಳಿಂದ ಬರುವ ಜನರು ಬಸ್ಸಿಗಾಗಿ ಕಾಯ್ದು ಕುಳಿತುಕೊಳ್ಳಲು ಇಲ್ಲಿನ ಶಿವಪ್ಪತಾತನ ಮಠ ನೆರವಾಗಿದೆ.

ADVERTISEMENT

ಹೊಸ ಬಸ್ ನಿಲ್ದಾಣ ಹೊರವಲಯದಲ್ಲಿರುವ ಕಾರಣ ಬಹುತೇಕ ಪ್ರಯಾಣಿಕರು ಹಳೇ ಬಸ್ ನಿಲ್ಧಾಣದ ಹತ್ತಿರವೇ ಇಳಿಯುತ್ತಾರೆ. ಅಲ್ಲಿದಂಲೇ ಬಸ್ ಹಿಡಿಯುತ್ತಾರೆ. ಹೀಗಾಗಿ ಹಳ್ಳಿಗಳಿಂದ ಬರುವ ಮಹಿಳೆಯರು ಮತ್ತು ಶಾಲಾ, ಕಾಲೇಜು ವಿದ್ಯಾರ್ಥಿಗಳು ಹಳೇ ಬಸ್ ನಿಲ್ದಾಣದ ಅಕ್ಕಪಕ್ಕದ ಅಂಗಡಿಗಳ ಮುಂದೆ ಕುಳಿತುಕೊಳ್ಳುತ್ತಾರೆ.

‌‘ಹಿರೇಹಣಿಗಿ, ಹುಸೇನಪುರ, ತೊಪ್ಪಲದೊಡ್ಡಿ, ವಟಗಲ್, ಅಮೀನಗಡ ಮತ್ತಿತರ ಹಳ್ಳಿಗಳಿಗೆ ಹೋಗಲು ವಿದ್ಯಾರ್ಥಿಗಳು ಅಂಗಡಿಗಳ ಮುಂದೆ ಕುಳಿತುಕೊಳ್ಳುವುದರಿಂದ ಗ್ರಾಹಕರು ಅಂಗಡಿಗೆ ಬರಲು ತೊಂದರೆಯಾಗುತ್ತಿದೆʼ ಎಂದು ಅಂಗಡಿ ಮಾಲೀಕರು ದೂರುತ್ತಾರೆ.

ವಿಭಜಕ ನಿರ್ಮಾಣದಿಂದ ರಸ್ತೆ ಕಿರಿದಾಗಿದ್ದು, ರಸ್ತೆ ಬದಿ ಒಂದು ವಾಹನ ನಿಲುಗಡೆಯಾದರೆ ಇನ್ನೊಂದು ವಾಹನಕ್ಕೆ ಮುಂದೆ ಹೋಗಲು ದಾರಿ ಸಿಗದೆ ನಿಲ್ಲುವಂತಾಗಿದೆ. ರಾಯಚೂರು, ಲಿಂಗಸುಗೂರಿಗೆ ತೆರಳುವ ಬಸ್ ಒಂದೆಡೆ, ಮಸ್ಕಿ ಮತ್ತು ಹಟ್ಟಿ ಚಿನ್ನದಗಣಿಗೆ ತೆರಳುವ ಬಸ್ ಇನ್ನೊಂದೆಡೆ, ಅದೇ ರೀತಿ ಮಾನ್ವಿ ಹಾಗೂ ಹುಸೇನಪುರ, ಸೈದಾಪುರ, ತೊಪ್ಪಲದೊಡ್ಡಿಗೆ ತೆರಳುವ ಬಸ್ ಬೇರೆ ಬೇರೆ ಸ್ಥಳದಲ್ಲಿ ನಿಲ್ಲುವುದರಿಂದ ವಾಹನ ದಟ್ಟಣೆ ಹೆಚ್ಚಿದೆ ಮತ್ತು ಪ್ರಯಾಣಿಕರಿಗೆ ಗೊಂದಲ ಉಂಟಾಗುತ್ತಿದೆ.

ಹೊಸ ಬಸ್‌ ನಿಲ್ದಾಣಕ್ಕೆ ತೆರಳಲು ಆಟೊ ವ್ಯವಸ್ಥೆ ಇಲ್ಲ. ಹೀಗಾಗಿ ಹಳೇ ಬಸ್‌ ನಿಲ್ದಾಣದ ಹತ್ತಿರ ಶೆಲ್ಟರ್‌ ನಿರ್ಮಿಸಿದರೆ ಮಹಿಳೆಯರು ಮಕ್ಕಳು ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಈ ಬಗ್ಗೆ ಅಧಿಕಾರಿಗಳು ಜನಪ್ರತಿನಿಧಿಗಳು ಗಮನಹರಿಸಬೇಕು
ಹುಚ್ಚಪ್ಪ ವಡವಟ್ಟಿ, ದಸಂಸ ಮುಖಂಡ ಕವಿತಾಳ
ಜಾಗದ ಕೊರತೆ ಇದೆ. ಸ್ಥಳ ಲಭ್ಯವಾದಲ್ಲಿ ಶೆಲ್ಟರ್‌ ನಿರ್ಮಾಣ ಮಾಡಲು ಎಸ್‌ಎಫ್‌ ಸಿ ಅನುದಾನದಲ್ಲಿ ಅವಕಾಶವಿದೆ. ಈ ಕುರಿತು ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.
ರವಿ ಎಸ್‌ ರಂಗಸುಭೆ, ಮುಖ್ಯಾಧಿಕಾರಿ, ಕವಿತಾಳ ಪಟ್ಟಣ ಪಂಚಾಯಿತಿ
ಕವಿತಾಳದಲ್ಲಿ ಅಂಗಡಿಗಳ ಮುಂದೆ ಕುಳಿತು ಬಸ್ಸಿಗಾಗಿ ಕಾಯುತ್ತಿರುವ ಮಹಿಳೆಯರು ಮತ್ತು ವಿದ್ಯಾರ್ಥಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.