
ಕವಿತಾಳ: ರಸ್ತೆ ಎರಡೂ ಬದಿಯಲ್ಲಿ ಎತ್ತರಕ್ಕೆ ಬೆಳೆದು ನಿಂತ ಜಾಲಿ ಗಿಡಗಳು. ತಗ್ಗು ದಿನ್ನೆಗಳಿಂದ ಕೂಡಿದ ಹದಗೆಟ್ಟ ರಸ್ತೆ. ವಾಹನ ಸಂಚಾರದಿಂದ ಹರಡುವ ದೂಳು. ಇದು ದೇಶಕ್ಕೆ ಚಿನ್ನ ಪೂರೈಸುವ ಹಟ್ಟಿ ಚಿನ್ನದಗಣಿಗೆ ಪಾಮನಕಲ್ಲೂರು ಗ್ರಾಮದಿಂದ ಸಂಪರ್ಕಿಸುವ ಮುಖ್ಯ ರಸ್ತೆಯ ದುಸ್ಥಿತಿ.
ಪಾಮನಕಲ್ಲೂರು ಗ್ರಾಮದಿಂದ ಹಟ್ಟಿ ಚಿನ್ನದಗಣಿ ಸಂಪರ್ಕಿಸುವ ಅಂದಾಜು 16 ಕಿ.ಮೀ ರಸ್ತೆ ಮಸ್ಕಿ ಮತ್ತು ಲಿಂಗಸುಗೂರು ತಾಲ್ಲೂಕು ವ್ಯಾಪ್ತಿಗೊಳಪಟ್ಟಿದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ರಸ್ತೆ ದುರಸ್ತಿ ಕಂಡಿದ್ದು ಅಪರೂಪ.
ಮಸ್ಕಿ ತಾಲ್ಲೂಕು ವ್ಯಾಪ್ತಿಯ ಅಂದಾಜು 1 ಕಿ.ಮೀ ರಸ್ತೆಯಲ್ಲಿ ಸಂಪೂರ್ಣ ಡಾಂಬರು ಕಿತ್ತುಹೋದ ಪರಿಣಾಮ ಮಣ್ಣಿನ ರಸ್ತೆಯಾಗಿ ಮಾರ್ಪಟ್ಟಿದೆ. ಆಳವಾದ ಗುಂಡಿಗಳು ಬೈಕ್ ಸವಾರರ ಮಗ್ಗಲು ಮುರಿಯುತ್ತಿವೆ. ಸಾರಿಗೆ ಸಂಸ್ಥೆ ಬಸ್, ಲಾರಿ, ಆಟೊ, ಟಂಟಂ ಮತ್ತು ಖಾಸಗಿ ಶಾಲಾ, ಕಾಲೇಜುಗಳ ವಾಹನ ಸಂಚರಿಸುತ್ತಿದ್ದು ವಿಪರೀತ ದೂಳು ಹರಡುತ್ತಿದೆ. ದೂಳಿನಿಂದ ಬೆಳೆಗಳು ಹಾಳಾಗುತ್ತಿವೆ ಎಂದು ರಸ್ತೆ ಬದಿ ಜಮೀನು ಹೊಂದಿದ ರೈತರು ಬೇಸರ ವ್ಯಕ್ತಪಡಿಸುತ್ತಾರೆ.
ಗುಂಡಿಗಳಿಂದ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿದೆ. ಜಾಲಿ ಗಿಡಗಳು ಬೆಳೆದ ಪರಿಣಾಮ ಎದುರಿಗೆ ಬರುವ ವಾಹನಗಳು ಕಾಣಿಸುವುದಿಲ್ಲ. ಮುಂದೆ ವಾಹನ ಚಲಿಸುತ್ತಿದ್ದರೆ ಹಿಂದೆ ಬೈಕ್ ಸವಾರರು ಮೂಗು ಮುಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ಮಳೆ ಬಂದರೆ ಕೆಸರು, ಬಿಸಿಲು ಬಿದ್ದರೆ ದೂಳು ಎನ್ನುವಂತಾಗಿದೆ ಎಂದು ಪಾಮನಕಲ್ಲೂರು ಗ್ರಾಮದ ರಮೇಶ ಗಂಟ್ಲಿ ಮತ್ತು ಲಕ್ಷ್ಮಣ ಚೌಡ್ಲಿ ಆರೋಪಿಸಿದರು.
ಹದಗೆಟ್ಟ ರಸ್ತೆಯಿಂದ ವಾಹನ ಸವಾರರು ಹೈರಾಣ ಅಪೂರ್ಣ ಕಾಮಗಾರಿ, ಗುತ್ತಿಗೆದಾರರ ವಿರುದ್ದ ಆರೋಪ ತುರ್ತು ಸಂದರ್ಭದಲ್ಲಿ ಹಟ್ಟಿ ಆಸ್ಪತ್ರೆಗೆ ತೆರಳಲು ಪರದಾಟ
ಬೈಕ್ ಮತ್ತಿತರ ವಾಹನ ಸವಾರರು ನಿಧಾನವಾಗಿ ಹೋಗುತ್ತಾರೆ. ಆದರೆ ಭತ್ತದ ಹುಲ್ಲು ಸಾಗಿಸುವ ಟ್ರ್ಯಾಕ್ಟರ್ ಹಾಗೂ ಭಾರ ಸಾಗಿಸುವ ವಾಹನ ಸಂಚರಿಸಿದರೆ ಗುಂಡಿಗೆ ಇಳಿದು ಪಲ್ಟಿ ಹೊಡೆಯವುದು ಖಚಿತರಮೇಶ ಗಂಟ್ಲಿ ಪಾಮನಕಲ್ಲೂರು ಕರವೇ ಮುಖಂಡ
ರಸ್ತೆ ಅವ್ಯವಸ್ಥೆ ಕುರಿತು ಶಾಸಕರೊಂದಿಗೆ ಚರ್ಚಿಸಿದ್ದು ಅನುದಾನ ಲಭ್ಯತೆ ಆಧರಿಸಿ ರಸ್ತೆ ದುರಸ್ತಿಗೆ ಕ್ರಮ ವಹಿಸಲಾಗುವುದುವೀರಭದ್ರಗೌಡ ಸಹಾಯಕ ಎಂಜಿನಿಯರ್ ಲೊಕೋಪಯೋಗಿ ಇಲಾಖೆ ಮಾನ್ವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.