ADVERTISEMENT

ಹೆದ್ದಾರಿ ನಿರ್ಮಾಣಕ್ಕೆ ಭೂ ಸ್ವಾಧೀನಕ್ಕೆ ಅಸ್ತು, ₹28.28 ಕೋಟಿ ವೆಚ್ಚದ ಕಾಮಗಾರಿ

ಪ್ರಕಾಶ ಮಸ್ಕಿ
Published 2 ಜನವರಿ 2022, 13:05 IST
Last Updated 2 ಜನವರಿ 2022, 13:05 IST
ಮಸ್ಕಿಯ ಉದ್ದೇಶಿತ ಬೈಪಾಸ್ ರಸ್ತೆ ನಿರ್ಮಾಣದ ನಕ್ಷೆ
ಮಸ್ಕಿಯ ಉದ್ದೇಶಿತ ಬೈಪಾಸ್ ರಸ್ತೆ ನಿರ್ಮಾಣದ ನಕ್ಷೆ   

ಮಸ್ಕಿ: ಬಹುದಿನದ ಕನಸಾಗಿದ್ದ ಪಟ್ಟಣದಲ್ಲಿ ಹಾದು ಹೋಗಿದ್ದ ರಾಷ್ಟ್ರೀಯ ಹೆದ್ದಾರಿ 150 (ಎ) ನಿರ್ಮಾಣಕ್ಕೆ ಇದೀಗ ಮುಹೂರ್ತ ಕೂಡಿ ಬಂದಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಒಟ್ಟು ₹ 28-28 ಕೋಟಿ ವೆಚ್ಚದ ಭೂ ಸ್ವಾಧೀನದ ಕ್ರೀಯಾ ಯೋಜನೆಗೆ ರಾಜ್ಯ ಸರ್ಕಾರ ತನ್ನ ಪಾಲಿನ ಶೇ 50 ರಷ್ಟು ಅನುದಾನ ನೀಡಲು ಒಪ್ಪಿಗೆ ಸೂಚಿಸಿ ಆದೇಶಿಸಿದೆ.

ಪಟ್ಟಣದ ಲಿಂಗುಸಗೂರು ರಸ್ತೆಯಲ್ಲಿನ ಈಶಾನ್ಯ ಸಾರಿಗೆ ಸಂಸ್ಥೆಯ ಡಿಪೋ ಪಕ್ಕದಿಂದ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ರಸ್ತೆಯು ಮುದಗಲ್ ರಸ್ತೆ ಮೂಲಕ ಹಾದು ಸಿಂಧನೂರು ರಸ್ತೆಯ ಗುಡದೂರು ಬಳಿ ಕೂಡಲಿದೆ.

ADVERTISEMENT

8.485 ಕಿಮೀ ಉದ್ದದ ಬೈಪಾಸ್ ರಸ್ತೆ ನಿರ್ಮಾಣಕ್ಕೆ ನೂರಾರು ಎಕರೆ ಭೂಮಿ ಸ್ವಾಧೀನ ಮಾಡಿಕೊಳ್ಳಬೇಕಾಗಿದ್ದು ಅದಕ್ಕಾಗಿ ಹೆದ್ದಾರಿ ಪ್ರಾಧಿಕಾರ ₹ 28.28 ಕೋಟಿ ಪ್ರಸ್ತಾವವನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತ್ತು.

ಭೂ ಸ್ವಾಧೀನಕ್ಕೆ ರಾಜ್ಯ ಸರ್ಕಾರ ತನ್ನ ಪಾಲಿನ ₹ 14.14 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಉಳಿದ ₹ 14.14 ಕೋಟಿ ಅನುದಾನವನ್ನು ಕೇಂದ್ರ ಸರ್ಕಾರ ಬರಿಸಲಿದೆ.

ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಲೆ ಸತತ ಒತ್ತಡ ಹಾಕಿ ಆರ್ಥಿಕ ಇಲಾಖೆಯಿಂದ ರಾಜ್ಯ ಸರ್ಕಾರದ ಪಾಲಿನ ಶೇ 50 ರಷ್ಟು ಅನುದಾವನ್ನು ಮುಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈಗಾಗಲೇ ಸರ್ಕಾರದ ಅರ್ಥಿಕ ಇಲಾಖೆಯ ಅಧೀನ ಕಾರ್ಯದರ್ಶಿ ಕೆ. ಗಾಯಿತ್ರಿ ಅವರು ಮಸ್ಕಿ ಪಟ್ಟಣದ ಬೈಪಾಸ್ ರಸ್ತೆ ಭೂ ಸ್ವಾಧೀನಕ್ಕೆ ಪುನರ್ ವಸತಿ ಇತರೆ ಕೆಲಸಗಳಿಗಾಗಿ ರಾಜ್ಯ ಸರ್ಕಾರದ ಪಾಲಿನ ₹ 14.14 ಕೋಟಿ ಭರಿಸಲು ಒಪ್ಪಿಗೆ ಸೂಚಿಸಿ ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಬೈಪಾಸ್ ರಸ್ತೆ ವೇಳೆ ಪಟ್ಟಣದ ಹಿರೇಹಳ್ಳ ಹಾಗೂ ತುಂಗಭದ್ರಾ ಎಡದಂಡೆಯ ಮುಖ್ಯ ಕಾಲುವೆಗೆ ಎರಡು ಬೃಹತ್ ಸೇತುವೆಗಳ ಜೊತೆಗೆ ಹತ್ತಾರು ಸಣ್ಣ ಪುಟ್ಟ ಸೇತುವೆಗಳು ನಿರ್ಮಣವಾಗಲಿವೆ.

ಈಗಾಗಲೇ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಬೇಕಾದ ₹ 200 ಕೋಟಿ ವೆಚ್ಚದ ಪ್ರಸ್ತಾವನೆ ಕೇಂದ್ರ ಸರ್ಕಾರದ ಮುಂದಿದೆ. ರಾಜ್ಯ ಸರ್ಕಾರ ಇದೀಗ ಭೂ ಸ್ವಾದೀನಕ್ಕೆ ತನ್ನ ಪಾಲಿನ ಅನುದಾನ ನೀಡಲು ಒಪ್ಪಿಗೆ ಸೂಚಿಸಿದ್ದರಿಂದ ಶೀಘ್ರದಲ್ಲಿ ಯೋಜನೆ ಚಾಲನೆ ಪಡೆಯಲಿದೆ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ವಿಜಯಕುಮಾರ ತಿಳಿಸಿದ್ದಾರೆ.

ರಸ್ತೆ ಆಧುನಿಕರಣಕ್ಕೆ ₹ 13 ಕೋಟಿ

ಮಸ್ಕಿ ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 150 (ಎ) ರಲ್ಲಿ ₹ 13 ಕೋಟಿ ವೆಚ್ಚದಲ್ಲಿ ದ್ವಿಪಥ ರಸ್ತೆ ನಿರ್ಮಾಣ, ರಸ್ತೆ ವಿಭಜಕ, ಹೈಮಾಸ್ಟ್‌ ದೀಪಗಳ ಅಳವಡಿಕೆಗಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.

ಅಶೋಕ ವೃತ್ತದಿಂದ ವಾಲ್ಮೀಕಿ ವೃತ್ತದ ವರೆಗೆ ಒಳ ಚರಂಡಿ, ಪಾದಚಾರಿ ರಸ್ತೆ, ತಂಗುದಾಣ ಸೇರಿದಂತೆ ಇತರೆ ಕಾಮಗಾರಿಗಳು ಈ ಕ್ರೀಯಾ ಯೋಜನೆಯಲ್ಲಿ ಸೇರಿದ್ದು ಶೀಘ್ರ ಕೇಂದ್ರ ಸರ್ಕಾರದಿಂದ ಮುಂಜೂರಾತಿ ದೂರೆಯುವ ನಿರೀಕ್ಷೆ ಇದೆ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ವಿಜಯಕುಮಾರ ತಿಳಿಸಿದ್ದಾರೆ.

**

ಮಸ್ಕಿಯ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲಿ ಭೂ ಸ್ವಾಧೀನ ಕಾರ್ಯ ಆರಂಭವಾಗಲಿದೆ. ಕೇಂದ್ರ ಸರ್ಕಾರ ಹೆದ್ದಾರಿ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಿದೆ.

- ಸಂಗಣ್ಣ ಕರಡಿ, ಸಂಸದರು ಕೊಪ್ಪಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.