ADVERTISEMENT

ಕವಿತಾಳ: ಅರಣ್ಯ ಇಲಾಖೆಯಿಂದ ಜಮೀನು ಅತಿಕ್ರಮಣ ಆರೋಪ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲು ಮುಂದಾದ ರೈತರು

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 6:46 IST
Last Updated 6 ಆಗಸ್ಟ್ 2025, 6:46 IST
ಕವಿತಾಳ ಸಮೀಪದ ಕಾಚಾಪುರದ ಜಮೀನುಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಗುಂಡಿ ತೋಡಿರುವುದನ್ನು ರೈತರು ಖಂಡಿಸಿದರು
ಕವಿತಾಳ ಸಮೀಪದ ಕಾಚಾಪುರದ ಜಮೀನುಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಗುಂಡಿ ತೋಡಿರುವುದನ್ನು ರೈತರು ಖಂಡಿಸಿದರು   

ಕವಿತಾಳ: ‘ಮಾಹಿತಿ ನೀಡದೆ ಜಮೀನುಗಳಲ್ಲಿ ಸಸಿ ನೆಡಲು ಗುಂಡಿ ತೋಡುವ ಮೂಲಕ ಅರಣ್ಯ ಇಲಾಖೆ ಅಧಿಕಾರಿಗಳು ನಮ್ಮನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಮಸ್ಕಿ ತಾಲ್ಲೂಕಿನ ಪಾಮನಕಲ್ಲೂರು ಹೋಬಳಿ ಯಕ್ಲಾಸ್ಪುರ ಸೀಮಾ ವ್ಯಾಪ್ತಿಯ ಕಾಚಾಪುರ, ಯತಗಲ್‌, ನೆಲಕೊಳ ಗ್ರಾಮಗಳ 20ಕ್ಕೂ ಹೆಚ್ಚಿನ ರೈತರ ಜಮೀನುಗಳಲ್ಲಿಅರಣ್ಯ ಇಲಾಖೆ ಅಧಿಕಾರಿಗಳು ಸಸಿ ನೆಡಲು ಗುಂಡಿ ತೋಡಿದ್ದಾರೆ.

ಅಧಿಕಾರಿಗಳ ನಡೆ ಖಂಡಿಸಿರುವ ರೈತರು, ‘ಶತಮಾನಗಳಿಂದ ಅದೇ ಜಮೀನಿನಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳುತ್ತಿದ್ದೇವೆ. ಜಮೀನಿನ ದಾಖಲೆಗಳು ನಮ್ಮ ಹೆಸರಿನಲ್ಲಿವೆ. ಈಗ ಇದ್ದಕ್ಕಿದ್ದಂತೆ ಜಮೀನುಗಳು ಅರಣ್ಯ ಇಲಾಖೆ ವ್ಯಾಪ್ತಿಗೊಳಪಟ್ಟಿವೆ ಎಂದು ಕೃಷಿ ಚಟುವಟಿಕೆ ಕೈಗೊಳ್ಳಲು ಬಿಡುತ್ತಿಲ್ಲ’ ಎಂದು ರೈತರು ಅಳಲು ತೋಡಿಕೊಂಡರು.

ADVERTISEMENT

‘6.32 ಎಕರೆ ಜಮೀನಿನಲ್ಲಿ ಅಂದಾಜು 2 ಎಕರೆ ಹೊರತುಪಡಿಸಿ ಉಳಿದ ಜಮೀನಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಈಚೆಗೆ ಗುಂಡಿ ತೋಡಿದ್ದಾರೆ. ಪಹಣಿ ತೋರಿಸಿದರೂ ಕೃಷಿ ಚಟುವಟಕೆ ಕೈಗೊಳ್ಳಲು ಬಿಡುತ್ತಿಲ್ಲ. ಹೀಗಾಗಿ ವಿಷ ಕುಡಿಯುವ ಪರಿಸ್ಥಿತಿ ಉಂಟಾಗಿದೆ’ ಎಂದು ಕಾಚಾಪುರ ಗ್ರಾಮದ ರೈತ ರಾಮಪ್ಪ ಹೇಳಿದರು.

‘ಜಮೀನುಗಳ ದಾಖಲೆಗಳ ಆಧಾರದ ಮೇಲೆ ಬ್ಯಾಂಕ್‌ಗಳಲ್ಲಿ ಬೆಳೆ ಸಾಲ ಹಾಗೂ ಬೆಳೆ ವಿಮೆ ಪಡೆಯುತ್ತಿದ್ದೇವೆ. ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಟ್ಟರೆ ಈ ಸೌಲಭ್ಯ ಹೇಗೆ ನೀಡಲಾಗುತ್ತಿದೆ’ ಎಂದು ರೈತರಾದ ಹುಚ್ಚಪ್ಪ ಕುಂಬಾರ, ಶಿವಣ್ಣ ಬುಳ್ಳಾಪುರ, ಗಂಗಪ್ಪ ಕುಂಬಾರ, ಚಂದುಸಾಬ್‌, ಪಿಡ್ನೆಸಾಬ್‌, ಬಸವರಾಜ, ರಡ್ಡೆಪ್ಪ, ನಿಂಗನಗೌಡ ಮತ್ತು ಯಂಕಪ್ಪ ತಳವಾರ ಆಕ್ರೋಶ ವ್ಯಕ್ತಪಡಿಸಿದರು.

ಕವಿತಾಳ ಸಮೀಪದ ಕಾಚಾಪುರದ ಜಮೀನುಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಗುಂಡಿ ತೋಡಿರುವುದನ್ನು ರೈತರು ಖಂಡಿಸಿದರು
ಈ ಬಗ್ಗೆ ಶಾಸಕರು ತಹಶೀಲ್ದಾರರು ಪೊಲೀಸ್‌ ಠಾಣೆಗೆ ಲಿಖಿತ ಮಾಹಿತಿ ನೀಡಿದ್ದು ಮುಖ್ಯಮಂತ್ರಿಗಳ ಭೇಟಿಗೆ ಅವಕಾಶ ಸಿಕ್ಕರೆ ದೂರು ಸಲ್ಲಿಸಲಾಗುವುದು
ಯಮನೂರು ನಾಯಕ ಯತಗಲ್ ರೈತ ಮುಖಂಡ
ತಾತ ಮುತ್ತಾತಂದಿರ ಕಾಲದಿಂದ ಉಳುಮೆ ಮಾಡುತ್ತಿದ್ದ ಜಮೀನು ಅರಣ್ಯ ಇಲಾಖೆಗೆ ಬಿಡಬೇಕು. ಗುಡ್ಡದ ಮೇಲೆ ಬರಡು ನೆಲದಲ್ಲಿ ಉಳುಮೆ ಮಾಡಿಕೊಳ್ಳಲಿ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ
ಈರಣ್ಣ ನಾಯಕ ರೈತ ಮುಖಂಡ
ಇಲಾಖೆಗೆ ಸೇರಿದ ಜಾಗದಲ್ಲಿ ಸಸಿ ನೆಡಲು ಗುಂಡಿ ತೋಡಲಾಗಿದೆ. ರೈತರ ಜಮೀನು ಅತಿಕ್ರಮಣ ಮಾಡಿಲ್ಲ. ರೈತರು ಸರ್ವೇ ಮಾಡಿಸಿಕೊಂಡು ತಮ್ಮ ಜಮೀನು ಹದ್ದುಬಸ್ತು ಮಾಡಿಕೊಳ್ಳಬಹುದು
ನೀಲಕಂಠ ಉಪ ವಲಯ ಅರಣ್ಯಾಧಿಕಾರಿ ಮಾನ್ವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.