ADVERTISEMENT

ರಾಯಚೂರು: ನಿರಾಶ್ರಿತರ ಪರಿಹಾರ ಕೇಂದ್ರ ಆರಂಭ

ಮಳೆ ಹಾನಿ ಸಂತ್ರಸ್ತರಿಗೆ ಶೀಘ್ರ ಪರಿಹಾರ ವಿತರಣೆ: ಜಿಲ್ಲಾಡಳಿತ ಭರವಸೆ

ಬಾವಸಲಿ
Published 28 ಸೆಪ್ಟೆಂಬರ್ 2020, 7:40 IST
Last Updated 28 ಸೆಪ್ಟೆಂಬರ್ 2020, 7:40 IST
ರಾಯಚೂರಿನ ಇಫಾ ಫೌಂಡೇಶನ್ ವತಿಯಿಂದ ಆಶ್ರಯ ಕಾಲೊನಿಯಲ್ಲಿ ಊಟ ವಿತರಿಸಲಾಯಿತು(ಎಡಚಿತ್ರ). ಶಕ್ತಿನಗರ ಬಳಿಯ ಹೆಗ್ಗಸನಹಳ್ಳಿ ಗ್ರಾಮದಲ್ಲಿ ತೆರೆದ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಭಾನುವಾರ ನಿರಾಶ್ರಿತರು ಉಪಾಹಾರ ಪಡೆದರು
ರಾಯಚೂರಿನ ಇಫಾ ಫೌಂಡೇಶನ್ ವತಿಯಿಂದ ಆಶ್ರಯ ಕಾಲೊನಿಯಲ್ಲಿ ಊಟ ವಿತರಿಸಲಾಯಿತು(ಎಡಚಿತ್ರ). ಶಕ್ತಿನಗರ ಬಳಿಯ ಹೆಗ್ಗಸನಹಳ್ಳಿ ಗ್ರಾಮದಲ್ಲಿ ತೆರೆದ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಭಾನುವಾರ ನಿರಾಶ್ರಿತರು ಉಪಾಹಾರ ಪಡೆದರು   

ರಾಯಚೂರು: ನಗರ ಸೇರಿ ಜಿಲ್ಲೆಯದಾದ್ಯಂತ ಈಚೆಗೆ ಸುರಿದ ಮಳೆಯಿಂದಾಗಿ ಜಲಾವೃತ್ತಗೊಂಡ ಹಾಗೂ ಮನೆಗಳಲ್ಲಿ ನೀರು ನುಗ್ಗಿದ ಪ್ರದೇಶಗಳ ಜನರಿಗೆ ತಾತ್ಕಾಲಿಕ ಪರಿಹಾರೋಪಾ ಯವಾಗಿ ಸಂತ್ರಸ್ತರಿಗಾಗಿ ಜಿಲ್ಲಾಡಳಿತದಿಂದ ನಿರಾಶ್ರಿತರ ಪರಿಹಾರ ಕೇಂದ್ರವನ್ನು ಆರಂಭಿಸಲಾಗಿದೆ.

ನಗರದ ಹಲವೆಡೆ ಭಾರಿ ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ ಪರಿಣಾಮ ಅಪಾರ ಪ್ರಮಾಣದ ಹಾನಿಯಾಗಿದ್ದು ಮನೆಯಲ್ಲಿ ವಾಸಿಸಲು ಸ್ಥಳವಿಲ್ಲದಾಗಿದೆ.

ಊಟ ಹಾಗೂ ವಸತಿ ಸಮಸ್ಯೆ ತಲೆದೂರದಂತೆ ಜಿಲ್ಲಾಡಳಿತ ಪ್ರತಿ ಏರಿಯಾಗೆ ಒಬ್ಬ ನೋಡಲ್ ಅಧಿಕಾರಿಗಳನ್ನು ನಿಯೋಜಿಸಿದ್ದು, ಸಂತ್ರಸ್ತರಿಗೆ ತಾತ್ಕಾಲಿಕ ಸೂರಿನ ವ್ಯವಸ್ಥೆ ಮಾಡಿ ಊಟೋಪಚಾರದ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿ ಆದೇಶ ನೀಡಿದ ಹಿನ್ನೆಲೆಯಲ್ಲಿ ನಗರದಲ್ಲಿ ಶನಿವಾರ ರಾತ್ರಿಯಿಂದಲೇ ನಗರದ ಕಾಕಾನ ಕೆರೆ, ನೀರುಬಾವಿ ಕುಂಟಾ, ಬಸವನಬಾವಿ ವೃತ್ತ, ತಾಲ್ಲೂಕಿನ ಹೆಗ್ಗನಹಳ್ಳಿ ಸೇರಿದಂತೆ ವಿವಿಧೆಡೆ ನಿರಾಶ್ರಿತ ಪರಿಹಾರ ಕೇಂದ್ರಗಳನ್ನು ತೆರೆದು ಊಟ ನೀಡಲಾಗುತ್ತಿದೆ.

ADVERTISEMENT

ಸಿರವಾರ ತಾಲ್ಲೂಕಿನ ಹೊಸೂರು ಸೇತುವೆಯೇ ಕಡಿದು ಹೋಗಿದೆ. ಕೆಲವೆಡೆ ಮನೆಗಳು ಕುಸಿದು ಬಿದ್ದರೆ, ಹಲವೆಡೆ ವಿದ್ಯುತ್ ಕಂಬಗಳು, ಮರಗಳು ನೆಲಕ್ಕುರುಳಿವೆ. ಈಗ ಪ್ರಾಥಮಿಕ ವರದಿಯ ಪ್ರಕಾರ ರಾಯಚೂರು ತಾಲ್ಲೂಕಿನಲ್ಲಿ 500 ಮನೆಗಳಿಗೆ ಹಾನಿಯಾದರೆ, ಲಿಂಗಸೂಗೂರು 99, ಸಿಂಧನೂರು 53, ದೇವದುರ್ಗ 51, ಮಾನ್ವಿ 50 ಮನೆಗಳು ಹಾನಿಯಾಗಿದೆ ಎಂದು ಜಿಲ್ಲಾಡಳಿತ
ಅಂದಾಜಿಸಿದೆ.

‘ಮಳೆಯಿಂದ ಆದ ಹಾನಿಯ ಬಗ್ಗೆ ಸಮೀಕ್ಷೆ ನಡೆಯುತ್ತಿದ್ದು ಸೋಮವಾರ ವರದಿ ತಯಾರಾಗಬಹುದು. ಸಂತ್ರಸ್ಥರ ನೆರವಿಗೆ ಆಯಾ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ನೋಡಲ್ ಅಧಿಕಾರಿಗಳು ಆಹಾರ ಹಂಚಿಕೆ ಮಾಡಲಾಗುತ್ತಿದೆ. ಶನಿವಾರ ಹೆಗ್ಗಸಹಳ್ಳಿಯಲ್ಲಿ ಮತ್ತಿತರೆಡೆ ನಿರಾಶ್ರಿತ ಪರಿಹಾರ ಕೇಂದ್ರ ತೆರೆಯಲಾಗಿದ್ದು, ಶನಿವಾರವೇ ವಾಸ್ತವ್ಯ ಹೂಡಿದ್ದರು. ಕೆಲವರು ಮಳೆ ನೀರು ಖಾಲಿ ಮಾಡಿ ಭಾನುವಾರ ಮನೆಗಳಿಗೆ ಹೋಗಿದಾರೆ. ಸಂತ್ರಸ್ತರ ಮನೆಗಳಿಗೇ ಊಟ ಕಳುಹಿಸುವ ಕೆಲಸ ಮಾಡುತ್ತಿದ್ದೇವೆ. ಇಡಪನೂರಿನಲ್ಲಿ ಮಾತ್ರ ಗಂಜಿ ಕೇಂದ್ರ ಇನ್ನೂ ನಡೆತಿದೆ. ಹಾನಿಯ
ಬಗ್ಗೆ ಸಮಗ್ರ ಪರಿಶೀಲಿಸಿ ಪ್ರಕೃತಿ ವಿಕೋಪ ನಿಯಮದ ಅಡಿ ಪರಿಹಾರ ನೀಡಲಾಗುವುದು‘ ಎಂದು ತಹಶೀಲ್ದಾರ್ ಹಂಪಣ್ಣ ‘ಪ್ರಜಾವಾಣಿ‘ಗೆ ತಿಳಿಸಿದರು.

ಮುಖ್ಯಮಂತ್ರಿಗೆ ಪ್ರಸ್ತಾವ: ನಗರದಲ್ಲಿ ಅವೈಜ್ಞಾನಿಕ ಕಾಮಗಾರಿಗಳಿಂದಾಗಿ ಮಳೆ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಈಗಾಗಲೇ ಕೈಗೊಂಡ ಯುಜಿಡಿ, ನಿರಂತರ ಕುಡಿವ ನೀರಿನ ಯೋಜನೆಗಳು ಅರೆಬರೆಯಾಗಿದ್ದು ನಗರದ ಸಮಗ್ರ ಹಾನಿ ದುರಸ್ತಿಗಾಗಿ ತುರ್ತು ಕಾಮಗಾರಿ ಕೈಗೊಳ್ಳಲು ₹ 25 ಕೋಟಿ ಅನುದಾನ ಮಂಜೂರು ಮಾಡುವಂತೆ ಶಾಸಕ ಡಾ.ಶಿವರಾಜ್ ಪಾಟೀಲ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪ್ರಸ್ತಾವ ಸಲ್ಲಿಸಿದ್ದಾರೆ. ಅಧಿವೇಶನದಲ್ಲಿ ಪಾಲ್ಗೊಂಡಿರುವ ಶಾಸಕರು ಬಿಡುವಿನ ವೇಳೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.