ADVERTISEMENT

ಕಾನೂನು ಅರಿವಿದ್ದರೆ ಧ್ವನಿಯೆತ್ತಲು ಸಾಧ್ಯ: ಅಶೋಕ ಎಚ್.ಮಲಘಾಣ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2019, 13:29 IST
Last Updated 26 ಮಾರ್ಚ್ 2019, 13:29 IST
ರಾಯಚೂರಿನಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆಯಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷ ಅಶೋಕ ಎಚ್.ಮಲಘಾಣ ಮಾತನಾಡಿದರು
ರಾಯಚೂರಿನಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆಯಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷ ಅಶೋಕ ಎಚ್.ಮಲಘಾಣ ಮಾತನಾಡಿದರು   

ರಾಯಚೂರು: ಕಾನೂನಿನ ಅರಿವು ಇದ್ದರೆ ಮಾತ್ರ ಅನ್ಯಾಯದ ವಿರುದ್ಧ ಧ್ವನಿಯೆತ್ತಿ ಪ್ರತಿಭಟಿಸಲು ಸಾಧ್ಯವಾಗಲಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷ ಅಶೋಕ ಎಚ್.ಮಲಘಾಣ ಹೇಳಿದರು.

ಜಿಲ್ಲಾ ಪಂಚಾಯಿತಿಯ ಜಲನಿರ್ಮಲ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಹಾರ ನಾಗರೀಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ, ಕಾನೂನು ಮಾಪನ ಶಾಸ್ತ್ರ ಇಲಾಖೆಯಿಂದ ಮಂಗಳವಾರ ಆಯೋಜಿಸಿದ್ದ ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮನುಷ್ಯನ ಹಕ್ಕು ಹಾಗೂ ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ವ್ಯಾಪಾರಿ ಮನೋಭಾವ ಒಬ್ಬರಿಗೆ ಮಾತ್ರ ಲಾಭವಾಗುವ ರೀತಿಯಲ್ಲಿ ಇರಬಾರದು. ಮಾರಾಟ ಮಾಡುವವರು ಹಾಗೂ ಖರೀದಿಸುವವರಿಗೂ ಪೂರಕವಾಗಿರಬೇಕು ಎಂದರು.

ADVERTISEMENT

ತೂಕ, ಅಳತೆಯಲ್ಲಿ ಹಾಗೂ 22 ಕ್ಯಾರೆಟ್‌ ಬಂಗಾರವನ್ನು 24 ಕ್ಯಾರೆಟ್‌ ಎನ್ನುವ ಮೂಲಕ ಮೋಸ ಮಾಡುತ್ತಿರುತ್ತಾರೆ. ಯಾವುದೇ ಉತ್ಪನ್ನವನ್ನು ಖರೀದಿಸುವ ಎಚ್ಚರಿಕೆ ವಹಿಸಬೇಕು. ಸಂವಿಧಾನದಲ್ಲಿ ನೀಡಿರುವ ಹಕ್ಕುಗಳನ್ನು ಸಮರ್ಪಕವಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿ ಇರುವದರಿಂದ ವಿಶ್ವ ಗ್ರಾಹಕರ ದಿನವನ್ನು ಸರಳ ರೀತಿಯಲ್ಲಿ ಆಚರಣೆ ಮಾಡಲಾಗುತ್ತಿದೆ ಎಂದರು.

ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಅರುಣಕುಮಾರ ಸಂಗಾವಿ ಮಾತನಾಡಿ, ಯಾವುದೇ ವಸ್ತುವನ್ನು ಖರೀಸುವಾಗ ಗ್ರಾಹಕರು ತಪ್ಪದೇ ರಸೀದಿಯನ್ನು ಪಡೆದುಕೊಳ್ಳಬೇಕು. ಖರೀದಿಯಲ್ಲಿ ಏನಾದರೂ ಅನ್ಯಾಯವಾದಲ್ಲಿ ಜಿಲ್ಲಾ ಮಟ್ಟ, ರಾಜ್ಯ ಮಟ್ಟ ಹಾಗೂ ರಾಷ್ಟ್ರ ಮಟ್ಟದಲ್ಲಿ ಗ್ರಾಹಕ ವೇದಿಕೆಗಳ ಮುಖಾಂತರ ನ್ಯಾಯ ಪಡೆಯಬಹುದು ಎಂದು ಹೇಳಿದರು.

ಒಂದು ಕೋಟಿಗಿಂತ ಅಧಿಕ ಮೊತ್ತದ ದೂರುಗಳಿದ್ದರೆ ರಾಷ್ಟ್ರಮಟ್ಟದ ಗ್ರಾಹಕರ ವೇದಿಕೆಗೆ ದೂರು ನೀಡಬೇಕು. ಅನ್ಯಾಯವನ್ನು ಪ್ರಶ್ನಿಸುವ ಮೂಲಕ ಗ್ರಾಹಕರು ಹಕ್ಕುಗಳನ್ನು ಚಲಾಯಿಸಿ ನ್ಯಾಯ ಪಡೆದುಕೊಳ್ಳಬೇಕು ಎಂದರು.

ಕಾನೂನು ಮಾಪನ ಇಲಾಖೆಯ ನಿರೀಕ್ಷಕ ಮಾನಯ್ಯ ಮಾತನಾಡಿ, ತೂಕ ಹಾಗೂ ಅಳತೆಯಲ್ಲಿ ಹೆಚ್ಚಾಗಿ ಅನ್ಯಾಯವಾಗುವುದು ಕಾಣುತ್ತೇವೆ. ಈ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ನ್ಯಾಯಬೆಲೆ ಅಂಗಡಿಯವರು ಪ್ರತಿ ಸೋಮವಾರ ಸತ್ಯಾಪನ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಜಿಲ್ಲಾ ವ್ಯವಸ್ಥಾಪಕ ಶ್ರೀನಿವಾಸರೆಡ್ಡಿ, ಆಹಾರ ನಿರೀಕ್ಷಕ ಡಿ.ಆರ್.ವೆಂಕಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.