ADVERTISEMENT

ಉಚಿತ ಯೋಜನೆಗಳಿಂದ ಸೋಮಾರಿತನ ಹೆಚ್ಚಳ: ಮುಂಡರಗಿ ಅನ್ನದಾನೇಶ್ವರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 22 ಮೇ 2025, 13:10 IST
Last Updated 22 ಮೇ 2025, 13:10 IST
ಲಿಂಗಸುಗೂರು ತಾಲ್ಲೂಕಿನ ಯರಡೋಣಾ ಸಿದ್ಧರಾಮೇಶ್ವರ ಗುರುಮಠದಲ್ಲಿ ನಿರ್ಮಿಸಲಾದ ನೂತನ ದಾಸೋಹ ಭವನವನ್ನು ಅನ್ನದಾನೇಶ್ವರ ಸ್ವಾಮೀಜಿ ಉದ್ಘಾಟಿಸಿದರು
ಲಿಂಗಸುಗೂರು ತಾಲ್ಲೂಕಿನ ಯರಡೋಣಾ ಸಿದ್ಧರಾಮೇಶ್ವರ ಗುರುಮಠದಲ್ಲಿ ನಿರ್ಮಿಸಲಾದ ನೂತನ ದಾಸೋಹ ಭವನವನ್ನು ಅನ್ನದಾನೇಶ್ವರ ಸ್ವಾಮೀಜಿ ಉದ್ಘಾಟಿಸಿದರು   

ಲಿಂಗಸುಗೂರು: ‘ಸರ್ಕಾರಗಳು ನೀಡುವ ಉಚಿತ ಯೋಜನೆಗಳಿಂದ ಜನರಲ್ಲಿ ಕಾಯಕ ನಿಷ್ಠೆ ಮರೆಮಾಡಿ ಸೋಮಾರಿತನ ಹೆಚ್ಚಾಗಿದೆ’ ಎಂದು ಮುಂಡರಗಿ ಅನ್ನದಾನೇಶ್ವರ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಯರಡೋಣಾ ಸಿದ್ಧರಾಮೇಶ್ವರ ಗುರುಮಠದಲ್ಲಿ ಗುರುವಾರ ದಾಸೋಹ ಭವನ ಹಾಗೂ 63 ಸ್ವಾಮಿಗಳ ಪಾದಪೂಜೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಬಸವ ತತ್ವದಡಿಯಲ್ಲಿ ಆಡಳಿತ ಮಾಡುವ ಭರವಸೆ ನೀಡಿ ಈಗ, ಉಚಿತ ಆಹಾರ ಧಾನ್ಯ, ಹಣ ನೀಡುವ ಯೋಜನೆಗಳನ್ನು ಜಾರಿಗೆ ತಂದು ಜನರಲ್ಲಿ ಅಲಸ್ಯತನ ಬೆಳೆದು ಸೋಮಾರಿಗಳನ್ನಾಗಿ ಮಾಡುತ್ತಿವೆ. ದುಡಿಯಲಾರದೇ ದುಡ್ಡು ಗಳಿಸುವ ಪ್ರವೃತ್ತಿ ಬೆಳೆಯುತ್ತಿದೆ. ಹಳ್ಳಿಗಳಲ್ಲಿ ಕೆಲಸ ಮಾಡಲು ಕೆಲಸಗಾರರೇ ಸಿಗುತ್ತಿಲ್ಲ, ಹಾಗಾದರೆ ಬಸವಣ್ಣನವರ ಆದರ್ಶ ಪಾಲನೆ ಅಂದರೆ ಇದೇನಾ? ಎಂದು ಪ್ರಶ್ನಿಸಿದರು.

ADVERTISEMENT

‌‘ವೇದ, ಆಗಮ, ಶಾಸ್ತ್ರವನ್ನು ಮೀರಿಸುವಂತಹ ತತ್ವ ಅದು ಜಂಗಮ ತತ್ವ. ವೀರಶೈವ ಸಿದ್ಧಾಂತದಲ್ಲಿ ಲಿಂಗಪೂಜೆಗೆ ವಿಶೇಷ ಶಕ್ತಿ, ಮಹತ್ವವಿದೆ. ಆಯ್ದಕ್ಕಿ ಲಕ್ಕಮ್ಮ, ಅಮರೇಶ್ವರರು ಜನಿಸಿದ ಯರಡೋಣಾದಲ್ಲಿ ಸಿದ್ಧರಾಮೇಶ್ವರ ಗುರುಮಠ ಅತಿವೇಗದಲ್ಲಿ ಬೆಳೆಯಲು ಭಕ್ತರು ಮುರುಘೇಂದ್ರ ಶಿವಯೋಗಿಗಳ ಮೇಲಿನ ಶಕ್ತಿ ಹಾಗೂ ಭಕ್ತಿಯ ಧ್ಯೂತಕವಾಗಿದೆ’ ಎಂದರು.

ಭಗವಂತ ಕರುಣಿಸಿದ ದೇಹ ಧರ್ಮಕ್ಕೆ, ಸಮಾಜಕ್ಕೆ ಮೀಸಲಾಗಬೇಕು. ಅಂದಾಗ ಮಾತ್ರ ಭೂಮಿಯ ಮೇಲೆ ಮಾನವನಾಗಿ ಜನಿಸಿದ್ದು ಸಾರ್ಥಕವಾಗುವುದು’ ಎಂದರು.

ಈ ಸಂದರ್ಭದಲ್ಲಿ ನಿಜಾನಂದ ಸ್ವಾಮೀಜಿ, ಶಾಂತಲಿಂಗ ಸ್ವಾಮೀಜಿ, ಮುರುಘೇಂದ್ರ ಶಿವಯೋಗಿ, ಅಭಿನವ ಗಜದಂಡ ಶಿವಾಚಾರ್ಯರು, ಸದಾನಂದ ಸ್ವಾಮೀಜಿ, ಬಸವ ಪ್ರಸಾದ ಸ್ವಾಮೀಜಿ, ಅಡವಿಲಿಂಗ ಸ್ವಾಮೀಜಿ ಸೇರಿ ವಿವಿಧ ಮಠಾಧೀಶರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.