ಹಟ್ಟಿಚಿನ್ನದಗಣಿ: ಚಿರತೆ ದಾಳಿಗೆ ಇಲ್ಲಿಗೆ ಸಮೀಪದ ಗದ್ದಗಿ ಗ್ರಾಮದ ಹನುಮಂತ ಪೂಜಾರಿ ಅವರಿಗೆ ಸೇರಿದ ಆಕಳ ಕರುವೊಂದು ಬಲಿಯಾಗಿದೆ.
ಗುರುಗುಂಟಾ ಹೋಬಳಿ ವ್ಯಾಪ್ತಿಯ ಪೈದೊಡ್ಡಿ ಗದ್ದಗಿ ಗ್ರಾಮದಲ್ಲಿ ಆಗಾಗ ಚಿರತೆ ಪ್ರತಕ್ಷವಾಗಿ ಆಕಳು ಹಾಗೂ ಕರುಗಳ ಮೇಲೆ ದಾಳಿ ನಡೆಸಿ ಭಕ್ಷಿಸುತ್ತಿದ್ದು, ಸುತ್ತಲಿನ ಗ್ರಾಮಸ್ಥರಲ್ಲಿ ಭೀತಿ ಮೂಡಿದೆ.
‘ಈಗಾಗಲೇ ಪೈದೊಡ್ಡಿ ಗ್ರಾಮದ ಕೆಲವು ಕಡೆ ಚಿರತೆ ಹಿಡಿಯಲು ಅರಣ್ಯಾಧಿಕಾರಿಗಳು ಬೋನುಗಳನ್ನು ಇರಿಸಿದ್ದಾರೆ. ಆದರೆ, ಇದುವರೆಗೂ ಚಿರತೆ ಸುಳಿವು ಸಿಕ್ಕಿಲ್ಲ. ಈ ಹಿಂದೆ ಒಂದು ಆಕಳನ್ನು ಸಾಯಿಸಿತ್ತು. ಭಾನುವಾರ ಸಂಜೆ ಕರುವನ್ನು ಬಲಿ ಪಡೆದಿದೆ. ಆದಷ್ಟು ಬೇಗ ಚಿರತೆ ಹಿಡಿದು ಬೇರೆಡೆ ಸ್ಧಳಾಂತರ ಮಾಡಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನ ತೊಂದರೆ ಅನುಭವಿಸುವಂತಾಗಿದೆ. ಮಕ್ಕಳು ಮಹಿಳೆಯರು, ಹಿರಿಯ ನಾಗರಿಕರು ಸಂಜೆ ರಸ್ತೆಯಲ್ಲಿ ಓಡಾಡದಂತಾಗಿದೆ. ಜಮೀನಿಗೆ ಹೋಗಲು ಜನರು ಹಿಂಜರಿಯುತ್ತಿದ್ದಾರೆ. ಕೂಲಿ ಕೆಲಸಕ್ಕೂ ಹೋಗದ ಸ್ಧಿತಿ ಎದುರಾಗಿದೆ. ಜನರ ಸಮಸ್ಯೆ ಆಲಿಸಬೇಕಾದ ಅಧಿಕಾರಿಗಳು ಕಾಟಾಚಾರಕ್ಕೆ ಎಂಬಂತೆ ಬಂದು ಹೋಗುತ್ತಿದ್ದಾರೆ. ಚಿರತೆ ಹಿಡಿಯುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ’ ಎಂದು ವೆಂಕಟೇಶ ದೊರೆ ದೂರುತ್ತಾರೆ.
‘ಅನಾಹುತ ಜರುಗುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಪ್ರಾಣ ಹಾನಿಯಾದರೆ ಅದಕ್ಕೆ ಅರಣ್ಯ ಅಧಿಕಾರಿಗಳೆ ನೇರ ಹೊಣೆ’ ಎಂದು ಗ್ರಾಮಸ್ಧರು ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.