
ರಾಯಚೂರು: ‘ಕುಷ್ಠರೋಗ ಗುಣಪಡಿಸಲು ಸಾಧ್ಯವಿದೆ. ಸರ್ಕಾರ ಎಲ್ಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯವಿದ್ದು, ರೋಗಿಗಳು ಅದರ ಪೂರ್ಣ ಸದುಪಯೋಗ ಪಡೆಯಬೇಕು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರಕುಮಾರ ಕಾಂದೂ ಹೇಳಿದರು.
ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿ ನವೆಂಬರ್ 3 ರಿಂದ 19ರವರೆಗೆ ಜಿಲ್ಲೆಯಾದ್ಯಂತ ನಡೆಯಲಿರುವ ಕುಷ್ಠರೋಗ ಪತ್ತೆ ಹಚ್ಚುವ ಅಭಿಯಾನ ಪ್ರಯುಕ್ತ ನಗರದ ಜಿಲ್ಲಾ ಪಂಚಾಯಿತಿಯ ಜಲ ನಿರ್ಮಲ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಡೆದ ಜಿಲ್ಲಾ ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಸ್ಪರ್ಶಜ್ಞಾನವಿಲ್ಲದ ತಿಳಿಬಿಳಿ ತಾಮ್ರವರ್ಣದ ಮಚ್ಚೆಗಳು ದೇಹದ ಮೇಲೆ ಕಂಡುಬಂದಲ್ಲಿ ನಿರ್ಲಕ್ಷಿಸದೆ ಕೂಡಲೇ ವೈದ್ಯರ ಬಳಿ ಖಚಿತ ಪಡಿಸಿಕೊಳ್ಳಬೇಕು. ಈ ಬಗ್ಗೆ ಸಾರ್ವಜನಿಕರು ಹೆದರಬಾರದು. ಇದಕ್ಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ’ ಎಂದು ತಿಳಿಸಿದರು.
‘ಮೈಕ್ರೋ ಬ್ಯಾಕ್ಟೀರಿಯಂ ಲೇಪ್ರೆ ಎಂಬ ಸೂಕ್ಮಾಣುವಿನಿಂದ ಬರುವ ಚರ್ಮ ಮತ್ತು ನರದ ಖಾಯಿಲೆಯಾಗಿದೆ. ವ್ಯಕ್ತಿಯ ದೇಹದ ಮೇಲೆ ದಪ್ಪ ಅಥವಾ ಹೊಳೆಯುವ ಎಣ್ಣೆಯುಕ್ತ ಚರ್ಮ, ಗಂಟುಗಳು, ಕಣ್ಣಿನ ರೆಪ್ಪೆ ಮುಚ್ಚಲು ಸಾಧ್ಯವಾಗದಿರುವುದು, ಕೈ ಅಥವಾ ಕಾಲುಗಳಲ್ಲಿ ವಾಸಿಯಾಗದ ಹುಣ್ಣು, ಬೆರಳುಗಳು ಮಡಿಚಿಕೊಂಡಿರುವುದು, ನಡೆಯುವಾಗ ಕಾಲು ಎಳೆಯುವುದು, ಕೈ ಅಥವಾ ಕಾಲುಗಳಲ್ಲಿ ಜುಮ್ಮೆನಿಸುವುದು ಅಥವಾ ಮರಗಟ್ಟುವಿಕೆ ಮುಂತಾದವುಗಳು ಕುಷ್ಠರೋಗದ ಲಕ್ಷಣಗಳಾಗಿವೆ’ ಎಂದರು.
‘ರೋಗದ ತೀವ್ರತೆಯಾಧರಿಸಿ 6 ತಿಂಗಳು ಅಥವಾ 1 ವರ್ಷ ಅವಧಿಯ ಚಿಕಿತ್ಸೆ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿದೆ ಎಂಬುದನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಬೇಕು‘ ಎಂದು ಸಿಇಒ ಅವರು ಸೂಚನೆ ನೀಡಿದರು.
ತಾಲ್ಲೂಕುಗಳಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ತಾಲ್ಲೂಕು ಆಡಳಿತ, ಗ್ರಾಮ ಪಂಚಾಯಿತಿಗಳ ಸಹಯೋಗದಲ್ಲಿ ವ್ಯಾಪಕ ಪ್ರಚಾರ ಮಾಡಬೇಕು. ಶಾಲಾ ತರಗತಿಗೆ ತೊಂದರೆಯಾಗದಂತೆ ಶಿಕ್ಷಣ ಇಲಾಖೆಯಿಂದ ಮಕ್ಕಳಿಗೆ ಜಾಗೃತಿ ಮೂಡಿಸಬೇಕು. ಅಂಗನವಾಡಿ ಶಿಕ್ಷಕಿಯರಿಂದಲು ಸಹ ಜಾಗೃತಿ ಮೂಡಿಸಬೇಕು. ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಕುಷ್ಠರೋಗದ ಬಗ್ಗೆ ಪ್ರಚಾರ ನಡೆಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ, ಕುಷ್ಠರೋಗ ಪತ್ತೆ ಹಚ್ಚುವ ಅಭಿಯಾನದ ಅಂಗವಾಗಿ ಜನಜಾಗೃತಿಯ ಭಿತ್ತಿಪತ್ರ ಬಿಡುಗಡೆ ಮಾಡಲಾಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸುರೇಂದ್ರಬಾಬು, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವಿಜಯಶಂಕರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನವೀನಕುಮಾರ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ನಂದಿತಾ ಎಂ.ಎನ್., ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಗಣೇಶ್ ಕೆ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಮಹ್ಮದ್ ಶಾಕೀರ್ ಮೊಹಿಯುದ್ದೀನ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ನಿಯಂತ್ರಣಾಧಿಕಾರಿ ಡಾ.ಚಂದ್ರಶೇಖರಯ್ಯ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶಿವಕುಮಾರ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಬನದೇಶ್ ಗಬ್ಬೂರು, ಡಾ.ಫರಹಾ ನಸ್ರಿನ್ ಖಾಜಿ, ಡಾ.ಮಲ್ಲಿಕಾರ್ಜುನ ರೆಡ್ಡಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ರಂಗಸ್ವಾಮಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸಯ್ಯ ದೊಡ್ಡಮನಿ, ನವೋದಯ ವೈದ್ಯಕೀಯ ಕಾಲೇಜಿನ ಚರ್ಮರೋಗ ತಜ್ಞ ವೈದ್ಯರು ಹಾಜರಿದ್ದರು.