ADVERTISEMENT

ಆದೇಶ ರದ್ದುಗೊಳಿಸದಿದ್ದರೆ ಲಿಂಗಸುಗೂರು ಬಂದ್: ಲಿಂಗಪ್ಪ ಪರಂಗಿ

​ಪ್ರಜಾವಾಣಿ ವಾರ್ತೆ
Published 24 ಮೇ 2025, 12:46 IST
Last Updated 24 ಮೇ 2025, 12:46 IST
ಲಿಂಗಪ್ಪ ಪರಂಗಿ
ಲಿಂಗಪ್ಪ ಪರಂಗಿ   

ಲಿಂಗಸುಗೂರು: ಜಿಲ್ಲಾಸ್ಪತ್ರೆ ಮಂಜೂರಾಗಿದ್ದನ್ನು ರದ್ದುಗೊಳಿಸಿ ಸಿಂಧನೂರಿಗೆ ವರ್ಗ ಮಾಡಿದ್ದನ್ನು ರದ್ದುಗೊಳಿಸದಿದ್ದರೆ ಲಿಂಗಸುಗೂರು ತಾಲ್ಲೂಕು ಬಂದ್‌ಗೆ ಕರೆ ನೀಡಲಾಗುವುದು ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡ ಲಿಂಗಪ್ಪ ಪರಂಗಿ ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‘ದೇಶಕ್ಕೆ ಚಿನ್ನ ನೀಡುವ ತಾಲ್ಲೂಕಿಗೆ ದ್ರೋಹ ಬಗೆಯುವ ಕೆಲಸ ನಡೆಯತ್ತಿದೆ. ಉಪವಿಭಾಗ ಆಸ್ಪತ್ರೆಯನ್ನು ಜಿಲ್ಲಾಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿದ್ದನ್ನು ರದ್ದುಗೊಳಿಸಿ ಸಿಂಧನೂರಿಗೆ ವರ್ಗ ಮಾಡಿರುವುದು ಖಂಡನೀಯ’ ಎಂದು ಹೇಳಿದರು. ‌

‘ಕೃಷಿ ಇಲಾಖೆ ಉಪನಿರ್ದೇಶಕರ ಹಾಗೂ ಕೆಪಿಟಿಸಿಎಲ್ ಕಚೇರಿಯನ್ನು ಸಿಂಧನೂರಿಗೆ ಸ್ಥಳಾಂತರ ಮಾಡುವ ಹುನ್ನಾರ ನಡೆದಿತ್ತು. ಈಗ ಜಿಲ್ಲಾಸ್ಪತ್ರೆ ಸ್ಥಳಾಂತರ ಮಾಡಿರುವುದರಿಂದ ತಾಲ್ಲೂಕಿನ ಜನತೆಗೆ ನೋವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರೂ ತಾಲ್ಲೂಕಿಗೆ ಮಲತಾಯಿ ಧೋರಣೆ ತೋರು ತ್ತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಸರ್ಕಾರದ ಕ್ರಮದ ವಿರುದ್ಧ ಶಾಸಕ ಮಾನಪ್ಪ ವಜ್ಜಲ್, ವಿಧಾನ ಪರಿಷತ್ ಸದಸ್ಯ ಶರಣಗೌಡ ಬಯ್ಯಾಪುರ, ಮಾಜಿ ಶಾಸಕರು, ಮಾಜಿ ಸಚಿವರು ವಿಧಾನಸೌಧದ ಎದುರು ಪ್ರತಿಭಟನೆ ಮಾಡಿದರೆ ತಾಲ್ಲೂಕಿನ ಜನ ನಿಮ್ಮ ಜೊತೆಗೆ ಬರುತ್ತಾರೆ. ಒಂದು ವಾರದಲ್ಲಿ ವರ್ಗಾವಣೆ ಆದೇಶ ರದ್ದುಗೊಳಿಸಿ ಲಿಂಗಸುಗೂರಿನಲ್ಲಿ ಜಿಲ್ಲಾಸ್ಪತ್ರೆ ಮುಂದುವರಿಸಬೇಕು. ಇಲ್ಲದಿದ್ದರೆ ಪಟ್ಟಣ ಸೇರಿ ಹಟ್ಟಿ, ಮುದಗಲ್, ಗುರುಗುಂಟಾ ಬಂದ್‌ಗೆ ಕರೆ ನೀಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಹೋರಾಟಗಾರ ಹನುಮಂತಪ್ಪ ಕುಣಿಕೆಲ್ಲೂರು ಮಾತನಾಡಿ,‘ಜಿಲ್ಲಾಸ್ಪತ್ರೆ ಸಿಂಧನೂರಿಗೆ ವರ್ಗವಾಗಲು ಶಾಸಕ ಮಾನಪ್ಪ ವಜ್ಜಲ್ ಅವರ ನಿರ್ಲಕ್ಷ್ಯವೇ ಕಾರಣವಾಗಿದೆ. ತಾಲ್ಲೂಕಿನ ಚುನಾಯಿತ ಪ್ರತಿನಿಧಿಗಳ ನಿಯೋಗದೊಂದಿಗೆ ಶಾಸಕ ವಜ್ಜಲ್ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಜಿಲ್ಲಾಸ್ಪತ್ರೆಯನ್ನು ಮರು ಮಂಜೂರು ಮಾಡಿಸಿಕೊಂಡು ಬರಬೇಕು. ಇಲ್ಲದಿದ್ದರೆ ಶಾಸಕ, ವಿಧಾನ ಪರಿಷತ್ತಿನ ಸದಸ್ಯರು, ಮಾಜಿ ಶಾಸಕರು ಮನೆಗೆ ಮುತ್ತಿಗೆ ಹಾಕಲಾಗುವುದು’ ಎಂದು ಎಚ್ಚರಿಸಿದರು.

ಕರವೇ ತಾಲ್ಲೂಕು ಅಧ್ಯಕ್ಷ ಜಿಲಾನಿಪಾಷಾ ಮಾತನಾಡಿ,‘ಶಾಸಕ ಮಾನಪ್ಪ ವಜ್ಜಲ್ ಹಾಗೂ ಮಾಜಿ ಶಾಸಕ ಡಿ.ಎಸ್.ಹೂಲಗೇರಿ ಅವರು ಮೂಲತಃ ನಮ್ಮ ತಾಲ್ಲೂಕಿನವರಲ್ಲ. ಅವರು ಬಂದಿರುವುದು ಅಭಿವೃದ್ಧಿ ಮಾಡಲು ಅಲ್ಲ. ಅಭಿವೃದ್ಧಿಯಾಗಲು ಬಂದಿದ್ದಾರೆ. ಕ್ಷೇತ್ರಕ್ಕೆ ಏನೇ ಆದರೂ ಅವರಿಗೆ ಕಾಳಜಿ ಇಲ್ಲ’ ಎಂದರು.

ಪ್ರಭುಲಿಂಗ ಮೇಗಳಮನಿ, ದುರಗಪ್ಪ ಅಗ್ರಹಾರ, ಸಂಜೀವಪ್ಪ ಹುನಕುಂಟಿ, ಮೋಹನ ಗೋಸ್ಲೆ, ತಿಮ್ಮಾರೆಡ್ಡಿ ಮುನ್ನೂರು, ವಿಜಯ ಪೋಳ್ ಹಾಗೂ ಮಾದೇಶ ಸರ್ಜಾಪುರ ಉಪಸ್ಥಿತರಿದ್ದರು.

ಆದೇಶ ರದ್ದುಗೊಳಿಸಲು ಆಗ್ರಹ

ಇಲ್ಲಿನ ಉಪವಿಭಾಗ ಆಸ್ಪತ್ರೆಯನ್ನು ಜಿಲ್ಲಾಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಿದ್ದನ್ನು ಏಕಾಏಕಿ ರದ್ದುಗೊಳಿಸಿ ಸಿಂಧನೂರಿಗೆ ವರ್ಗಾಯಿಸಿರುವ ಸರ್ಕಾರದ ಕ್ರಮ ವಿರೋಧಿಸಿ ಕೂಡಲೇ ವರ್ಗಾವಣೆ ಆದೇಶ ರದ್ದುಪಡಿಸಬೇಕು ಎಂದು ಆಗ್ರಹಿಸಿ ಕರವೇ ಮುಖಂಡರು ಉಪವಿಭಾಗಾಧಿಕಾರಿ ಕಚೇರಿ ಸಿಬ್ಬಂದಿಗೆ ಶುಕ್ರವಾರ ಮನವಿ ಸಲ್ಲಿಸಿದರು. ಪಟ್ಟಣದ ಉಪವಿಭಾಗ ಆಸ್ಪತ್ರೆಯನ್ನು 200 ಹಾಸಿಗೆ ಸಾಮರ್ಥ್ಯದ ಜಿಲ್ಲಾಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿದ್ದರಿಂದ ತಾಲ್ಲೂಕು ಹಾಗೂ ಅಕ್ಕಪಕ್ಕದ ತಾಲ್ಲೂಕುಗಳ ಜನತೆ ಸಂತಸ ವ್ಯಕ್ತಪಡಿಸಿದ್ದರು. ಹಲವು ನಗರ ಪ್ರದೇಶಗಳಿಗೆ ತೆರಳಲು ಕೇಂದ್ರ ಸ್ಥಾನವಾಗಿರುವ ಪಟ್ಟಣದಲ್ಲಿ ಜಿಲ್ಲಾಸ್ಪತ್ರೆ ಆಗುವುದರಿಂದ ಹಳ್ಳಿಗಳ ಜನರಿಗೂ ಅನುಕೂಲವಾಗುತ್ತಿತ್ತು ಮುಖಂಡರು ತಿಳಿಸಿದರು. ಪಟ್ಟಣಕ್ಕೆ ಮಂಜೂರಾಗಿದ್ದ ಜಿಲ್ಲಾಸ್ಪತ್ರೆಯನ್ನು ಏಕಾಏಕಿ ಮೇ 22ರಂದು ನಡೆದ ಸಚಿವ ಸಂಪುಟದಲ್ಲಿ ಸಿಂಧನೂರಿಗೆ ಜಿಲ್ಲಾಸ್ಪತ್ರೆ ಸ್ಥಳಾಂತರಿಸಲು ನಿರ್ಣಯ ಮಾಡಿದ್ದು ಸರಿಯಾದ ಕ್ರಮವಲ್ಲ ಎಂದು ಹೇಳಿದರು. ಲಿಂಗಸುಗೂರು ಪಟ್ಟಣದಿಂದ ರಾಯಚೂರು 100 ಕಿ.ಮೀ ಬಳ್ಳಾರಿ 150 ಕಿ.ಮೀ ದೂರವಾಗುತ್ತದೆ. ಆದಾಗ್ಯೂ ಸರ್ಕಾರ ಸಿಂಧನೂರಿನ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಸಿಂಧನೂರಿಗೆ ಜಿಲ್ಲಾಸ್ಪತ್ರೆ ಸ್ಥಳಾಂತರ ಮಾಡಿರುವುದು ಸರಿಯಾದ ಕ್ರಮವಲ್ಲ. ಕೂಡಲೇ ವರ್ಗಾವಣೆ ಆದೇಶ ರದ್ದುಗೊಳಿಸಿ ಲಿಂಗಸುಗೂರಿನಲ್ಲಿ ಜಿಲ್ಲಾಸ್ಪತ್ರೆ ಆರಂಭಿಸಬೇಕು ಎಂದು ಕರವೇ ಅಧ್ಯಕ್ಷ ಜಿಲಾನಿಪಾಷಾ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.