ADVERTISEMENT

ಲಿಂಗಸುಗೂರು | ಹರಿ ನೀರಾವರಿ ಸೌಲಭ್ಯ ಒದಗಿಸಲು ಒತ್ತಾಯ

ಬೆಂಗಳೂರಿನಲ್ಲಿ ಕೆಬಿಜೆಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 6:17 IST
Last Updated 19 ನವೆಂಬರ್ 2025, 6:17 IST
ಲಿಂಗಸುಗೂರಿನ ನಂದವಾಡಗಿ ನೀರಾವರಿ ಹೋರಾಟ ಸಮಿತಿ ಮುಖಂಡರು ಬೆಂಗಳೂರಿನಲ್ಲಿ ಕೆಬಿಜೆಎನ್‌ಎಲ್ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಮೂರ್ತಿ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದರು
ಲಿಂಗಸುಗೂರಿನ ನಂದವಾಡಗಿ ನೀರಾವರಿ ಹೋರಾಟ ಸಮಿತಿ ಮುಖಂಡರು ಬೆಂಗಳೂರಿನಲ್ಲಿ ಕೆಬಿಜೆಎನ್‌ಎಲ್ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಮೂರ್ತಿ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದರು   

ಲಿಂಗಸುಗೂರು: ‘ಕೃಷ್ಣಾ ಮೇಲ್ದಂಡೆ ಯೋಜನಾ ವ್ಯಾಪ್ತಿಯ ನಂದವಾಡಗಿ ನೀರಾವರಿ ಯೋಜನಾ ಪ್ರದೇಶದ ಜಮೀನುಗಳಿಗೆ ಹನಿ ನೀರಾವರಿಗೆ ಬದಲಾಗಿ ಪೈಪ್‌ ಮೂಲಕ ಹರಿ ನೀರಾವರಿ ಸೌಲಭ್ಯ ಒದಗಿಸಬೇಕು’ ಎಂದು ಆಗ್ರಹಿಸಿ ನಂದವಾಡಗಿ ಏತ ನೀರಾವರಿ ಯೋಜನೆ ಹೋರಾಟ ಸಮಿತಿ ಮುಖಂಡರು ಬೆಂಗಳೂರಿನಲ್ಲಿ ಕೆಬಿಜೆಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಮಂಗಳವಾರ ಮನವಿ ಸಲ್ಲಿಸಿದರು.

‘2017ರ ಜೂನ್ 14ರಂದು ಸಿಎಂ ಸಿದ್ಧರಾಮಯ್ಯನವರು ನಂದವಾಡಗಿ ಏತ ನೀರಾವರಿ ಯೋಜನೆ ಕಾಮಗಾರಿಗೆ ಚಾಲನೆ ನೀಡಿದ್ದರು. ₹2,100 ಕೋಟಿ ಅಂದಾಜು ವೆಚ್ಚದಲ್ಲಿ ಟೆಂಡರ್ ಕರೆದು ಕೆಲಸ ಆರಂಭಿಸಲಾಗಿತ್ತು. 2020-21ರ ವೇಳೆಗೆ ರೈತರಿಗೆ ನೀರು ತಲುಪಿಸುವ ಸಂಕಲ್ಪ ಮಾಡಿದ್ದರು. ಆದರೆ, 2025 ಮಗಿಯುತ್ತ ಬಂದಿದ್ದರೂ ನೀರು ಕೊಡದಿರುವುದು ನಿಜಕ್ಕೂ ಖೇದಕರ ಸಂಗತಿಯಾಗಿದೆ’ ಎಂದು ಹೇಳಿದರು.

‘ಈಗಾಗಲೇ ಗುತ್ತಿಗೆ ಕಂಪನಿಗಳಿಗೆ ಶೇ 90ರಷ್ಟು ಬಿಲ್ ಪಾವತಿಸಲಾಗಿದೆ. ಆದರೆ, ಕಾಮಗಾರಿ ಮಾತ್ರ ಶೇ 30ರಷ್ಟು ಮುಗಿದಿಲ್ಲ ಎಂಬುದು ನೋವಿನ ಸಂಗತಿಯಾಗಿದೆ. ರಾಜ್ಯದ ಇತರ ಪ್ರದೇಶಗಳಲ್ಲಿ ಕೈಗೊಂಡ ಹನಿ ನೀರಾವರಿ ಯೋಜನೆಗಳು ಸಂಪೂರ್ಣವಾಗಿ ವಿಫಲವಾಗಿ, ರೈತರ ನೀರಾವರಿ ಕನಸು ಛಿದ್ರವಾಗಿದೆ. ಹಾಗಾಗಿ ಹನಿ ನೀರಾವರಿ ಯೋಜನೆ ಕೈಬಿಟ್ಟು ಅದನ್ನು ಬದಲಾಗಿ ಹರಿ ನೀರಾವರಿಯಾಗಿ ಪರಿವರ್ತಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಮಧ್ಯಪ್ರದೇಶದ ಮಾದರಿಯಲ್ಲಿ ರೈತರಿಗೆ ಹೆಕ್ಟೇರ್ ಒಂದಕ್ಕೆ ನೀರಿನ ತೂಬು ಕೊಟ್ಟು, ಟ್ಯಾಂಕ್ ನಿರ್ಮಿಸಿ, ಸೋಲಾರ್ ಪಂಪ್‌ಸೆಟ್‌ಗಳನ್ನು ಒದಗಿಸಿ ರೈತರಿಗೆ ನೀರಾವರಿ ಸೌಲಭ್ಯ ಒದಗಿಸಬೇಕು. ಪ್ರತಿ ರೈತರಿಗೆ ಪ್ರತ್ಯೇಕವಾಗಿ ನೀರಿನ ತೂಬು ಕೊಟ್ಟು ಅವರ ಸಂಪೂರ್ಣ ಭೂಮಿಗೆ ಅಗತ್ಯ ನೀರನ್ನು ಅದೇ ತೂಬಿನಿಂದ ಒದಗಿಸಬೇಕು. ಕೃಷಿ ಹೊಂಡದಲ್ಲಿ ಸಂಗ್ರಹಗೊಂಡ ನೀರನ್ನು ರೈತರು ಬಳಸಿಕೊಳ್ಳಲು ಸೋಲಾರ್ ಪಂಪ್‌ಸೆಟ್‌ಗಳನ್ನು ಸರ್ಕಾರದಿಂದ ಸಹಾಯಧನದ ಮೂಲಕ ವಿತರಿಸಬೇಕು’ ಎಂದು ಆಗ್ರಹಿಸಿದರು.

ಹೋರಾಟ ಸಮಿತಿ ಪದಾಧಿಕಾರಿಗಳಾದ ಬಸವಂತರಾಯ ಕುರಿ, ರಮೇಶ ಶಾಸ್ತ್ರೀ, ಶರಣಗೌಡ ಬಸಾಪುರ ಹಾಗೂ ಬಸವರಾಜ ಬಸಾಪುರ ಸೇರಿದಂತೆ ಇತರರು ಇದ್ದರು.

ಗುತ್ತಿಗೆದಾರರಿಗೆ ಶೇ 90ರಷ್ಟು ಬಿಲ್ ಪಾವತಿ ಹನಿ ನೀರಾವರಿ ಯೋಜನೆಗಳು ವಿಫಲ ರೈತರಿಗೆ ನೀರಿನ ತೂಬು ನೀಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.