ಲಿಂಗಸುಗೂರು: ತಾಲ್ಲೂಕಿನ ಕಾಚಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಡವಿಭಾವಿ ಮತ್ತು ಗುಂಡಸಾಗರ ಗ್ರಾಮಗಳಲ್ಲಿ ಪಿಡಿಒ ಅವರು ನರೇಗಾ ಕೂಲಿಕಾರರಿಗೆ ಎನ್‌ಎಂಎಂಎಸ್ ಆ್ಯಪ್‌ನ ಹಾಜರಾತಿಯಲ್ಲಿ ಮಲತಾಯಿ ಧೋರಣೆ ಮಾಡುತ್ತಿದ್ದಾರೆ ಆರೋಪಿಸಿ ಕೂಲಿಕಾರರು ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಕಾಚಾಪುರ ಕೂಲಿಕಾರರ ಹಾಜರಾತಿ ಪಡೆಯಲು ಮೇಟ್‌ಗಳಿಗೆ ಎನ್ಎಂಎಂಎಸ್ ಆ್ಯಪ್ ಲಾಗಿನ್ ನೀಡಿದ್ದಾರೆ. ಆದರೆ ಅಡವಿಭಾವಿ, ಗುಂಡಸಾಗರ ಮೇಟ್‌ಗಳಿಗೆ ಲಾಗಿನ್ ನೀಡದೇ ನಾವೇ ಖುದ್ದಾಗಿ ಬಂದು ಹಾಜರಾತಿ ತೆಗೆದುಕೊಳ್ಳುತ್ತೇವೆ ಎಂದು ಪಂಚಾಯಿತಿ ಸಿಬ್ಬಂದಿ ಹೇಳುತ್ತಿದ್ದಾರೆ ಎಂದು ಆರೋಪಿಸಿದರು.
500 ಕೂಲಿಕಾರರಿಗೆ ಹಾಜರಾತಿ ಪಡೆಯಲು ಒಬ್ಬರೇ ಸಿಬ್ಬಂದಿ ನಿಯೋಜನೆ ಮಾಡಿದ್ದರಿಂದ ಕೂಲಿಕಾರರಿಗೆ ಕೆಲಸ ಮಾಡಲು ತೊಂದರೆಯಾಗುತ್ತಿದೆ. ಮೇಟ್‌ಗಳಿಗೆ ಲಾಗಿನ್ ನೀಡಬೇಕು. ಮುಂಗಾರು ಹಂಗಾಮು ಆರಂಭವಾಗಿದ್ದರಿಂದ ಬಿತ್ತನೆ ಸಮಯದಲ್ಲಿ ನರೇಗಾ ಕೆಲಸ ನೀಡುತ್ತಾರೆ. ಆದರೆ ಕಾಚಾಪುರದಲ್ಲಿ ಬಿತ್ತನೆ ಪೂರ್ವದಲ್ಲಿ ಕೆಲಸ ನೀಡುವ ಮೂಲಕ ತಾರತಮ್ಯ ಮಾಡುತ್ತಿರುವ ಪಂಚಾಯಿತಿ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಗ್ರಾಮ ಪಂಚಾಯಿತಿ ಸದಸ್ಯೆ ಅಮರಮ್ಮ ವೀರೇಶ, ಬಸವರಾಜ ಕುಂಬಾರ, ಸುನೀತಾ, ವೀರೇಶ ಕನ್ನಾಳ, ಅಮರೇಗೌಡ ಕಾಚಾಪುರ, ಶಂಕರಪ್ಪ, ಮೌಲಾಸಾಬ್ ಕೋಡಿಹಾಳ, ಬಸವಲಿಂಗಪ್ಪ ಆನಂದ ಗಲ, ವೀರೇಶ ಬುದ್ದಿನ್ನಿ, ಗೌರಮ್ಮ ಶಿವನಗುತ್ತಿ, ಭಾಗ್ಯಶ್ರೀ ಜಾಲಹಳ್ಳಿ, ಮಹಾಂತಮ್ಮ ಬುದ್ದಿನ್ನಿ, ಗುಂಡಪ್ಪ ಯರಡೋಣ, ಸಂಜೀವಪ್ಪ ಛಲುವಾದಿ, ಹಾಜಿ ಬಾಬು ಕರಡಕಲ ಹಾಗೂ ಇನ್ನಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.