ADVERTISEMENT

ಲಿಂಗಸುಗೂರು | ‘ಸಂಬಳವೂ ಇಲ್ಲ, ಸೇವಾ ಭದ್ರತೆಯೂ ಇಲ್ಲ’: ಅತಿಥಿ ಉಪನ್ಯಾಸಕರ ಅಳಲು

ಸಂಕಷ್ಟದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಅತಿಥಿ ಉಪನ್ಯಾಸಕರು

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2025, 7:25 IST
Last Updated 13 ಮಾರ್ಚ್ 2025, 7:25 IST
ಲಿಂಗಸುಗೂರು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ನೋಟ
ಲಿಂಗಸುಗೂರು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ನೋಟ   

ಲಿಂಗಸುಗೂರು: ‘ಏಳು ತಿಂಗಳಿಂದ ಸಂಬಳವೇ ಬಂದಿಲ್ಲ. ಮನೆ ಬಾಡಿಗೆ, ಕುಟುಂಬ ನಿರ್ವಹಣೆಗೆ ಹೆಣಗಾಡುವಂತಾಗಿದೆ. ಜೊತೆಗೆ ಸೇವಾ ಭದ್ರತೆಯೂ ಕಾಡುತ್ತಿದೆ...’

ಇದು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಅತಿಥಿ ಉಪನ್ಯಾಸಕರ ಅಳಲು.

ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕಳೆದ 16 ವರ್ಷಗಳಿಂದ 31 ಅತಿಥಿ ಉಪನ್ಯಾಸಕರು ಕೆಲಸ ಮಾಡುತ್ತಿದ್ದಾರೆ. 2024 ಆಗಸ್ಟ್ ತಿಂಗಳಿಂದ ಇಲ್ಲಿನ ಅತಿಥಿ ಉಪನ್ಯಾಸಕರಿಗೆ ಗೌರವಧನ ಬಿಡುಗಡೆಯಾಗಿಲ್ಲ. ‘ಗೌರವಧನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆಯುವುದೇ ಕೆಲಸವಾಗಿದೆ’ ಎಂಬುದು ಅವರ ದೂರು.

ADVERTISEMENT

ಮೊದಲಿನಿಂದಲೂ ಪ್ರತಿ ತಿಂಗಳು ಸರಿಯಾಗಿ ಗೌರವಧನ ಬಿಡುಗಡೆಯಾಗುವುದೇ ಇಲ್ಲ. ಮೂರು ತಿಂಗಳೊಮ್ಮೆ ಗೌರವಧನ ಬಿಡುಗಡೆ ಆಗುತ್ತಿತ್ತು. ಈಗ ಏಳು ತಿಂಗಳು ಕಳೆದರೂ ಗೌರವಧನ ಬಿಡುಗಡೆಯಾಗಿಲ್ಲ. ಗೌರವಧನ ನೆಚ್ಚಿಕೊಂಡ ಅತಿಥಿ ಉಪನ್ಯಾಸಕರು ಮನೆ ಬಾಡಿಗೆ ಸೇರಿ ಕುಟುಂಬ ನಿರ್ವಹಣೆ  ಮಾಡುವುದು ಹೇಗೆ’ ಎಂದು ಅವರ ಪ್ರಶ್ನೆ.

ಹೆಚ್ಚುವರಿ ಹೊಣೆ?: ‘ಅತಿಥಿ ಉಪನ್ಯಾಸಕರ ನೇಮಕಾತಿ ವೇಳೆ ಸರ್ಕಾರ ವಾರದಲ್ಲಿ 17 ತಾಸು ಕೆಲಸ ಮಾಡುವಂತೆ ಆದೇಶದಲ್ಲಿ ಹೇಳಿದೆ. ಆದರೆ, ಇಲ್ಲಿ ವಾರಕ್ಕೆ 48 ತಾಸು ದುಡಿಸಿಕೊಳ್ಳುತ್ತಿದ್ದಾರೆ. ಗೌರವಧನ ಸಿಗುವುದು 17 ತಾಸು ಕೆಲಸಕ್ಕೆ ಮಾತ್ರ. ಇನ್ನುಳಿದಿದ್ದು ಬರೀ ಸೇವೆ. ಇತ್ತೀಚೆಗೆ ಕಾಲೇಜಿನಲ್ಲಿ ಬಯೋಮೆಟ್ರಿಕ್ ಅಳವಡಿಸಲಾಗಿದೆ. ಅರೆಕಾಲಿಕ ಉಪನ್ಯಾಸಕರೂ ಕಾಯಂ ಉಪನ್ಯಾಸಕರಂತೆ ಕೆಲಸ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ’ ಎನ್ನುತ್ತಾರೆ ಅತಿಥಿ ಉಪನ್ಯಾಸಕರು.

ಕಾಡುತ್ತಿದೆ ಸೇವಾ ಅಭದ್ರತೆ: ಇಲ್ಲಿನ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಇಲ್ಲಿ ಸೇವೆ ಮಾಡುತ್ತಿರುವ ಅತಿಥಿ ಉಪನ್ಯಾಸಕರಲ್ಲಿ ಕೆಲವು ನಿವೃತ್ತಿ ಅಂಚಿನಲ್ಲಿದ್ದಾರೆ. ಇನ್ನೂ ಕೆಲವರಿಗೆ ನೌಕರಿಯ ವಯೋಮಿತಿ ಮೀರುತ್ತಿದೆ. ಈ ಸಾಲಿನ ಬಜೆಟ್‌ನಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕರ ಹುದ್ದೆಗಳಿಗೆ ಭರ್ತಿ ಮಾಡುವುದಾಗಿ ಸರ್ಕಾರ ಘೋಷಿಸಿದೆ. ಇದರಿಂದ 16-18 ವರ್ಷಗಳಿಂದ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರನ್ನು ಸೇವಾ ಅಭದ್ರತೆ ಕಾಡುತ್ತಿದೆ. ಬೇರೆಯವರನ್ನು ನೇಮಿಸಿದರೆ ಇಷ್ಟು ವರ್ಷ ಕೆಲಸ ಮಾಡಿದ ತಮ್ಮ ಗತಿಯೇನು? ಎಂಬುದು ಅವರ ಚಿಂತೆ.

‘ಅತಿಥಿಗಳನ್ನೇ ಕಾಯಂಗೊಳಿಸಿ’

‘ಕಳೆದ ಏಳು ತಿಂಗಳಿಂದ ಗೌರವಧನ ಬಿಡುಗಡೆ ಮಾಡಿಲ್ಲ. ಈ ಸಾಲಿನ ಬಜೆಟ್‌ನಲ್ಲಿ ಪಾಲಿಟೆಕ್ನಿಕ್‌ ಕಾಲೇಜುಗಳ ಖಾಲಿ ಉಪನ್ಯಾಸಕ ಹುದ್ದೆಗಳಿಗೆ ನೇಮಕಾತಿ ಮಾಡುವುದಾಗಿ ಘೋಷಣೆ ಮಾಡಲಾಗಿದೆ. ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರನ್ನೇ ಕಾಯಂಗೊಳಿಸಿ ನಮಗೆ ಸೇವಾ ಭದ್ರತೆ ನೀಡಬೇಕು’ ಎಂದು ಅತಿಥಿ ಉಪನ್ಯಾಸಕ ಶಿವಪ್ರಸಾದ ಖೇಣದ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.