ADVERTISEMENT

ಲಿಂಗಸುಗೂರು | ನಿರ್ವಹಣೆ ಕೊರತೆಯಿಂದ ಉದ್ಯಾನ ಹಾಳು

ಲಿಂಗಸುಗೂರು: ₹6.43 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿದ ಉದ್ಯಾನ

​ಪ್ರಜಾವಾಣಿ ವಾರ್ತೆ
Published 19 ಜುಲೈ 2025, 7:41 IST
Last Updated 19 ಜುಲೈ 2025, 7:41 IST
ಲಿಂಗಸುಗೂರು ಪಟ್ಟಣದ ಉದ್ಯಾನದಲ್ಲಿ ಪುರಸಭೆ ನಿರ್ವಹಣೆ ಕೊರತೆಯಿಂದಾಗಿ ಮುರಿದು ಬಿದ್ದಿರುವ ಆಸನಗಳು
ಲಿಂಗಸುಗೂರು ಪಟ್ಟಣದ ಉದ್ಯಾನದಲ್ಲಿ ಪುರಸಭೆ ನಿರ್ವಹಣೆ ಕೊರತೆಯಿಂದಾಗಿ ಮುರಿದು ಬಿದ್ದಿರುವ ಆಸನಗಳು   

ಲಿಂಗಸುಗೂರು:  ಪಟ್ಟಣದ ಸೌಂದರ್ಯ ಹೆಚ್ಚಿಸುವ, ನಾಗರಿಕರ ಸಮಯ ಕಳೆಯಲು, ವಾಯುವಿಹಾರಕ್ಕೆ ಪಟ್ಟಣದ ಕರಡಕಲ್ ಕೆರೆ ತಟದಲ್ಲಿ ₹6.43 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿದ ಉದ್ಯಾನ ಸೂಕ್ತ ನಿರ್ವಹಣೆ ಇಲ್ಲದೆ ಸೊರಗಿದೆ.

ಇತಿಹಾಸ ಪ್ರಸಿದ್ಧ ಈ ಕೆರೆಯನ್ನು ಕರಡಿಕಲ್ ಸಂಸ್ಥಾನ 800ನ್ನು ಆಳಿದ 3ನೇ ಬಿಲ್ಲಮ ರಾಜ (ಕ್ರಿ.ಶ.1025-1050) ನಿರ್ಮಿಸಿದ್ದಾರೆ ಎನ್ನಲಾಗಿದೆ. 225 ಎಕರೆ ವಿಶಾಲವಾದ ಕೆರೆಯ ತಟದಲ್ಲಿ ನಿಜಾಮ-ಬ್ರಿಟಿಷರ ಆಡಳಿತ ಅವಧಿಯಲ್ಲಿ ಅಧಿಕಾರಿಗಳಿಗಾಗಿ ಸ್ಪೋರ್ಟ್ಸ್ ಕ್ಲಬ್ ನಿರ್ಮಾಣ ಮಾಡಿ ಸಂಜೆವೇಳೆ ಕೆರೆ ಸೊಬಗು ಸವಿಯುವ ಸುಂದರ ತಾಣವನ್ನಾಗಿ ಮಾಡಿದ್ದರು. ಮಳೆಯ ಕೊರತೆಯಿಂದ ಕೆರೆ ಬತ್ತಿತ್ತು, ರಾಂಪುರ ಏತನೀರಾವರಿ ಕಾಲುವೆಯಿಂದ ಹರಿಯುವ ಹೆಚ್ಚುವರಿ ನೀರನ್ನು ಕಾಲುವೆ ಮೂಲಕ ಈ ಕೆರೆಗೆ ಬಿಡಲಾಗುತ್ತಿದ್ದರಿಂದ ಕೆರೆ ವರ್ಷದ 12 ತಿಂಗಳು ನೀರಿನಿಂದ ತುಂಬಿ ಸುಂದರವಾಗಿ ಕಾಣುತ್ತಿದೆ.

ಕೆಕೆಆರ್‌ಡಿಬಿಯ ₹6.43 ಕೋಟಿ ಅನುದಾನದಲ್ಲಿ ಕರಡಕಲ್ ಕೆರೆ ತಟದಲ್ಲಿ ಅಭಿವೃದ್ಧಿ ಪಡಿಸಿದ ಉದ್ಯಾನದಲ್ಲಿ ವಾಯು ವಿಹಾರಕ್ಕೆ 900 ಮೀಟರ್ ಉದ್ದ ವಾಕಿಂಗ್ ಟ್ರಾಕ್, ಕುಳಿತುಕೊಳ್ಳಲು ಆಸನ, ಸೋಲಾರ್ ವಿದ್ಯುತ್ ದೀಪಗಳು, ಡಿವೈಎಸ್‌ಪಿ ಕಚೇರಿಯ ಭಾಗದಲ್ಲಿ ಎರಡು ಎಕರೆ ಪ್ರದೇಶದಲ್ಲಿ ಉದ್ಯಾನ ನಿರ್ಮಿಸಲಾಗಿದೆ. ಬೋಟಿಂಗ್ ರ‍್ಯಾಂಪ್ ಮಾಡಲಾಗಿದೆ.

ADVERTISEMENT

ಆಗಿನ ಶಾಸಕರು ಹಾಗೂ ಗುತ್ತಿಗೆದಾರರು ಆಸಕ್ತಿ ವಹಿಸಿ ಆಂದ್ರಪ್ರದೇಶದ ರಾಜಮಂಡ್ರಿಯಿಂದ ವಿವಿಧ ಹೂವಿನ, ಅಲಂಕಾರಿಕ, ಗ್ರಾಸ್ ತರಿಸಿ ಉದ್ಯಾನದಲ್ಲಿ ನೆಡಸಿ ನಂತರ 2023, ಫೆ.6ರಂದು ಅಂದಿನ ಶಾಸಕ ಡಿ.ಎಸ್.ಹೂಲಗೇರಿ ಉದ್ಘಾಟಿಸಿದ್ದರು. ಉದ್ಘಾಟನೆ ನಂತರ ಗುತ್ತಿಗೆದಾರ ಅಮರಗುಂಡಪ್ಪ ಮೇಟಿ ಅಂಡ್ ಕಂಪನಿ 6 ತಿಂಗಳು ನಿರ್ವಹಣೆ ಮಾಡಿದ್ದರು. ನಂತರ ಪುರಸಭೆಗೆ ಹಸ್ತಾಂತರ ಮಾಡಲಾಗಿದೆ.

ಮತ್ತೊಂದು ಉದ್ಯಾನ ಹಾಳು : ಒಳಾಂಗಣ ಕ್ರೀಡಾಂಗಣ ಪಕ್ಕದಲ್ಲಿ ₹40 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿದ ಉದ್ಯಾನ ಸಂಪೂರ್ಣ ಹಾಳಾಗಿದೆ. ಆಸನಗಳು, ಮಕ್ಕಳ ಆಟಿಕೆ ಸಾಮಾಗ್ರಿಗಳು, ಕೆರೆ ವಿಕ್ಷಣಾ ಗೋಪುರಗಳು ಹಾಳಾಗಿವೆ. ಪಟ್ಟಣದಲ್ಲಿ ಇತ್ತೀಚಿಗೆ ಅಭಿವೃದ್ಧಿ ಪಡಿಸಿದ ಉದ್ಯಾನ ಪಟ್ಟಣದಲ್ಲಿ ಏಕೈಕ ಉದ್ಯಾನವಾಗಿತ್ತು, ಆದರೆ ಅದು ಕೂಡಾ ಅವನತ್ತಿಯತ್ತ ಸಾಗುತ್ತಿದೆ.

ಉದ್ಯಾನದಲ್ಲಿ ತಂತಿಬೇಲಿ ಕಿತ್ತಿರುವುದು

ಎರಡೇ ವರ್ಷದಲ್ಲಿ ಅವನತಿಯತ್ತ  ಪುರಸಭೆಗೆ ಹಸ್ತಾಂತರ ಮಾಡಿದ ನಂತರ ಉದ್ಯಾನ ನಿರ್ವಹಣೆಗೆ ಗ್ರಹಣ ಹಿಡಿಯಿತು. ನಿರ್ವಹಣೆ ಕೊರತೆಯಿಂದ ಹುಲ್ಲುಹಾಸು ಗಿಡಗಳು ಒಣಗುತ್ತಿವೆ. ಆಸನಗಳು ಮುರಿದುಬಿದ್ದಿವೆ. ಕೆಲ ಸೋಲಾರ್ ದೀಪಗಳು ಹಾಳಾಗಿವೆ. ಕೆಲವೆಡೆ ತಂತಿಬೇಲಿಗಳು ಕಿತ್ತಿಹೋಗಿವೆ. ಕೆರೆಯಲ್ಲಿ ಜಾಲಿ ಮುಳ್ಳಿನ ಗಿಡಗಳು ಹೇರಳವಾಗಿ ಬೆಳೆದು ಸಂಜೆ ಕೆರೆಯಲ್ಲಿ ಸೂರ್ಯಾಸ್ತ ದೃಶ್ಯ ವಿಕ್ಷಣೆಗೆ ಅಡ್ಡಿಯಾಗಿವೆ. ಉದ್ಯಾನದ ಮುಖ್ಯ ಗೇಟ್ ಮುಂಭಾಗ ಕೆರೆ ಬಸಿ ನೀರು ನಿಂತು ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದರಿಂದ ವಾಯುವಿಹಾರಕ್ಕೆ ಬಂದವರು ಸೊಳ್ಳೆ ಕಾಟ ಸಹಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಉದ್ಯಾನ ಕನಿಷ್ಠ ನಿರ್ವಹಣೆ ಮಾಡುವಲ್ಲಿ ಪುರಸಭೆ ಆಡಳಿತ ಮಂಡಳಿ ವಿಫಲವಾಗಿದ್ದರಿಂದ ಉದ್ಘಾಟನೆಯಾಗಿ ಎರಡೇ ವರ್ಷದಲ್ಲಿ ಹಾಳಾಗುವ ಹಂತಕ್ಕೆ ತಲುಪಿದೆ.

ಉದ್ಯಾನದಲ್ಲಿ ಕೆಲ ಸೋಲಾರ್ ದೀಪಗಳು ಹಾಳಾಗಿದ್ದು ಹೊಸ ದೀಪ ಹಾಕಲು ಸೂಚಿಸಲಾಗಿದೆ. ನಿರ್ವಹಣೆಗೆ ಇಬ್ಬರು ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಬಾಬುರೆಡ್ಡಿ ಮುನ್ನೂರು ಲಿಂಗಸುಗೂರು ಪುರಸಭೆ ಅಧ್ಯಕ್ಷ  ನಿರ್ವಹಣೆ ಮಾಡುವ ಮೂಲಕ ಮತ್ತಷ್ಟು ಅಭಿವೃದ್ಧಿ ಮಾಡಬೇಕಾದ ಪುರಸಭೆ ನಿಷ್ಕಾಳಜಿಯಿಂದಾಗಿ ಉದ್ಯಾನ ಹಾಳಾಗುತ್ತಿದೆ. ಕೋಟ್ಯಾಂತರ ವೆಚ್ಚದಲ್ಲಿ ಅಭಿವೃದ್ಧಿ ಮಾಡಿದ ಉದ್ಯಾನ ಹಾಳಾಗದಂತೆ ನಿರ್ವಹಣೆ ಮಾಡಲು ಪುರಸಭೆ ಮುಂದಾಗಬೇಕು  ಇಲ್ಲವೇ ಖಾಸಗಿ ಸಂಸ್ಥೆಗೆ ವಹಿಸಬೇಕು ಸಿದ್ದು ಬಡಿಗೇರ ಬಿಜೆಪಿ ಮುಖಂಡ ಲಿಂಗಸುಗೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.