
ಸಿಂಧನೂರು: ಪ್ರಸಕ್ತ 2026–2027ನೇ ಸಾಲಿನ ಬಜೆಟ್‍ನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಿಂಧನೂರನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಬಹುದು ಎಂದು ಸಿಂಧನೂರು ತಾಲ್ಲೂಕಿನ ಜನರು ಬಹುನಿರೀಕ್ಷೆ ಹೊಂದಿದ್ದಾರೆ.
ಶಾಸಕ ಹಂಪನಗೌಡ ಬಾದರ್ಲಿ ಮತ್ತು ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಸಿಂಧನೂರು ನಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಸೃಜಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದಾರೆ. ವೈದ್ಯರು, ವಕೀಲರು, ವರ್ತಕರು, ಕನ್ನಡಪರ, ದಲಿತಪರ, ರೈತಪರ, ಮಹಿಳಾಪರ ಸೇರಿದಂತೆ ವಿವಿಧ ಸಂಘಟನೆಗಳು, ರಾಜಕೀಯ ಪಕ್ಷಗಳ ಮುಖಂಡರು ಸಹ ಪಕ್ಷಾತೀತವಾಗಿ ಸಿಂಧನೂರನ್ನು ಜಿಲ್ಲಾ ಕೇಂದ್ರವಾಗಿ ಮೇಲ್ದರ್ಜೆಗೇರಿಸುವಂತೆ ಪ್ರತ್ಯೇಕ ಮನವಿಗಳನ್ನು ಸಲ್ಲಿಸಿ ಸರ್ಕಾರದ ಮೇಲೆ ಒತ್ತಡ ಹಾಕಿದ್ದಾರೆ.
‘ಸಿಂಧನೂರು-ಗಂಗಾವತಿ ಮುಖ್ಯ ರಸ್ತೆಯನ್ನು ಚತುಷ್ಪಥ ಮಾಡುವ ನಿಟ್ಟಿನಲ್ಲಿ ಹ್ಯಾಮ್ ಯೋಜನೆಯಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕು. ಕೆಎಸ್‍ಆರ್‌ಪಿ ಬಟಾಲಿಯನ್ ಸೌಕರ್ಯವನ್ನು ಸಿಂಧನೂರು ತಾಲ್ಲೂಕಿಗೆ ಮಂಜೂರು ಮಾಡಬೇಕು. ಅಂಬಾಮಠಕ್ಕೆ ವಸತಿಸಹಿತ ಪದವಿ ಕಾಲೇಜು, ಕಾರ್ಯ ಸ್ಥಗಿತಗೊಂಡಿರುವ ಎಂಜನಿಯರಿಂಗ್ ಕಾಲೇಜು ಆಗಲಿ ಅಥವಾ ಹೊಸದಾಗಿ ಮಂಜೂರು ಮಾಡಿಯಾಗಲಿ ಈ ಬಾರಿ ಸಿಂಧನೂರಿಗೆ ಎಂಜಿನಿಯರಿಂಗ್ ಕಾಲೇಜ್ ಸೌಲಭ್ಯ ಲಭಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು.
‘ಸ್ವಾತಂತ್ರ್ಯ ಬಂದು 78 ವರ್ಷಗಳು ಕಳೆದರೂ ಸಿಂಧನೂರು ತಾಲ್ಲೂಕಿಗೆ ಸರ್ಕಾರದಿಂದ ಉದ್ಯೋಗ ಒದಗಿಸಬಹುದಾದ ಐಟಿಐ, ಡಿಪ್ಲೊಮಾ ಕಾಲೇಜು ಇಲ್ಲ. ಇದರಿಂದ ಯುವ ಸಮುದಾಯಕ್ಕೆ ಬಹುದೊಡ್ಡ ಅನ್ಯಾಯವಾಗಿದೆ. ಆದಕಾರಣ ಐಟಿಐ, ಡಿಪ್ಲೊಮಾ, ಎಂಜಿನಿಯರಿಂಗ್ ಕಾಲೇಜು ಮಂಜೂರು ಮಾಡುವಂತೆ ಪ್ರಸ್ತಾವ ಸಲ್ಲಿಸಲಾಗಿದೆ. ಸಿಎಸ್‍ಎಫ್ ಕ್ಯಾಂಪಿನ 7500 ಎಕರೆ ಜಮೀನಿನಲ್ಲಿ 500 ಎಕರೆ ಕೆರೆ ನಿರ್ಮಾಣಕ್ಕೆ 2 ವರ್ಷಗಳಿಂದ ಸರ್ಕಾರದ ಗಮನ ಸೆಳೆದಿದ್ದು, ಕೆರೆ ತುಂಬಿಸುವ ಈ ಯೋಜನೆಗೆ ಈಗಾಗಲೇ ಡಿಪಿಆರ್ ಸಿದ್ದವಾಗಿದೆ. ಪೂರ್ಣ ಪ್ರಮಾಣದ ಕಾರ್ಯಾನುಷ್ಠಾನಗೊಂಡರೆ ಸಿಎಸ್‍ಎಫ್ ಕ್ಯಾಂಪ್‌ನ ಸಹಸ್ರಾರು ಎಕರೆ ಜಮೀನಿಗೆ ಮತ್ತು ನಿವಾಸಿಗಳಿಗೆ ಕುಡಿಯುವ ನೀರು ಲಭ್ಯವಾಗಲಿದೆ.
‘ಮೆಡಿಕಲ್, ನಸಿರ್ಂಗ್ ಹಾಗೂ ಕಾನೂನು ಕಾಲೇಜು ಸೇರಿದಂತೆ ಉದ್ಯೋಗಾಧಾರಿತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಪೂರಕವಾದ ಅನುದಾನ ಬಿಡುಗಡೆ ಮಾಡುಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.
ಚುನಾವಣೆ ಬಹಿಷ್ಕಾರದ ಎಚ್ಚರಿಕೆ
‘ಹತ್ತಾರು ವರ್ಷಗಳಿಂದ ಸಿಂಧನೂರು ತಾಲ್ಲೂಕಿನ ಗಡಿ ಗ್ರಾಮಗಳಾದ ಸಿಂಗಾಪುರ ಮುಕ್ಕುಂದ ಹುಡಾ ಭೈರೇಶ್ವರ ಕ್ಯಾಂಪ್ ಅಂಬಾಮಠ ಮತ್ತಿತರ ಗ್ರಾಮಸ್ಥರು ಸಿಂಗಾಪುರ ಮತ್ತು ಸಿರಗುಪ್ಪ ತಾಲ್ಲೂಕಿನ ನಿಟ್ಟೂರು ನಡುವೆ ತುಂಗಭದ್ರಾ ನದಿಗೆ ಅಡ್ಡವಾಗಿ ಸೇತುವೆ ನೀರ್ಮಿಸಿ ಬಳ್ಳಾರಿ ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ಸಂಪರ್ಕಕ್ಕೆ ಅನುಕೂಲ ಕಲ್ಪಿಸುವಂತೆ ಎಲ್ಲ ಹಂತದ ಜನಪ್ರತಿನಿಧಿಗಳಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸಿಆರ್‌ಎಫ್ ಅನುದಾನದಲ್ಲಿ ಸೇತುವೆ ನಿರ್ಮಾಣಕ್ಕೆ ಅನುಮತಿ ನೀಡಿದೆ. 2017-2018ರಲ್ಲಿ ಕೊಪ್ಪಳ ಲೋಕಸಭಾ ಸದಸ್ಯ ಕರಡಿ ಸಂಗಣ್ಣ ಶಾಸಕರಾಗಿದ್ದ ವೆಂಕಟರಾವ್ ನಾಡಗೌಡ ಆಗ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದ ಆದಿಮನಿ ವೀರಲಕ್ಷ್ಮಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಇದಕ್ಕೆ ನದಿಯ ಎರಡೂ ಕಡೆಗಳಲ್ಲಿ ರಸ್ತೆ ನಿರ್ಮಾಣಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ಜವಾಬ್ದಾರಿಯನ್ನು ರಾಜ್ಯಸರ್ಕಾರಕ್ಕೆ ವಹಿಸಲಾಗಿದೆ. ಆದರೆ ಇಲ್ಲಿಯ ವರೆಗೆ ರಾಜ್ಯ ಸರ್ಕಾರ ಭೂ ಸ್ವಾಧೀನ ಪ್ರಕ್ರಿಯೆ ಆರಂಭವಾಗಿಲ್ಲ. ಜನಪ್ರತಿನಿಧಿಗಳು ಈ ಕುರಿತು ಕಿಂಚಿತ್ತು ಗಮನ ಹರಿಸಿರುವುದಿಲ್ಲ. ಮುಂಬರುವ ಗ್ರಾಮ ಪಂಚಾಯಿತಿ ತಾಲ್ಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ ಯಾವುದೇ ಚುನಾವಣೆಗಳು ಬರಲಿ ಅವುಗಳನ್ನು ಬಹಿಷ್ಕರಿಸಲಾಗುವುದು ಎಂದು ನದಿ ಪಾತ್ರದ ಸಿಂಗಾಪುರ ಗ್ರಾಮದ ಶಾಂತಪ್ಪ ಹುಡಾ ಗ್ರಾಮದ ಗ್ರಾಮ ಪಂಚಾಯಿ ಮಾಜಿ ಅಧ್ಯಕ್ಷ ಸಿದ್ದಪ್ಪಗೌಡ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನಗೌಡ ರಾಘವೇಂದ್ರ ರೆಡ್ಡಿ ಮುಕ್ಕುಂದಾ ಮಲ್ಲೇಶಪ್ಪ ಸಾಹುಕಾರ ಎಚ್ಚರಿಕೆ ನೀಡಿದ್ದಾರೆ.
13 ಸಾವಿರ ಎಕರೆಗೆ ನೀರುಣಿಸುವ ಚೆನ್ನಳ್ಳಿ ಏತನೀರಾವರಿ
ಅಲಬನೂರು ಮಾಡಶಿರವಾರ ಬೆಳಗುರ್ಕಿ ಗೋಮರ್ಸಿ ಗ್ರಾಮಗಳ 12 ಸಾವಿರ ಎಕರೆಗೆ ನೀರುಣಿಸಬಹುದಾದ ಸಿದ್ದಲಿಂಗೇಶ್ವರ ಏತನೀರಾವರಿ ಯೋಜನೆಯ ಪ್ರಸ್ತಾವನೆಗೆ ಅನುಮತಿ ನೀಡಬೇಕು ಎಂದು ಮನವಿ ಮಾಡಲಾಗಿದೆ. ಬಹುಪಾಲು ಬೇಡಿಕೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಸ್ತು ನೀಡುವ ಸಂಪೂರ್ಣ ಭರವಸೆ ಇದೆ ಹಂಪನಗೌಡ ಬಾದರ್ಲಿ ಶಾಸಕ ರಾಗಲಪರ್ವಿ ಮತ್ತು ಬಾದರ್ಲಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೊಳಪಡುವ ಜಮೀನುಗಳಿಗೆ ನೀರಾವರಿ ಸೌಕರ್ಯವೂ ಲಭಿಸುತ್ತದೆ. ಆದ್ದರಿಂದ ಆದ್ಯತೆಯ ಮೇರೆಗೆ ಈ ಯೋಜನೆಯನ್ನು ಆಯ-ವ್ಯಯದಲ್ಲಿ ಸೇರ್ಪಡೆ ಮಾಡುವಂತೆ ಮನವಿ ಮಾಡಲಾಗಿದೆ ಬಸನಗೌಡ ಬಾದರ್ಲಿ ವಿಧಾನ ಪರಿಷತ್ ಸದಸ್ಯ ಬಿಇಡಿ ಪ್ಯಾರಾ ಮೆಡಿಕಲ್ ನರ್ಸಿಂಗ್ ಕೋರ್ಸ್‍ನಂತಹ ವೃತ್ತಿಪರ ಶಿಕ್ಷಣ ಸಂಸ್ಥೆಗಳು ಸಿಂಧನೂರಿನಲ್ಲಿ ಸ್ಥಾಪನೆಯಾಗಬೇಕಿದೆ. ಪ್ರಸ್ತುತ ವಿದ್ಯಾರ್ಥಿ-ಯುವಜನರನ್ನು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಕಟ್ಟುತ್ತಿರುವ ಲಕ್ಷಗಟ್ಟಲೇ ಡೊನೇಶನ್ ಹಾವಳಿಯಿಂದ ಮುಕ್ತಗೊಳಿಸಬೇಕಾದ ಜವಾಬ್ದಾರಿಯನ್ನು ಜನಪ್ರತಿನಿಧಿಗಳು ಮರಿಯಬಾರದುಡಾ.ಕೆ.ಶಿವರಾಜ ಮಕ್ಕಳ ತಜ್ಞರು ಸಿಂಧನೂರು ನಗರದ 40ನೇ ಉಪಕಾಲುವೆ ಸೇರಿದಂತೆ ತಾಲ್ಲೂಕಿನ ಹಲವು ವಿತರಣಾ ಕಾಲುವೆಗಳ ಪಕ್ಕದಲ್ಲಿ ಬಡವರು ನಿರಾಶ್ರಿತ ಕುಟುಂಬಗಳು ಗುಡಿಸಲು ಹಾಕಿಕೊಂಡು ಹಲವು ವರ್ಷಗಳಿಂದ ವಾಸಿಸುತ್ತಿದ್ದಾರೆ. ರಾಜ್ಯ ಸರ್ಕಾರ ವಿಶೇಷ ಯೋಜನೆ ರೂಪಿಸಿ ಇವರಿಗೆ ವಸತಿ ಸೌಲಭ್ಯ ಕಲ್ಪಿಸಿದರೆ ಕಾಲುವೆ ಪಕ್ಕದಲ್ಲಿ ಇರುವ ರಸ್ತೆಯನ್ನು ಸುಗಮಗೊಳಿಸಿದಂತಾಗಲಿದೆಟಿ.ಹುಸೇನಸಾಬ ಅಧ್ಯಕ್ಷ ಜಮಾಅತೆ ಇಸ್ಲಾಮಿ ಹಿಂದ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.