ADVERTISEMENT

ಪುಂಡಪೋಕರಿಗಳು ಶಾಸಕರಾಗುತ್ತಿದ್ದಾರೆ: ಕೋಡಿಹಳ್ಳಿ

​ಪ್ರಜಾವಾಣಿ ವಾರ್ತೆ
Published 24 ಜನವರಿ 2019, 12:53 IST
Last Updated 24 ಜನವರಿ 2019, 12:53 IST

ರಾಯಚೂರು:ರಾಜಕೀಯದಲ್ಲಿ ಆದರ್ಶಗಳು, ಮೌಲ್ಯಗಳು ಇಲ್ಲ. ಹೀಗಾಗಿ ಪುಂಡ ಪೋಕರಿಗಳು ಶಾಸಕರಾಗುತ್ತಿದ್ದಾರೆ ಎಂದುಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಶಾಸಕರಿಗಾಗಿ ವಿಧಾನಸೌಧ ನಿರ್ಮಾಣ ಮಾಡಲಾಗಿದೆ. 30 ಇಲಾಖೆಗಳಿಗೂ ಪ್ರತ್ಯೇಕ ಸಭಾಂಗಣಗಳಿದ್ದು, ಚರ್ಚೆ ನಡೆಸಲೇ ಈ ಸಭಾಂಗಣಗಳಿವೆ. ಆದರೆ, ರೇಸಾರ್ಟ್‌ಗಳಿಗೆ ಶಾಸಕರನ್ನು ಕರೆದುಕೊಂಡು ಹೋಗಿರುವುದು, ಕುಡಿತ ಹಾಗೂ ಕಚ್ಚಾಟ ನಡೆಸಿರುವುದು ನಾಚಿಕೆಗೇಡಿನ ವಿಷಯವಾಗಿದೆ. ಇದನ್ನು ನಿಲ್ಲಿಸದಿದ್ದರೆ ಜನರೇ ಬೀದಿಗಿಳಿದು ತಕ್ಕಶಾಸ್ತಿ ಮಾಡಲಿದ್ದಾರೆ ಎಂದರು.

ಜಾತಿ, ಧರ್ಮದ ಹೆಸರಿನಲ್ಲಿ ಅನುಕೂಲ ಸಿಂಧು ರಾಜಕಾರಣ ಮಾಡಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಬಜೆಟ್ ಮಂಡಿಸಲು ಸಿದ್ಧತೆ ನಡೆಸಿದ್ದು, ರೈತರ ನಿರೀಕ್ಷೆ ಹುಸಿಯಾಗದಂತೆ ಕಾರ್ಯಕ್ರಮಗಳನ್ನು ಘೋಷಣೆ ಮಾಡಬೇಕು. ಮುಖ್ಯಮಂತ್ರಿ ಕುಮಾರಸ್ವಾಮಿ ಜನವರಿ 25ರಂದು ರೈತರ ಸಭೆ ಕರೆದಿದ್ದು, ರೈತರಿಗೆ ಅಗತ್ಯವಿರುವ ಯೋಜನೆಗಳ ಬಗ್ಗೆ ಚರ್ಚಿಸಲಾಗುತ್ತದೆ ಎಂದು ತಿಳಿಸಿದರು.

ADVERTISEMENT

ರಾಜಕಾರಣಿಗಳ ವರ್ತನೆಯನ್ನು ನೋಡಿ ಜನರು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಕಳೆದುಕೊಳ್ಳುವಂತಾಗಿದೆ. ಬಿಜೆಪಿಯವರು ದೆಹಲಿಯವರೆಗೂ ಶಾಸಕರನ್ನು ಕರೆದುಕೊಂಡು ಹೋಗಿ ಸೆವೆನ್‌ಸ್ಟಾರ್‌ ಹೋಟೆಲ್‌ನಲ್ಲಿ ಇಳಿಸಿದ್ದರು. ಕಾಂಗ್ರೆಸ್‌ನವರು ಈಗಲ್ಟನ್‌ ರೆಸಾರ್ಟ್‌ನಲ್ಲಿಟ್ಟು ರಾಜಕಾರಣ ಮಾಡಿದರು. ಈ ರೀತಿಯ ರಾಜಕೀಯದಿಂದ ಜನರು ರೋಸಿಹೋಗಿದ್ದಾರೆ ಎಂದು ಹೇಳಿದರು.

ಶಿವಪ್ಪ, ವಾಸುದೇವ ಮೇಟಿ, ರವಿಕುಮಾರ, ಮಲ್ಲಿಕಾರ್ಜುನ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.