ADVERTISEMENT

ಮಸ್ಕಿ | ಲಾರಿ- ಬೈಕ್ ಡಿಕ್ಕಿ: ಇಬ್ಬರ ಸಾವು

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2024, 14:17 IST
Last Updated 18 ಏಪ್ರಿಲ್ 2024, 14:17 IST
ಶವ ಪರೀಕ್ಷಾ  ಕೋಠಡಿಗೆ ತೆರಳುವ ರಸ್ತೆಗೆ ತಂತಿ ಬೇಲಿ ಹಾಕಿದ್ದರಿಂದ ವಾಹನದಲ್ಲಿ ತಂದ ಶವಗಳನ್ನು ಕೆಲ ಹೊತ್ತು ವಾಹನದಲ್ಲಿಯೇ ಇಟ್ಟುಕೊಂಡು ಪೊಲೀಸರು ಪರದಾಡಿದ ಘಟನೆ ಗುರುವಾರ ನಡೆಯಿತು,
ಶವ ಪರೀಕ್ಷಾ  ಕೋಠಡಿಗೆ ತೆರಳುವ ರಸ್ತೆಗೆ ತಂತಿ ಬೇಲಿ ಹಾಕಿದ್ದರಿಂದ ವಾಹನದಲ್ಲಿ ತಂದ ಶವಗಳನ್ನು ಕೆಲ ಹೊತ್ತು ವಾಹನದಲ್ಲಿಯೇ ಇಟ್ಟುಕೊಂಡು ಪೊಲೀಸರು ಪರದಾಡಿದ ಘಟನೆ ಗುರುವಾರ ನಡೆಯಿತು,   

ಮಸ್ಕಿ: ಲಾರಿ ಹಾಗೂ ಬೈಕ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಗುರುವಾರ ಪಟ್ಟಣದ ಅಶೋಕ ಶಿಲಾಶಾಸನ ರಸ್ತೆಯ ತಿರುವಿನಲ್ಲಿ ನಡೆದಿದೆ.

ಮೃತಪಟ್ಟವರನ್ನು ಸಿಂಧನೂರು ಪಟ್ಟಣದ ಶಾಮೀದ್ (22), ಸಲ್ಮಾನ್ (10) ಎಂದು ಗುರುತಿಸಲಾಗಿದೆ. ಸಿಂಧನೂರಿನಿಂದ ಮುದಗಲ್ ಪಟ್ಟದಲ್ಲಿನ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಬೈಕ್ ಮೇಲೆ ತೆರಳುತ್ತಿದ್ದ ವೇಳೆ ಎದುರಿಗೆ ಬಂದ ಎನ್‌ಎಂಸಿಸಿ ಕಂಪನಿಗೆ ಸೇರಿದ ಲಾರಿಗೆ ಡಿಕ್ಕಿಯಾಗಿ ಈ ದುರ್ಘಟನೆ ನಡೆದಿದೆ.

ಘಟನಾ ಸ್ಥಳಕ್ಕೆ ಆಗಮಿಸಿದ ಸರ್ಕಲ್ ಇನ್‌ಸ್ಪೆಕ್ಟರ್ ಮಲ್ಲಿಕಾರ್ಜುನ ಇಕ್ಕಳಗಿ, ಸಬ್ ಇನ್‌ಸ್ಪೆಕ್ಟರ್ ವೈಶಾಲಿ ಅವರು ಮೃತ ದೇಹಗಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು.

ADVERTISEMENT

ಶವ ಪರೀಕ್ಷೆಗೆ ಪೊಲೀಸರ ಪರದಾಟ: ಮೃತದ ದೇಹಗಳ ಶವ ಪರೀಕ್ಷೆ ನಡೆಸಲು ಸ್ಥಳೀಯ ಪೊಲೀಸರು ಪರದಾಡಿದ ಘಟನೆ ನಡೆಯಿತು. ಪಟ್ಟಣದ ಸರ್ಕಾರಿ ಆಸ್ಪತ್ರೆ ಜಾಗದ ವಿವಾದ ನ್ಯಾಯಾಲದಲ್ಲಿದ್ದ ಕಾರಣ ಶವ ಸಂಸ್ಕಾರ ಕೊಠಡಿ ಸೇರಿ ಆಸ್ಪತ್ರೆಯ ಖಾಲಿ ಜಾಗಕ್ಕೆ ಜಾಗದ ಮಾಲೀಕರು ಇತ್ತೀಚಿಗೆ ತಂತಿ ಬೇಲಿ ಹಾಕಿ ಬಂದ್‌ ಮಾಡಿದ್ದಾರೆ.

ಮೃತಪಟ್ಟವರ ಶವಗಳನ್ನು ಖಾಸಗಿ ವಾಹನದಲ್ಲಿ ಹಾಕಿಕೊಂಡು ಬಂದ ಪೊಲೀಸರು ಏನು ಮಾಡಬೇಕು ಎಂಬುದು ತಿಳಿಯದೇ ಕೆಲ ಕಾಲ ಆಸ್ಪತ್ರೆಯ ಮುಂದೆಯೇ ಶವಇಟ್ಟು ಪರದಾಡಿದರು.

ಕೊನೆಗೆ ಆಸ್ಪತ್ರೆಯ ಪಕ್ಕದಲ್ಲಿ ಹಳೆಯ ಸರ್ಕಾರಿ ಆಸ್ಪತ್ರೆಯಲ್ಲಿನ ಕೊಠಡಿಯೊಂದರಲ್ಲಿ ಶವಗಳನ್ನು ಇಳಿಸಿ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದರು.

ಶವ ಪರೀಕ್ಷೆ ಕೋಠಡಿ ಜಾಗಕ್ಕೆ ತಂತಿ ಬೇಲಿ ಹಾಕಿದ್ದರಿಂದ ಹಿಂದೆ ಮೂರು ನಾಲ್ಕು ಪ್ರಕರಣಗಳಲ್ಲಿ ಶವಗಳನ್ನು 28 ಕಿ.ಮೀ ದೂರದ ಲಿಂಗಸುಗೂರು ಹಾಗೂ ಮುದಗಲ್ ಪಟ್ಟಣದ ಶವಗಾರಕ್ಕೆ ತೆಗೆದುಕೊಂಡು ಹೋಗಿ ಪರೀಕ್ಷೆ ನಡೆಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.