ಮಂತ್ರಾಲಯ (ರಾಯಚೂರು): ಮಂತ್ರಾಲಯದಲ್ಲಿ ಗುರು ಸಾರ್ವಭೌಮ ರಾಘವೇಂದ್ರ ಸ್ವಾಮಿಗಳ 354ನೇ ಆರಾಧಾನಾ ಮಹೋತ್ಸವದ ಪ್ರಯುಕ್ತ ಮಂಗಳವಾರ ಉತ್ತರಾರಾಧನೆ ಅದ್ಧೂರಿಯಾಗಿ ಜರುಗಿತು.
ರಾಘವೇಂದ್ರ ಸ್ವಾಮಿಗಳ ಉತ್ಸವ ಮೂರ್ತಿಯನ್ನುಮಠದ ಆವರಣದಿಂದ ಗುರುಸಾರ್ವಭೌಮ ವಿದ್ಯಾಪೀಠದ ಆವರಣಕ್ಕೆ ಕಲಾ ತಂಡಗಳ ಮೆರವಣಿಗೆ ಮೂಲಕ ತರಲಾಯಿತು. ಸಂಸ್ಕೃತ ವಿದ್ಯಾಪೀಠದ ವಿದ್ಯಾರ್ಥಿಗಳು ರಾಘವೇಂದ್ರ ಅಷ್ಟೋತ್ತರ ಪಠಿಸಿದ ನಂತರ ಮೂಲ ಬೃಂದಾವನಕ್ಕೆ ಪೂಜೆ ಸಲ್ಲಿಸಲಾಯಿತು. ತರುವಾಯ ವಸಂತೋತ್ಸವ ಹಾಗೂ ಮಹಾರಥೋತ್ಸವ ನಡೆಯಿತು.
ಡೊಳ್ಳು ಕುಣಿತ, ಬ್ಯಾಂಡ್ ವಾದನ, ಭಜನಾ ಮಂಡಳಿಗಳು ಸೇರಿದಂತೆ ಇತರೆ ಕಲಾ ವಾದ್ಯಗಳು, ಕಲಾ ತಂಡಗಳ ನೃತ್ಯ ಮಹಾರಥೋತ್ಸವಕ್ಕೆ ಮೆರುಗು ತುಂಬಿದ್ದವು.
ಇದಕ್ಕೂ ಮೊದಲು ರಾಯರ ಮಠದಲ್ಲಿ ಬೆಳಗಿನ ಜಾವ ಗ್ರಂಥಗಳ ಪಾರಾಯಣ, ಪ್ರವಚನ, ದಾಸವಾಣಿ, ರಾಯರ ಮೂಲ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ ನಡೆಯಿತು. ಸಂಸ್ಕೃತ ವಿದ್ಯಾಪೀಠದಲ್ಲಿ ಪ್ರಹ್ಲಾದ ರಾಜರ ಉತ್ಸವ ಮೂರ್ತಿ ಮೆರವಣಿಗೆ ನಡೆಯಿತು.
ಮಹಾರಥೋತ್ಸವಕ್ಕೂ ಮೊದಲು ಶ್ರೀಗಳು ಮಠದ ಎಲ್ಲ ಬೃಂದಾವನಗಳಿಗೆ ಗುಲಾಲು ಎರಚುವ ಮೂಲಕ ವಸಂತೋತ್ಸವ ಆಚರಿಸಿದರು. ರಥೋತ್ಸವದ ಸಂದರ್ಭದಲ್ಲಿ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಮಾಡಲಾಯಿತು. ಭಕ್ತರು ದೃಶ್ಯವನ್ನು ಕಣ್ತುಂಬಿಕೊಂಡರು.
ವಿಶ್ವದ ಅಂತ್ಯತ ಶ್ರೇಷ್ಠ ಹಿಂದೂ ಧರ್ಮ:
‘ಹಿಂದೂ ಧರ್ಮಕ್ಕೆ ಸಮಾನವಾದ ಧರ್ಮ ಮತ್ತೊಂದಿಲ್ಲ. ಹಿಂದೂ ಧರ್ಮದ ರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕು’ ಎಂದು ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಹೇಳಿದರು.
ಮಂತ್ರಾಲಯದ ರಥ ಬೀದಿಯಲ್ಲಿ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದ ಪ್ರಯುಕ್ತ ನಡೆದ ಮಹಾರಥೋತ್ಸವದ ಸಂದರ್ಭದಲ್ಲಿ ಅವರು ಅನುಗ್ರಹ ಸಂದೇಶ ನೀಡಿದರು.
‘ಭಾರತವು ಆರ್ಥಿಕ, ಸಾಮಾಜಿಕ ಹಾಗೂ ಧಾರ್ಮಿಕವಾಗಿ ಅಭಿವೃದ್ಧಿ ಹೊಂದುತ್ತಿರುವುದನ್ನು ಸಹಿಸಲಾಗದ ನೆರಯ ರಾಷ್ಟ್ರವು ತೀರ ಕೀಳು ಮಟ್ಟದಲ್ಲಿ ತೊಂದರೆ ಕೊಡುತ್ತಿದೆ. ನಮ್ಮ ದೇಶ ಹಾಗೂ ಹೆತ್ತ ತಾಯಿ ಅತ್ಯಂತ ಪ್ರಮುಖವಾದವು. ದೇಶದ ರಕ್ಷಣೆಯ ಜವಾಬ್ದಾರಿ ಕೇವಲ ಸೈನಿಕರದ್ದಲ್ಲ. ದೇಶದ ಭದ್ರತೆ ವಿಷಯ ಬಂದಾಗ ಪ್ರತಿಯೊಬ್ಬ ನಾಗರಿಕರೂ ಹೋರಾಟಕ್ಕೆ ಮುಂದಾಗಬೇಕು’ ಎಂದರು.
‘ಪರ ದೇಶದವರೂ ಹಿಂದೂ ಧರ್ಮದ ಮೇಲೆ ದಾಳಿ ಮಾಡುತ್ತಿರುವುದು ಖಂಡನೀಯ. ಪ್ರವಾಸಿಗರಿಗೆ ತೊಂದರೆ ಕೊಡುತ್ತಿರುವುದನ್ನು ಪ್ರತಿಯೊಬ್ಬರೂ ಒಕ್ಕೊರಲಿನಿಂದ ಖಂಡಿಸಬೇಕು. ವಿರೋಧಿಸಬೇಕು’ ಎಂದು ಹೇಳಿದರು.
‘ಭಕ್ತರ ಆರಾಧ್ಯ ದೈವ ಗುರುರಾಯರ 354ನೇ ಆರಾಧನಾ ಮಹೋತ್ಸವ ಸಂಪನ್ನವಾಗಿದೆ. ಭಕ್ತರ ಉದ್ಧಾರಕ್ಕಾಗಿ ರಾಘವೇಂದ್ರ ಸ್ವಾಮಿಗಳು ರಥಾರೂಢರಾಗಿದ್ದಾರೆ’ ಎಂದು ತಿಳಿಸಿದರು.
ಆರಾಧನೆಗೆ ಸಂಭ್ರಮದ ತೆರೆ
ಲಿಂಗಸುಗೂರು: ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವಕ್ಕೆ ನೂರಾರು ಭಕ್ತರ ಶ್ರದ್ಧಾ–ಭಕ್ತಿಯ ಆಚರಣೆಯೊಂದಿಗೆ ಮಂಗಳವಾರ ಸಂಭ್ರಮದ ತೆರೆ ಬಿದ್ದಿತು.
ಪಟ್ಟಣದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಉತ್ತರಾರಾಧನೆ ಪ್ರಯುಕ್ತ ಮಂಗಳವಾರ ಬೆಳಿಗ್ಗೆ ಸುಪ್ರಭಾತ, ನಂತರ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ಬೃಂದಾವನಕ್ಕೆ ಹೂವುಗಳಿಂದ ಅಲಂಕಾರ ಮಾಡಲಾಯಿತು.
ಮಠದ ಆವರಣದಲ್ಲಿ ಭಕ್ತರು ಪರಸ್ಪರ ಓಕುಳಿಯಲ್ಲಿ ಮಿಂದೆದ್ದರು. ಮಧ್ಯಾಹ್ನ ಗುರುರಾಜ ಭಜನಾ ಮಂಡಳಿಯ ಸದಸ್ಯರು ಭಜನೆ, ಮಹಿಳೆಯರ ಕೋಲಾಟದೊಂದಿಗೆ ರಥೋತ್ಸವ ನಡೆಯಿತು. ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಇರಿಸಿ ಮೆರವಣಿಗೆ ಮಾಡಲಾಯಿತು.
ಮಠದ ವ್ಯವಸ್ಥಾಪಕ ಜಯರಾಮ ಆಚಾರ್ಯ, ಅರ್ಚಕರಾದ ಹನುಮೇಶ ದಾಸ್, ಶೇಷಗಿರಿ ದಾಸ್, ಗುರುರಾಜ ಭಜನಾ ಮಂಡಳಿಯ ಅಧ್ಯಕ್ಷ ಗುರುರಾಜ ಮುತಾಲಿಕ, ಬ್ರಾಹ್ಮಣ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ದಿಗ್ಗಾವಿ, ಮುರಳೀಧರರಾವ್ ಕುಲಕರ್ಣಿ, ರವಿಕುಮಾರ ಕುಲಕರ್ಣಿ, ವಿಜಯ ದೇಶಪಾಂಡೆ, ರವಿ ಮುತಾಲಿಕ, ಅಡವಿರಾವ ದೇಸಾಯಿ, ವಿಜಯಕುಮಾರ ಸಂತೆಕೆಲ್ಲೂರ, ವರದೇಂದ್ರ ದಿಗ್ಗಾವಿ, ಶ್ರೀಕಾಂತ ಗೋತಗಿ, ಕುಪ್ಪಣ್ಣ ಆನೆಹೊಸೂರು, ಕುಪ್ಪೆರಾವ, ಕೃಷ್ಣಚಾರ, ಪವನ ಆಚಾರ್ಯ, ಪ್ರಮೋದ ಕನಕಗಿರಿ, ವೆಂಕಟೇಶ ಜೋಶಿ, ರಮೇಶ ಮುತಾಲಿಕ, ಗುರುರಾಜ ಒಡ್ಡೆಪಲ್ಲಿ, ಪ್ರಭಾವತಿ ಕುಲಕರ್ಣಿ, ವೇದಾ ದೇಶಪಾಂಡೆ, ಪದ್ಮಾ ದೇಶಪಾಂಡೆ, ಕಲ್ಪನಾ ಆಪ್ಟೆ, ಶಶಿಕಲಾ ಮುತಾಲಿಕ್, ಜ್ಯೋತಿ ದಿಗ್ಗಾವಿ, ಐಶ್ವರ್ಯ ಅರಳಿಕಟ್ಟಿ, ತುಳಸಾ ಜೋಶಿ, ಪೂರ್ಣಿಮಾ ಮುತಾಲಿಕ್, ನೇತ್ರ, ಪೂರ್ಣಿಮಾ ಕಟ್ಟಿ, ಪ್ರಿಯಾಂಕ ಇದ್ದರು.
ವಿವಿಧ ಧಾರ್ಮಿಕ ಕಾರ್ಯಕ್ರಮ
ಕವಿತಾಳ: ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವದ ಅಂಗವಾಗಿ ಪಟ್ಟಣದ ವಾಸವಿ ದೇವಸ್ಥಾನದಲ್ಲಿ ಸೋಮವಾರ ರಥೋತ್ಸವ ಸಂಭ್ರಮದಿಂದ ಜರುಗಿತು.
ಪೂರ್ವಾರಾಧನೆ, ಮಧ್ಯಾರಾಧನೆ, ಉತ್ತರಾರಾಧನೆ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರ ಮಗಳು ನಡೆದವು. ರಾಯರ ವಿಗ್ರಹಕ್ಕೆ ನೈರ್ಮಲ್ಯ ವಿಸರ್ಜನೆ, ಫಲ ಪಂಚಾಮೃತ ಅಭಿಷೇಕ, ಅಷ್ಠೋತ್ತರ, ತುಳಸಿ ಅರ್ಚನೆ, ನೈವೇದ್ಯ, ಅಸ್ತೋದಕ ಸಮರ್ಪಣೆ ಮತ್ತು ಮಹಾಮಂಗಳಾರತಿ ಸೇರಿ ವಿವಿಧ ಪೂಜೆಗಳನ್ನು ನೆರವೇರಿಸಲಾಯಿತು.
ಅರ್ಚಕ ಜಯತೀರ್ಥ ಆಚಾರ್ ಅವರು ಪೂಜಾ ಕಾರ್ಯಕ್ರಮ ನಡೆಸಿಕೊಟ್ಟರು.
ಮಂಗಳವಾರ ಮಧ್ಯಾಹ್ನ ನಡೆದ ರಥೋತ್ಸವದಲ್ಲಿ ಆರ್ಯ ವೈಶ್ಯ ಸಮಾಜ ಹಾಗೂ ಬ್ರಾಹ್ಮಣ ಸಮಾಜದ ಮುಖಂಡರು, ಮಹಿಳೆಯರು, ಮಕ್ಕಳು ಪಾಲ್ಗೊಂಡಿದ್ದರು. ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಸಮಾರೋಪ ಇಂದು
ಆಗಸ್ಟ್ 13ರಂದು ಬೆಳಿಗ್ಗೆ 8ಕ್ಕೆ ಶ್ರೀರಂಗಂನ ವಿದ್ವಾನ್ ರಾಮಾಚಾರ್ ಅವರಿಂದ ಪ್ರವಚನ ಬೆಳಿಗ್ಗೆ 10 ಗಂಟೆಗೆ ಅಶ್ವ ವಾಹನೋತ್ಸವ ಹಾಗೂ ಸುಗುಣೇಂದ್ರ ತೀರ್ಥರ ಆರಾಧನೆ ಸಂಜೆ 6 ಗಂಟೆಗೆ ಬೆಂಗಳೂರಿನ ವಿದುಷಿ ಎಂ.ಎಸ್.ಸುಬ್ಬಲಕ್ಷ್ಮಿ ಅವರು ಸ್ಯಾಕ್ಸೊಫೋನ್ ನುಡಿಸಲಿದ್ದಾರೆ. ವಿದುಷಿ ಸಂಗೀತಾ ಕುಲಕರ್ಣಿ ದಾಸವಾಣಿ ಪ್ರಸ್ತುತ ಪಡಿಸಲಿದ್ದಾರೆ. ಸುಧಾ ನೃತ್ಯ ಶಾಲೆಯ ಕಲಾವಿದರು ಹರಿದರ್ಶನ ನೃತ್ಯ ರೂಪಕ ಪ್ರದರ್ಶಿಸಲಿದ್ದಾರೆ. ಆ.14ರಂದು ಬೆಳಿಗ್ಗೆ 10 ಗಂಟೆಗೆ ಹುಬ್ಬಳ್ಳಿಯ ವಿದ್ವಾನ್ ನರಹರಿ ಆಚಾರ್ ವಾಳ್ವೆಕರ್ ಅವರಿಂದ ಪ್ರವಚನ ಹಾಗೂ ರಾತ್ರಿ 8ಕ್ಕೆ ಸಮಾರೋಪ ಕಾರ್ಯಕ್ರಮ ನಡೆಯಲಿದೆ. ನಂತರ ಪುಣೆಯ ಆನಂದ ಭೀಮಸೇನ ಜೋಶಿ ಹಿಂದೂಸ್ತಾನಿ ಸಂಗೀತ ಪ್ರಸ್ತುತ ಪಡಿಸಲಿದ್ದಾರೆ. ಚೆನ್ನೈನ ಚಿತ್ರಮಯ ನೃತ್ಯ ಶಾಲೆಯ ಕಲಾವಿದರು ಭರತ ನಾಟ್ಯ ಪ್ರದರ್ಶನ ನೀಡಲಿದ್ದಾರೆ.
ವಿಜೃಂಭಣೆಯಿಂದ ಜರುಗಿದ ರಥೋತ್ಸವ
ಮಾನ್ವಿ: ಪಟ್ಟಣದ ನಂಜನಗೂಡು ರಾಘವೇಂದ್ರ ಸ್ವಾಮಿ ಮಠದಲ್ಲಿ ಉತ್ತಾರಾರಾಧನೆ ಅಂಗವಾಗಿ ಮಹಾರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ನಡೆಯಿತು. ಬೆಳಿಗ್ಗೆ ರಾಘವೇಂದ್ರ ಸ್ವಾಮಿಗಳ ಮೃತ್ತಿಕ ಬೃಂದಾವನಕ್ಕೆ ಸುಪ್ರಭಾತ ಸೇವೆ ಅಷ್ಟೋತ್ತರ ಪಾರಾಯಣ ಫಲ ಪಂಚಾಮೃತಾಭಿಷೇಕ ಕನಕಾಭಿಷೇಕ ಅರ್ಚನೆ ಅಲಂಕಾರ ಹಸ್ತೋದಕ ಮಹಾ ಮಂಗಳಾರತಿ ಸೇರಿದಂತೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ನಂತರ ಮಹಾರಥೋತ್ಸವಕ್ಕೆ ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯರು ಚಾಲನೆ ನೀಡಿದರು. ವಿವಿಧ ಭಜನಾ ಮಂಡಳಿಯವರು ಭಜನೆ ಹಾಡುಗಳನ್ನು ಹಾಡಿದರು. ಭಕ್ತರು ಪರಸ್ಪರ ಗುಲಾಲು ಎರಚುವ ಮೂಲಕ ವಸಂತೋತ್ಸವ ಆಚರಿಸಿದರು. ತಾಲ್ಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಮುದ್ದುರಂಗರಾವ್ ಪುರಸಭೆಯ ಮಾಜಿ ಅಧ್ಯಕ್ಷೆ ಲಕ್ಷ್ಮೀದೇವಿ ನಾಯಕ ಸೇರಿದಂತೆ ನೂರಾರು ಭಕ್ತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.