ADVERTISEMENT

ಮಾದಿಗ ಸಮಾಜ ಕಾಂಗ್ರೆಸ್‌ ಪಕ್ಷಕ್ಕೆ ಸೀಮಿತವಲ್ಲ: ಆರ್.ತಿಮ್ಮಯ್ಯ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2019, 13:05 IST
Last Updated 21 ಏಪ್ರಿಲ್ 2019, 13:05 IST

ರಾಯಚೂರು: ಲೋಕಸಭೆ ಚುನಾವಣೆಯಲ್ಲಿ ಮಾದಿಗ ಸಮಾಜದವರು ಸೇರಿದಂತೆ ವಿವಿಧ ಸಮಾಜದವರು ಇಂತಹ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಪ್ರಕಟಿಸುತ್ತಿದ್ದಾರೆ. ಒಂದು ಪಕ್ಷಕ್ಕೆ ಸಮಾಜವನ್ನು ಸೀಮಿತ ಮಾಡಬಾರದು, ಒಬ್ಬ ವ್ಯಕ್ತಿಯ ತೀರ್ಮಾನವನ್ನು ಸಮಾಜದವರೆಲ್ಲ ಅವಲಂಬಿಸಿರುವುದಿಲ್ಲ ಎಂದು ಬಿಜೆಪಿ ಮುಖಂಡ ಆರ್.ತಿಮ್ಮಯ್ಯ ಹೇಳಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇರೆ ಪಕ್ಷಗಳಲ್ಲಿ ಕೂಡ ಸಮಾಜದ ಜನರು ಇರುವುದರಿಂದ ಸಮಾಜದ ಹೆಸರಿನಲ್ಲಿ ಗೊಂದಲ ಮೂಡಿಸಬಾರದು. ಮತ ನೀಡುವಾಗ ವಾಸ್ತವ ತಿಳಿದುಕೊಳ್ಳಬೇಕು ಎಂದರು.

ಹತ್ತಾರು ವರ್ಷಗಳು ಕಾಂಗ್ರೆಸ್‌ ಅಧಿಕಾರ ಅನುಭವಿಸಿದರೂ ನೀರು ಕೊಡಲು ಆಗುತ್ತಿಲ್ಲ. ನೀರಾವರಿ ಯೋಜನೆಗಳು ಪೂರ್ಣಗೊಂಡಿಲ್ಲ. ಆದರ್ಶ ಗ್ರಾಮ ಜಾಗೀರ ವೆಂಕಟಾಪುರದ ಜನರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಸುಳ್ಳು ಭರವಸೆಗಳನ್ನು ನೀಡಿ ಮತ ಪಡೆಯುತ್ತಾರೆ ಎಂದು ತಿಳಿಸಿದರು.

ADVERTISEMENT

ಮುಖಂಡ ತ್ರಿವಿಕ್ರಮ ಜೋಷಿ ಮಾತನಾಡಿ, ಕಾಂಗ್ರೆಸ್ ಸಮಾವೇಶದಲ್ಲಿ ಕೇಂದ್ರ ಸರ್ಕಾರ ಏನೂ ಅಭಿವೃದ್ಧಿ ಮಾಡಿಲ್ಲ ಎಂದು ಆರೋಪಿಸಲಾಯಿತು. ಆದರೆ, ಹಿಂದೆಂದೂ ಬಿಡುಗಡೆಯಾಗದಷ್ಟು ಅನುದಾನವನ್ನು ರಾಜ್ಯಕ್ಕೆ ಬಿಡುಗಡೆ ಮಾಡಿದೆ ಎಂದು ಹೇಳಿದರು.

ನಿರ್ಭಯಾ ಯೋಜನೆ, ಪ್ರಧಾನಮಂತ್ರಿ ಆವಾಜ್‌, ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆ, ಬೆಂಗಳೂರಿನ ಮೆಟ್ರೋ, 14ನೇ ಹಣಕಾಸು, ನೀರಾವರಿ ಯೋಜನೆ ಸೇರಿದಂತೆ ವಿವಿಧ ಯೋಜನೆಯಲ್ಲಿ ಹೆಚ್ಚಿನ ಅನುದಾನ ಕೇಂದ್ರ ಸರ್ಕಾರ ನೀಡಿದೆ. ಕಿಸಾನ್ ಸಮ್ಮಾನ್ ಯೋಜನೆಗೆ ರಾಜ್ಯ ಸರ್ಕಾರ 17 ರೈತರ ಮಾಹಿತಿ ಮಾತ್ರ ನೀಡಿದೆ. ಕೇಂದ್ರದ ಅನುದಾನ ಬಳಕೆ ಮಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ದೂರಿದರು.

ಕ್ಷೇತ್ರ ಅಭಿವೃದ್ಧಿ ಯೋಜನೆಗಳನ್ನು ಒಳಗೊಂಡ ಸ್ಥಳೀಯ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಯಿತು.

ಶಿವಬಸಪ್ಪ ಮಾಲಿಪಾಟೀಲ, ನಾರಾಯಣರಾವ್, ಆರ್.ಕೆ.ಅಮರೇಶ, ಎ.ಚಂದ್ರಶೇಖರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.