ಕವಿತಾಳ: ‘ತಂದೆ–ತಾಯಿ ಸ್ಮರಣಾರ್ಥ ಸಾಮಾಜಿಕ ಕಾರ್ಯ ಮಾಡುತ್ತಿರುವ ನಿವೃತ್ತ ಪೊಲೀಸ್ ಅಧಿಕಾರಿ ಎಂ.ಗಿರಿಜಾಪತಿ ಅವರ ಕಾರ್ಯ ಶ್ಲಾಘನೀಯ’ ಎಂದು ನಿವೃತ್ತ ಐಜಿಪಿ ಡಿ.ಸಿ.ರಾಜಪ್ಪ ಹೇಳಿದರು.
ಕಲಾವಿದ ಮಹಾಂತಯ್ಯ ಸ್ವಾಮಿ ಮುಂಡರಗಿಮಠ ಅವರ 22ನೇ ಪುಣ್ಯಸ್ಮರಣೆ ಅಂಗವಾಗಿ ಪಟ್ಟಣದ ಮಹಾಂತ ಕಲಾಭವನದಲ್ಲಿ ಶನಿವಾರ ನಡೆದ ಸಾಧಕರಿಗೆ ‘ಮಹಾಂತ ಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
‘ಹೃದಯವಂತಿಕೆ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡ ದಕ್ಷ, ಪ್ರಾಮಾಣಿಕ ಪೊಲೀಸ್ ಅಧಿಕಾರಿ ಎಂ.ಗಿರಿಜಾಪತಿ ಅವರ ಸಮಾಜಮುಖಿ ಕೆಲಸಗಳು ಗಮನ ಸೆಳೆಯುತ್ತಿವೆ’ ಎಂದರು.
ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ,‘ಕೌಟುಂಬಿಕ ಜೀವನದಲ್ಲಿ ಮಹತ್ವದ ಬದಲಾವಣೆ ಕಾಣುತ್ತಿರುವ ಪ್ರಸ್ತುತ ಕಾಲದಲ್ಲಿ ಸಾಮಾಜಿಕ ಜವಾಬ್ದಾರಿ ತೋರುತ್ತಿರುವ ಮುಂಡರಗಿಮಠ ಕುಟುಂಬದ ಸೇವೆ ಮುಂದಿನ ಪೀಳಿಗೆಗೆ ಮಾದರಿಯಾಗಿದೆ’ ಎಂದರು.
ಪ್ರತಿಷ್ಠಾನದ ಕಾರ್ಯಕಾರಿ ಸಮಿತಿ ಅಧ್ಯಕ್ಷ ಎಂ.ಗಿರಿಜಾಪತಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ನಿವೃತ್ತ ಐಜಿಪಿ ಡಿ.ಸಿ.ರಾಜಪ್ಪ (ಸಾಹಿತ್ಯ), ಸಿದ್ದಲಿಂಗಯ್ಯ ವಿರಕ್ತಮಠ (ರಂಗಭೂಮಿ), ಅಯ್ಯಮ್ಮ ಯಡವಲ್ (ಸಂಗೀತ) ಅವರಿಗೆ ಮಹಾಂತಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಂಜುನಾಥ ಗೋವಿಂದವಾಡ ಹಾಗೂ ಸೂಲಗಿತ್ತಿ ಮಲ್ಲಮ್ಮ ಅವರನ್ನು ಸನ್ಮಾನಿಸಲಾಯಿತು.
ಕಲ್ಮಠದ ಅಭಿನವ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುಖಂಡರಾದ ಅಮರೇಗೌಡ ವಕೀಲ, ಹನುಮನಗೌಡ ಬೆರಳಗುರ್ಕಿ, ಕೆ.ಎಂ.ವಿಶ್ವನಾಥ, ಜಗದೀಶ ಸಾಲಿಮಠ, ಎ.ಟಿ.ಪಾಟೀಲ, ಶಾಶ್ವತಯ್ಯಸ್ವಾಮಿ ಮುಕ್ಕುಂದಿಮಠ, ಶಿವಪ್ರಸಾದ, ಶಿವಶಂಕರ ವಕೀಲ ಇದ್ದರು.
ಆರೋಗ್ಯ ಉಚಿತ ತಪಾಸಣೆ ಶಿಬಿರ ಮತ್ತು ಸಂಗೀತ ಕಾರ್ಯಕ್ರಮ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.