ADVERTISEMENT

ರಾಯಚೂರು: ಶಿವಲಿಂಗ ಧಾನ್ಯದಲ್ಲಿ ಮುಳುಗಿದ ಭಕ್ತರು

ಜಿಲ್ಲೆಯಾದ್ಯಂತ ಮಹಾಶಿವರಾತ್ರಿ ಸಂಭ್ರಮದ ಆಚರಣೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2021, 16:36 IST
Last Updated 11 ಮಾರ್ಚ್ 2021, 16:36 IST
ರಾಯಚೂರಿನ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ನಿಮಿತ್ತ ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್ಯಗಳು ನಡೆದವು
ರಾಯಚೂರಿನ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ನಿಮಿತ್ತ ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್ಯಗಳು ನಡೆದವು   

ರಾಯಚೂರು: ಜಿಲ್ಲೆಯಾದ್ಯಂತ ಮಹಾಶಿವರಾತ್ರಿ ಅಮವಾಸ್ಯೆಯನ್ನು ಜನರು ಭಕ್ತಿಭಾವದಿಂದ ಆಚರಿಸುತ್ತಿದ್ದಾರೆ.

ವಿವಿಧ ಹೆಸರುಗಳಿಂದ ಪೂಜಿಸುವ ಶಿವನ ಎಲ್ಲ ದೇವಸ್ಥಾನಗಳಲ್ಲಿಯೂ ಗುರುವಾರ ಬೆಳಗಿನ ಜಾವದಿಂದಲೇ ಪೂಜಾ, ವಿಧಿವಿಧಾನ ಕೈಂಕರ್ಯಗಳನ್ನು ಆರಂಭಿಸಲಾಗಿತ್ತು. ಶಿವನನ್ನು ಒಲಿಸುವುದಕ್ಕಾಗಿ ಕೆಲವು ಪ್ರಮುಖ ದೇವಸ್ಥಾನಗಳಲ್ಲಿ ರುದ್ರಾಭಿಷೇಕಗಳನ್ನು ನೆರವೇರಿಸಲಾಯಿತು. ದೇವಸ್ಥಾನಗಳ ಗರ್ಭಗುಂಡಿಗಳಲ್ಲಿ ವಿಶೇಷ ಪುಷ್ಪಾಲಂಕಾರ ಮಾಡಿ, ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಯಿತು.

ರಾಯಚೂರು ನಗರದ ಮಧ್ಯೆದಲ್ಲಿರುವ ಚಂದ್ರಮೌಳೇಶ್ವರ ದೇವಸ್ಥಾನ, ಐ.ಬಿ. ರಸ್ತೆಯ ರಾಮಲಿಂಗೇಶ್ವರ ದೇವಸ್ಥಾನ, ನೇತಾಜಿನಗರದ ನಗರೀಶ್ವರ ದೇವಸ್ಥಾನ, ಮಾವಿನಕೆರೆ ಪಕ್ಕದ ನಂದೀಶ್ವರ ದೇವಸ್ಥಾನ, ಎನ್‌ಜಿಓ ಕಾಲೋನಿಯ ನೀಲಕಂಠೇಶ್ವರ ದೇವಸ್ಥಾನ, ಬೊಳಮಾನದೊಡ್ಡಿಯ ಏಗನೂರು ದೇವಸ್ಥಾನ, ನಿಜಲಿಂಗಪ್ಪ ಕಾಲೋನಿಯ ಈಶ್ವರ ದೇವಸ್ಥಾನ ಹಾಗೂ ಮಾಣಿಕಪ್ರಭು ದೇವಸ್ಥಾನಗಳಲ್ಲಿ ಬೆಳಗಾಗುತ್ತಿದ್ದಂತೆ ಭಕ್ತರು ದಂಡು ನೆರೆದಿತ್ತು.

ADVERTISEMENT

ಭಕ್ತರು ಸರದಿಯಲ್ಲಿ ಬಂದು ದರ್ಶನ ಪಡೆಯುವುದಕ್ಕಾಗಿ ಪ್ರತಿಯೊಂದು ದೇವಸ್ಥಾನಗಳ ಎದುರು ಶಾಮಿಯಾನ ಹಾಕಿ ನೆರಳಿನ ವ್ಯವಸ್ಥೆ ಮಾಡಿದ್ದರು. ಕೆಲವು ಕಡೆಗಳಲ್ಲಿ ಕುಡಿಯುವ ನೀರು ಕೊಡಲಾಯಿತು. ಚಂದ್ರಮೌಳೇಶ್ವರ ಮತ್ತು ನಂದೀಶ್ವರ ದೇವಸ್ಥಾನದಲ್ಲಿ ಅತಿಹೆಚ್ಚು ಭಕ್ತರು ನೆರೆಯುವುದರಿಂದ ಪೊಲೀಸರನ್ನು ನಿಯೋಜಿಸಲಾಗಿತ್ತು. ಪೊಲೀಸರು ಜನದಟ್ಟಣೆ ಮತ್ತು ವಾಹನ ದಟ್ಟಣೆ ನಿರ್ವಹಿಸುವ ಕಾರ್ಯ ಮಾಡಿದರು. ನಂದೀಶ್ವರ ದೇವಸ್ಥಾನಕ್ಕೆ ತೆರಳುವವರು ಮಂತ್ರಾಲಯ ಮಾರ್ಗದ ಹೆದ್ದಾರಿಯಲ್ಲೇ ವಾಹನ ನಿಲುಗಡೆ ಮಾಡಿ ಹೋಗಬೇಕಿತ್ತು.

ವಿವಿಧ ಬಡಾವಣೆಗಳಿಂದ ಜನರು ಗುಂಪುಗುಂಪಾಗಿ ಶಿವ ದೇವಸ್ಥಾನದತ್ತ ಧಾವಿಸುತ್ತಿರುವುದು ದಿನವಿಡೀ ಸಾಮಾನ್ಯ ನೋಟವಾಗಿತ್ತು. ಕುಟುಂಬದ ಸದಸ್ಯರೊಂದಿಗೆ ಕಾರು, ಬೈಕ್‌ ಮೂಲಕ ದೇವಸ್ಥಾನಕ್ಕೆ ತಲುಪಿದರು, ಸಮೀಪದ ಬಡಾವಣೆಗಳಿಂದ ಬರುವವರು ಪಾದಯಾತ್ರೆ ಮೂಲಕ ಬಂದು ಶಿವದರ್ಶನ ಪಡೆದರು. ದರ್ಶನದ ಬಳಿಕ ಭಕ್ತರಿಗೆ ಕೆಲವು ಕಡೆ ಅಲ್ಪೊಪಹಾರ ಹಣ್ಣಿನ ಮಿಶ್ರಣ ಹಾಗೂ ಇತರೆ ಪ್ರಸಾದ ಹಂಚಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.