ADVERTISEMENT

ಮಾನ್ವಿ: ಉದ್ಘಾಟನೆಯಾಗದ ಕಾಲೇಜು ಕಟ್ಟಡಗಳು

ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ತರಗತಿ ಕೊಠಡಿಗಳು, ಪ್ರಯೋಗಾಲಯ ನಿರ್ಮಾಣ

ಬಸವರಾಜ ಬೋಗಾವತಿ
Published 30 ಜನವರಿ 2022, 3:10 IST
Last Updated 30 ಜನವರಿ 2022, 3:10 IST
ಮಾನ್ವಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಘಾಟನೆಯಾಗದ ಹೆಚ್ಚುವರಿ ತರಗತಿಗಳ ಕಟ್ಟಡ
ಮಾನ್ವಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಘಾಟನೆಯಾಗದ ಹೆಚ್ಚುವರಿ ತರಗತಿಗಳ ಕಟ್ಟಡ   

ಮಾನ್ವಿ: ಪಟ್ಟಣದ ಬಾಷುಮಿಯಾ ಸಾಹುಕಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಕೊಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ 6 ಕಟ್ಟಡಗಳು ಉದ್ಘಾಟನೆ ಭಾಗ್ಯ ಕಾಣದಿರುವುದು ಸ್ಥಳೀಯರು ಹಾಗೂ ವಿದ್ಯಾರ್ಥಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

2016-17ನೇ ಸಾಲಿನಲ್ಲಿ ರೈಟ್ಸ್ ಸಂಸ್ಥೆ ವತಿಯಿಂದ ವಿಶೇಷ ಅಭಿವೃದ್ಧಿ ಯೋಜನೆ ಅಡಿ ₹1ಕೋಟಿ ವೆಚ್ಚದಲ್ಲಿ 5 ತರಗತಿ ಕೊಠಡಿಗಳು ಮತ್ತು ₹70 ಲಕ್ಷ ವೆಚ್ಚದಲ್ಲಿ 10 ಹೆಚ್ಚುವರಿ ತರಗತಿಗಳ ಕಟ್ಟಡ ನಿರ್ಮಾಣ ಪೂರ್ಣಗೊಂಡು 2 ವರ್ಷಗಳು ಗತಿಸಿವೆ.

ಕೆಆರ್‌ಐಡಿಎಲ್ ಸಂಸ್ಥೆ ವತಿಯಿಂದ ₹1 ಕೋಟಿ ವೆಚ್ಚದಲ್ಲಿ 6 ತರಗತಿ ಕೊಠಡಿಗಳ ಕಟ್ಟಡ ವರ್ಷದ ಹಿಂದೆ ಪೂರ್ಣಗೊಂಡಿದ್ದರೂ ಹಸ್ತಾಂತರಗೊಂಡಿಲ್ಲ. 2019-20ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಅನುದಾನದಲ್ಲಿ ₹96 ಲಕ್ಷ ವೆಚ್ಚದಲ್ಲಿ 6 ತರಗತಿ ಕೊಠಡಿಗಳು ಮತ್ತು ₹51 ಲಕ್ಷ ವೆಚ್ಚದಲ್ಲಿ ಸಭಾಂಗಣ ಕಟ್ಟಡ ಕಾಮಗಾರಿಗಳು ಪೂರ್ಣಗೊಂಡು 6 ತಿಂಗಳ ಹಿಂದೆ ಹಸ್ತಾಂತರಗೊಂಡಿವೆ.

ADVERTISEMENT

ಕಳೆದ ತಿಂಗಳು ₹1.15 ಕೋಟಿ ವೆಚ್ಚದಲ್ಲಿ ಪ್ರಯೋಗಾಲಯ ಮತ್ತು 2 ಹೆಚ್ಚುವರಿ ತರಗತಿ ಕೊಠಡಿಗಳ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಸದರಿ ಕಟ್ಟಡಗಳ ಉದ್ಘಾಟನೆ ವಿಳಂಬವಾಗಿರುವುದು ಸ್ಥಳೀಯರ ಅಚ್ಚರಿಗೆ ಕಾರಣವಾಗಿದೆ.

ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಕಾಲೇಜಿನಲ್ಲಿ ಬಿ.ಎ, ಬಿ.ಕಾಂ ಹಾಗೂ ಬಿ.ಎಸ್ಸಿ ಪದವಿ ತರಗತಿಗಳಲ್ಲಿ ಒಟ್ಟು 1,630 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಈ ಬಾರಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆದಿರುವ ಕಾರಣ
ಹಳೆಯ ಕಟ್ಟಡದಲ್ಲಿ ವಿದ್ಯಾರ್ಥಿಗಳಿಗೆ ಕೊಠಡಿಗಳ ಕೊರತೆ ಉಂಟಾಗಿದೆ.

ವಿಭಾಗವಾರು ಪ್ರತ್ಯೇಕ ತರಗತಿಗಳ ನಿರ್ವಹಣೆಗೆ ಸಮಸ್ಯೆಯಾಗಿದೆ. ಹೊಸ ಕಟ್ಟಡಗಳ ಉದ್ಘಾಟನೆಯಾದರೆ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ ಪದವಿ ತರಗತಿಗಳ ಪ್ರತ್ಯೇಕ ನಿರ್ವಹಣೆಗೆ ಸಾಧ್ಯ. ಕಾಲೇಜಿನ ಪ್ರಾಂಶುಪಾಲರು ಹಾಗೂ ಕಾಲೇಜು ಅಭಿವೃದ್ಧಿ ಮಂಡಳಿ ಪದಾಧಿಕಾರಿಗಳು ನೂತನ ಕಟ್ಟಡಗಳನ್ನು ಶೀಘ್ರ ಉದ್ಘಾಟನೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಮನವಿ
ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.